ಇದೇ ಮೊದಲ ಬಾರಿಗೆ ದಸರಾ ಖರ್ಚು-ವೆಚ್ಚ ಲೆಕ್ಕ ಇಡಲು ಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

Dasara

ಮೈಸೂರು, ಆ.20-ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಖರ್ಚು-ವೆಚ್ಚಗಳ ಬಗ್ಗೆ ನಿಗಾ ಇಡಲು ಲೆಕ್ಕ ಪರಿಶೋಧನಾ ಸಮಿತಿಯನ್ನು ಜಿಲ್ಲಾಡಳಿತ ರಚಿಸಿದೆ. ದಸರಾ ಮಹೋತ್ಸವಕ್ಕಾಗಿ 16 ದಸರಾ ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳಿಗೆ ನೀಡಲಾಗುವ ಹಣದ ವೆಚ್ಚದ ಬಗ್ಗೆ ಮೇಲ್ವಿಚಾರಣೆ ನಡೆಸಲು ಪ್ರತಿಯೊಂದು ಸಮಿತಿಗೂ ಲೆಕ್ಕ ಪರಿಶೋಧನಾ ಸಮಿತಿಯನ್ನು ಪ್ರತ್ಯೇಕವಾಗಿ ರಚಿಸಲಾಗಿದೆ ಎಂದು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರಂದೀಪ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಯಂ ಆಡಿಟರ್ ಇಲ್ಲದ ಕಾರಣ ಜಿಪಂ ಮುಖ್ಯ ಲೆಕ್ಕ ಪರಿಶೋಧಕರನ್ನು ದಸರಾ ಆಡಿಟ್ ಆಫೀಸರನ್ನಾಗಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಬಾರಿಯ ದಸರಾ ಮಹೋತ್ಸವದ ಎಲ್ಲ ಕಡತಗಳು, ಬಿಲ್‍ಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಇಡಲಾಗುವುದು ಅನುಮಾನ ಬಂದಲ್ಲಿ ಯಾರು ಬೇಕಾದರೂ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ನಾಗರಾಜ್‍ಮೂರ್ತಿ ಅವರನ್ನು ದಸರಾ ಆಡಿಟ್ ಆಫೀಸರ್ ಆಗಿ ನೇಮಿಸಲಾಗಿದೆ. ಅವರನ್ನು ಮೊಬೈಲ್ ಸಂಖ್ಯೆ 9480873003 ಸಂಪರ್ಕಿಸಬಹುದು ಎಂದು ಹೇಳಿದರು.

ಜಂಬೂ ಸವಾರಿಯಲ್ಲಿ ಅಕ್ರಮ ನುಸುಳುವಿಕೆ ತಡೆಗಟ್ಟಲು ಬಾರ್‍ಕೋಡಿಂಗ್ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ದಸರಾ ಜಂಬೂಸವಾರಿ ಮೆರವಣಿಗೆ ವೇಳೆ ಪಾಸ್ ಇಲ್ಲದೆ ಅಕ್ರಮವಾಗಿ ಹೆಚ್ಚು ಮಂದಿ ನುಸುಳುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಬಾರಿ ಬಾರ್‍ಕೋಡಿಂಗ್ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬುಕ್‍ಮೈ ಷೋ ಎಂಬ ಆನ್‍ಲೈನ್ ಸಂಸ್ಥೆಯೊಂದಿಗೆ ಬಾರ್ ಕೋಡಿಂಗ್ ಪಾಸ್ ಸಿದ್ದಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ನಕಲಿ ಪಾಸುಗಳ ಹಾವಳಿಯನ್ನು ತಪ್ಪಿಸಬಹುದು ಎಂದು ರಂದೀಪ್ ತಿಳಿಸಿದರು. ಇದೇ ವೇಳೆ ದಸರಾ ಸಂದರ್ಭದಲ್ಲಿ ಅರಮನೆ, ಪಂಜಿನ ಕವಾಯತು ಮೈದಾನದಲ್ಲಿ ಉಂಟಾಗುವ ಸಮಸ್ಯೆಗಳು, ಪಾರ್ಕಿಂಗ್ ಸಮಸ್ಯೆ, ಯುವ ದಸರಾ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆಯೂ ಪತ್ರಕರ್ತರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

Facebook Comments

Sri Raghav

Admin