ಸ್ಪೇನ್ ದಾಳಿ : ಹತರಾದ ಮೂವರು ಉಗ್ರರ ಹೆಸರು ಬಹಿರಂಗ

ಈ ಸುದ್ದಿಯನ್ನು ಶೇರ್ ಮಾಡಿ

Attack

ಬಾರ್ಸಿಲೋನಾ, ಆ.19- ಸ್ಟೇನ್‍ನಲ್ಲಿ ನಡೆದ ಭಯೋತ್ಪಾದನೆ ದಾಳಿ ಪ್ರಕರಣದಲ್ಲಿ ಭದ್ರತಾಪಡೆಗಳಿಂದ ಹತರಾದ ಐವರು ಭಯೋತ್ಪಾದಕರಲ್ಲಿ ಮೊರೊಕ್ಕೊದ ಮೂವರು ಉಗ್ರರ ಹೆಸರುಗಳನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಕ್ಯಾಂಬ್ರಿಲ್ಸ್‍ನ ಸಾಗರತಟದ ರೆಸಾರ್ಟ್‍ನಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.  ಬಾರ್ಸಿಲೋನಾ ಮತ್ತು ಕ್ಯಾಂಬ್ರಿಲ್ಸ್ ಈ ಎರಡು ನಗರಗಳ ಪ್ರವಾಸಿ ಪ್ರದೇಶಗಳಲ್ಲಿ ವ್ಯಾನ್ ಮತ್ತು ಕಾರನ್ನು ರಭಸವಾಗಿ ನುಗ್ಗಿಸಿ 14 ಮಂದಿಯನ್ನು ಕೊಂದು 100ಕ್ಕೂ ಹೆಚ್ಚು ಜನರನ್ನು ಉಗ್ರರು ಗಾಯಗೊಳಿಸಿದ್ದರು.

ಅವಳಿ ದಾಳಿಯ ಸೂತ್ರಧಾರ ಮೌಸಾ ಔಕಬಿರ್(17), ಸೈದ್ ಅಲ್ಲಾ(18) ಮತ್ತು ಮಹಮದ್ ಹೈಚಾಮಿ(24)-ಈ ಮೂವರ ಹೆಸರನ್ನು ಕ್ಯಾಟಾಲೋನಿಯಾದ ಪ್ರಾದೇಶಿಕ ಪೊಲೀಸರು ಗುರುತಿಸಿದ್ದಾರೆ. ಪರಾರಿಯಾದ ಮತ್ತೊಬ್ಬ ಭಯೋತ್ಪಾದಕ ಅಬೌಯಾಕೌಬು (22) ಸೆರೆಗೆ ಮಾನವ ಬೇಟೆ ಮುಂದುವರಿದಿದೆ. ಇವರೆಲ್ಲರೂ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಸಿರಿಯಾದಲ್ಲಿ ನಡೆದ ವಾಯುದಾಳಿಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಆಚ್ಚರಿಯ ಸಂಗತಿ ಎಂದರೆ ಸಿರಿಯಾ ಕಾರ್ಯಾಚರಣೆಯಲ್ಲಿ ಸ್ಪೇನ್ ಯೋಧರು ಪಾಲ್ಗೊಂಡಿಲ್ಲ.

ಈ ಕೃತ್ಯದಲ್ಲಿ 12 ಉಗ್ರರು ಶಾಮೀಲಾಗಿರುವ ಶಂಕೆ ಇದ್ದು ಇವರಲ್ಲಿ ಐವರನ್ನು ಪೊಲೀಸರು ಹೊಡೆದುರುಳಿಸಿದ್ಧಾರೆ. ಉಳಿದವರ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.  ಈ ಭಯೋತ್ಪಾದಕರ ತಂಡವು ಸ್ಪೇನ್‍ನಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದರು ಎಂಬುದು ಈಗ ದೃಢಪಟ್ಟಿದೆ.

Facebook Comments

Sri Raghav

Admin