ನಾಳೆ ಎಐಎಡಿಎಂಕೆಯ ಎರಡು ಬಣಗಳ ವಿಲೀನ ಬಹುತೇಕ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

AAIADMa--01

ಚೆನ್ನೈ, ಆ.20- ಕಳೆದ ಹಲವು ದಿನಗಳಿಂದ ಹಗ್ಗ ಜಗ್ಗಾಟ ನಡೆಯುತ್ತಿದ್ದ ಎಐಎಡಿಎಂಕೆಯ ಎರಡು ಬಣಗಳ ವಿಲೀನ ಬಹುತೇಕ ನಾಳೆ ನಡೆಯುವ ಸಾಧ್ಯತೆ ನಿಚ್ಛಳವಾಗಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಪಕ್ಷದಿಂದ ಸಿಡಿದೆದ್ದಿದ್ದ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಬಣಗಳು ನಾಳೆ ಅಧಿಕೃತವಾಗಿ ವಿಲೀನವಾಗಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೂರು ದಿನಗಳ ಹಿಂದೆ ವಿಲೀನ ಪ್ರಕ್ರಿಯೆ ಕೆಲ ಕಾರಣಗಳಿಂದ ನೆನಗುದಿಗೆ ಬಿದ್ದಿತ್ತು. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಲಗೈ ಭಂಟ ಒ.ಪನ್ನೀರ್ ಸೆಲ್ವಂಗೆ ಮುಖ್ಯಮಂತ್ರಿ ಪಟ್ಟ ನೀಡಬೇಕೆಂಬ ಬೇಡಿಕೆಯನ್ನು ಮುಂದಿಡಲಾಗಿತ್ತು.
ಆದರೆ ಇದಕ್ಕೆ ಪಳನಿಸ್ವಾಮಿ ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿಲೀನ ಪ್ರಕ್ರಿಯೆ ವಿಳಂಬವಾಗಿತ್ತು.

ಇದೀಗ ಎರಡೂ ಬಣಗಳು ಪರಸ್ಪರ ಒಪ್ಪಂದಕ್ಕೆ ಸಮ್ಮತಿಸಿರುವುದರಿಂದ ನಾಳೆ ವಿಧ್ಯುಕ್ತವಾಗಿ ಉಭಯ ನಾಯಕರು ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಪನ್ನೀರ್ ಸೆಲ್ವಂಗೆ ಉಪ ಮುಖ್ಯಮಂತ್ರಿ ಜತೆಗೆ ಹಣಕಾಸು ಖಾತೆಯನ್ನು ನೀಡಲು ಪಳನಿ ಸ್ವಾಮಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಕೆಲವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಂಭವವೂ ಇದೆ. ಉಭಯ ಬಣಗಳ ವಿಲೀನ ಪ್ರಕ್ರಿಯೆಗೆ ಕೆಲವು ನಾಯಕರು ಸಹಿ ಹಾಕಿದ್ದು ಲೋಕಸಭೆಯ ಉಪ ಸ್ಪೀಕರ್ ತಂಬುದೊರೈ ಸಹಿ ಹಾಕುವುದಷ್ಟೇ ಬಾಕಿ ಇದೆ. ಈಗಾಗಲೇ ತಂಬುದೊರೈ ಮನವೊಲಿಕೆಯ ಪ್ರಯತ್ನವೂ ಸಾಗಿದೆ.

ಕೆಲವೇ ದಿನಗಳಲ್ಲಿ ಸಿಹಿ ಸುದ್ದಿಯನ್ನು ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಪನ್ನೀರ್ ಸೆಲ್ವಂ ಮತ್ತು ಪಳನಿ ಸ್ವಾಮಿ ಇತ್ತೀಚೆಗಷ್ಟೇ ಹೇಳಿದ್ದರು.
ಇದರಂತೆ ಹಲವು ದಿನಗಳಿಂದ ತೂಗುಯ್ಯಾಲೆಯಲ್ಲಿದ್ದ ವಿಲೀನ ಪ್ರಕ್ರಿಯೆ ಬಹುತೇಕ ನಾಳೆ ಮುಗಿಯಲಿದೆ. ಮೂಲಗಳ ಪ್ರಕಾರ ಪ್ರಕ್ರಿಯೆ ಮುಗಿದ ನಂತರ ಎಐಡಿಎಂಕೆ ಎನ್‍ಡಿಎ ಮೈತ್ರಿ ಕೂಟಕ್ಕೆ ಸೇರ್ಪಡೆಯಾಗುವ ಸಂಭವವಿದೆ.

Facebook Comments

Sri Raghav

Admin