ಹೆಂಡದ ವಿಷಯಕ್ಕೆ ಬಿತ್ತು ಹೆಣ..! ಹಿರಿ ಮಗನ ಜೊತೆ ಸೇರಿ ಮಗನನ್ನು ಕೊಂದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Murder--00

ಬೆಂಗಳೂರು, ಆ.19-ಕುಡಿಯಲು ಹಣ ಕೊಡದಿದ್ದಾಗ ಚಾಕುವಿನಿಂದ ತಾಯಿಯನ್ನೇ ಇರಿಯಲು ಹೋದ ಮಗನನ್ನು ಅದೇ ಚಾಕು ಕಸಿದುಕೊಂಡ ತಾಯಿ ಹಾಗೂ ಅಣ್ಣನೇ ಸೇರಿ ಇರಿದು ಕೊಲೆ ಮಾಡಿರುವ ಘಟನೆ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಮೇಶ್ (22) ಎಂಬಾತನೇ ತನ್ನ ತಾಯಿ ಹಾಗೂ ಅಣ್ಣನಿಂದ ಕೊಲೆಯಾದ ದುರ್ದೈವಿ. ರಮೇಶ್ ಕೆಲಸವಿಲ್ಲದೆ ಅಲೆಯುತ್ತಿದ್ದು, ಮದ್ಯ ವ್ಯಸನಿಯಾಗಿದ್ದನು ಎನ್ನಲಾಗಿದೆ. ರಾತ್ರಿ ತಾಯಿಯೊಂದಿಗೆ ಹಣಕ್ಕಾಗಿ ಜಗಳ ಮಾಡಿಕೊಂಡು ಹಣ ಪಡೆದು ಹೋದವನು ಬೆಳಗಿನ ಜಾವ 5 ಗಂಟೆಯಲ್ಲಿ ಕುಡಿದ ಮತ್ತಿನಲ್ಲೇ ಮನೆಗೆ ಬಂದಿದ್ದಾನೆ.

ಬಾಗಿಲು ತೆಗೆದ ತಾಯಿಯೊಂದಿಗೆ ಮತ್ತೆ ರಮೇಶ್ ಹಣಕ್ಕಾಗಿ ಒತ್ತಾಯಿಸಿದ್ದಾನೆ. ಹಣ ಕೊಡುವುದಿಲ್ಲ ಎಂದಾಗ, ತಾಯಿಯೊಂದಿಗೆ ಜಗಳವಾಡಿ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಇರಿಯಲು ಮುಂದಾಗಿದ್ದಾನೆ. ತಾಯಿ-ಮಗನ ಜಗಳದಿಂದ ನಿದ್ದೆಯಲ್ಲಿದ್ದ ಅಣ್ಣ ಎಚ್ಚರಗೊಂಡು ನೋಡಿದ್ದಾನೆ. ರಮೇಶ್‍ನ ಕೈಯಲ್ಲಿ ಚಾಕು ಇರುವುದು ಗಮನಿಸಿ ಅದನ್ನು ಕಸಿದು ಕೊಳ್ಳಲು ತಾಯಿ ಯತ್ನಿಸುತ್ತಿದ್ದಾಗ ಅಣ್ಣನೂ ನೆರವಿಗೆ ಹೋಗಿದ್ದಾನೆ. ರಮೇಶನ ವರ್ತನೆಯಿಂದ ರೋಸಿ ಹೋಗಿದ್ದ ತಾಯಿ ಚಾಕು ಕಸಿದುಕೊಂಡು ಆತನಿಗೆ ಇರಿದಿದ್ದಾರೆ.

ಇರಿತದಿಂದ ಗಂಭೀರ ಗಾಯಗೊಂಡ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಜೆ.ಜೆ.ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ರಮೇಶ್‍ನ ತಾಯಿ ಮಲ್ಲಮ್ಮ ಮತ್ತು ಅಣ್ಣ ನಾಗರಾಜನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin