ಫೈವ್ ಸ್ಟಾರ್ ಹೊಟೇಲ್‍ನಲ್ಲಿ ಉಳಿದುಕೊಳ್ಳುವ ಸಚಿವರಿಗೆ ಮೋದಿ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

Modi-Warning--01

ನವದೆಹಲಿ, ಆ.20- ಸಚಿವ ಸಂಪುಟದ ಸಹೋದ್ಯೋಗಿಗಳು ಯಾವುದೇ ಕಾರಣಕ್ಕೂ ಅಧಿಕೃತ ಕಾರ್ಯಕ್ರಮ ಹೊರತುಪಡಿಸಿ ಪಂಚತಾರಾ ಹೊಟೇಲ್‍ನಲ್ಲಿ ಉಳಿದುಕೊಳ್ಳುವುದು ಇಲ್ಲವೆ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದೆಂದು ಪ್ರಧಾನಿ ನರೇಂದ್ರ ಮೋದಿ ಸಚಿವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ನಮ್ಮ ನಡವಳಿಕೆಗಳನ್ನು ಪ್ರತಿಯೊಬ್ಬರು ಗಮನಿಸುತ್ತಾರೆ. ಕೆಲ ಸಚಿವರು ಅನಗತ್ಯವಾಗಿ ಪಂಚತಾರಾ ಹೊಟೇಲ್ ಹಾಗೂ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಖುದ್ದು ಪ್ರಧಾನಿಯೇ ಈ ವಿಷಯವನ್ನು ಪ್ರಸ್ತಾಪಿಸಿ ಯಾವ ಕಾರಣಕ್ಕಾಗಿ ಸಚಿವರು ಪದೇ ಪದೇ ಫೈವ್ ಸ್ಟಾರ್ ಹೊಟೇಲ್‍ನಲ್ಲಿ ಉಳಿದುಕೊಳ್ಳುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು. ನನಗೆ ಕೆಲವು ಸಚಿವರ ನಡವಳಿಕೆಗಳು ಇಷ್ಟವಾಗುತ್ತಿಲ್ಲ. ಅಧಿಕೃತ ಕಾರ್ಯಕ್ರಮ ಹೊರತುಪಡಿಸಿ ಪಂಚತಾರಾ ಹೊಟೇಲ್‍ನಲ್ಲಿ ಉಳಿಯಬಾರದು ಎಂದು ನಾನು ಸರ್ಕಾರ ರಚನೆಯಾದ ಪ್ರಾರಂಭದಲ್ಲೇ ಸೂಚಿಸಿದ್ದೆ. ಆದರೆ ಕೆಲವರು ಇದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ತಮ್ಮ ಸಹೋದ್ಯೋಗಿಗಳ ವಿರುದ್ಧ ಚಾಟಿ ಬೀಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಕೆಲ ಸಚಿವರು ಮತ್ತು ಸಂಸದರು ಸಂಸತ್ತಿನ ಉಭಯ ಸದನಗಳ ಕಲಾಪ ನಡೆಯುತ್ತಿರುವ ವೇಳೆ ಚಕ್ಕರ್ ಹೊಡೆಯುತ್ತಿರುವುದಕ್ಕೆ ಮೋದಿ ಬಳಿ ಅಸಮಾಧಾನವನ್ನು ಹೊರ ಹಾಕಿದ್ದರು.  ಇದಕ್ಕೂ ತೀವ್ರ ಕಿಡಿಕಾರಿರುವ ಮೋದಿ ಕೆಲವರು ಸದನಕ್ಕೆ ಬಾರದೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇಂತಹವರಿಗೆ ಯಾವ ಸಂದರ್ಭದಲ್ಲಿ ನಾನು ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ ಎಂದು ಎಚ್ಚರಿಸಿದ್ದಾರೆ. ಸರ್ಕಾರ ನೀಡುವ ಸವಲತ್ತುಗಳನ್ನು ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳಬಾರದು ಎಂಬುದು ನನ್ನ ಧ್ಯೇಯೋದ್ದೇಶ. ನೀವು ಸರ್ಕಾರಿ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲೂ ವಾಹನಗಳು ಇಲ್ಲವೇ ನಿಮ್ಮ ಸಂಬಂಧಿಕರಿಗಾಗಿ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ.

ನನಗೆ ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಇರಬೇಕು ಎಂಬುದು ನನ್ನ ಗುರಿಯಾಗಿದೆ. ಇದಕ್ಕೆ ನಾನೊಬ್ಬನೇ ಹೋರಾಟ ಮಾಡಿದರೆ ಸಾಲದು. ನನ್ನೊಂದಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ. 2019ರಲ್ಲಿ ಮತ್ತೆ ಮಹಾ ಚುನಾವಣೆ ಬರಲಿದೆ. ಈವರೆಗೂ ನನ್ನ ಸರ್ಕಾರದ ಬಗ್ಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಹಗರಣ ಮುಕ್ತವಾಗಿ ಆಡಳಿತ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದೇನೆ. ದೇಶದ ಜನತೆಯೂ ನಮ್ಮ ಸರ್ಕಾರದ ಕಾರ್ಯಕ್ರಮಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭೆಯ ಫಲಿತಾಂಶವೇ ಸಾಕ್ಷಿ. ನನಗೆ ಎಲ್ಲರೂ ಕೂಡ ಸಹಕಾರ ನೀಡಬೇಕು. ವಿವಾದ, ಭ್ರಷ್ಟಾಚಾರದಿಂದ ದೂರ ಇರಿ ಎಂದು ಕಿವಿಮಾತು ಹೇಳಿದ್ದಾರೆ.

Facebook Comments

Sri Raghav

Admin