ವಿಧಾನಪರಿಷತ್‍ ಉಪಚುನಾವಣೆಗೆಯಲ್ಲಿ ಕಣಕ್ಕಿಳಿಯಲ್ಲ ಬಿಜೆಪಿ ಅಭ್ಯರ್ಥಿ

ಈ ಸುದ್ದಿಯನ್ನು ಶೇರ್ ಮಾಡಿ

bjp

ಬೆಂಗಳೂರು, ಆ.19- ಇದೇ 31ರಂದು ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸದೆ ತಟಸ್ಥವಾಗಿರಲು ಪ್ರತಿಪಕ್ಷ ಬಿಜೆಪಿ ತಿಳಿಸಿದೆ. ಸಂಖ್ಯಾಬಲದ ಕೊರತೆ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬದಲು ಚುನಾವಣೆಯಿಂದಲೇ ದೂರ ಉಳಿಯುವ ಮೂಲಕ ಮುಜುಗರವನ್ನು ತಪ್ಪಿಸಿಕೊಳ್ಳಲು ನಿನ್ನೆ ನಡೆದ ಕೋರ್‍ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಜೆಡಿಎಸ್ ಕೂಡ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದೆ. ಬಿಜೆಪಿ ಕೂಡ ಇದನ್ನೇ ಅನುಸರಿಸುತ್ತಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಎಂ.ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚು.
ಈಗಾಗಲೇ ಎಐಸಿಸಿ ಕೂಡ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಇದೇ 31ರಂದು ಉಪಚುನಾವಣೆ ನಡೆಯಲಿದ್ದು, ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಿದ್ದರೆ ಇಬ್ರಾಹಿಂ ವಿಧಾನಪರಿಷತ್‍ಗೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ವಿಧಾನಭೆಯಲ್ಲಿ ಪ್ರತಿಪಕ್ಷ ಬಿಜೆಪಿ 46 ಸದಸ್ಯರನ್ನು ಹೊಂದಿದೆ. ಆಡಳಿತಾರೂಢ ಕಾಂಗ್ರೆಸ್ 122 ಸದಸ್ಯರ ಜತೆಗೆ ಪಕ್ಷೇತರ ಬೆಂಬಲವೂ ಇದೆ. ಚುನಾವಣೆ ನಡೆದದ್ದೇ ಆದಲ್ಲಿ ಸಹಜವಾಗಿ ಕಾಂಗ್ರೆಸ್ ಅಭ್ಯರ್ಥಿ ನಿಸ್ಸಂದೇಹವಾಗಿ ಗೆಲ್ಲಿವುದು ಶತಸಿದ್ಧ. ಸೋಲುವುದು ಗೊತ್ತಿದ್ದೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬದಲು ಚುನಾವಣೆಯಿಂದಲೇ ದೂರ ಉಳಿಯುವ ಲೆಕ್ಕಾಚಾರ ಬಿಜೆಪಿಯದ್ದು, ಹೀಗಾಗಿ ಮೇಲ್ಮನೆ ಉಪಚುನಾವಣೆ ನಡೆಯುವುದೇ ಅನುಮಾನವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಇಬ್ರಾಹಿಂ ಮೇಲ್ಮನೆ ಪ್ರವೇಶ ಬಹುತೇಕ ಖಚಿತವಾಗಿದೆ.

ಹಾಲಿ ವಿಧಾನಪರಿಷತ್ ಸದಸ್ಯೆ ಹಾಗೂ ಮಾಜಿ ಉಪಸಭಾಪತಿಯಾಗಿದ್ದ ವಿಮಲಾಗೌಡ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದರು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದೆ. ಈಗಾಗಲೇ ಮೇಲ್ಮನೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಏಕೈಕ ದೊಡ್ಡಪಕ್ಷವಾಗಿ ಹೊರ ಹೊಮ್ಮಿದ್ದರೂ ಸಭಾಪತಿ ಸ್ಥಾನ ಪಡೆಯಬೇಕೆಂಬ ಬಹುದಿನಗಳ ಕನಸು ನನಸಾಗಿಲ್ಲ.  ಇಬ್ರಾಹಿಂ ಆಯ್ಕೆಯಾದರೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲ ಹೆಚ್ಚಳವಾಗಲಿದ್ದು, ಸರಳ ಬಹುಮತಕ್ಕೆ ಇನ್ನೂ ಕೆಲ ಸದಸ್ಯರ ಕೊರತೆ ಎದುರಾಗಲಿದೆ.

Facebook Comments

Sri Raghav

Admin