ಬಿಜೆಪಿ ಎಲೆಕ್ಷನ್ ತಂತ್ರ : ಪ್ರತಿ ವಿಧಾನಸಭೆ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

BJP--001

ಬೆಂಗಳೂರು, ಆ.20- ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ತೆಗೆದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು , ಅದರ ಮೊದಲ ಭಾಗವಾಗಿ ಪ್ರತಿ ವಿಧಾನಸಭೆ ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗುತ್ತಿದೆ.
ಹೌದು, ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಈಗಿನಿಂದಲೇ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದು, ಹಂತ ಹಂತವಾಗಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಅದರ ಭಾಗವಾಗಿ ಇದೀಗ ಒಂದೊಂದು ವಿಧಾನಸಭೆ ಕ್ಷೇತ್ರದ ಹೊಣೆ ಒಬ್ಬಬ್ಬ ಬಿಜೆಪಿ ಶಾಸಕನ ಹೆಗಲಿಗೆ ನೀಡಲಾಗುತ್ತಿದ್ದು, ಶಾ ನೀಡಿದ ಸೂಚನೆ ಪಾಲಿಸುವ ಮೂಲಕ ಚುನಾವಣಾ ರಣತಂತ್ರದ ವಿಚಾರವನ್ನು ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಸಂಪೂರ್ಣವಾಗಿ ಹೈಕಮಾಂಡ್‍ಗೆ ಒಪ್ಪಿಸಿದೆ.

ಅಮಿತ್ ಶಾ ಸೂಚನೆ ಪ್ರಕಾರ ಒಬ್ಬ ಬಿಜೆಪಿ ಶಾಸಕ ಒಂದು ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ಹೊರಬೇಕು. ಒಬ್ಬ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೂಡ ಒಂದು ವಿಧಾನಸಭಾ ಕ್ಷೇತ್ರದ ಹೊಣೆ ನಿಭಾಯಿಸಬೇಕು. ಒಬ್ಬ ಬಿಜೆಪಿ ಸಂಸದ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ಹಾಗು ಒಬ್ಬ ಬಿಜೆಪಿ ಕೋರ್ ಕಮಿಟಿ ಸದಸ್ಯ ಮೂರು ಜಿಲ್ಲೆಗಳ ಜವಾಬ್ದಾರಿ ಹೊರಬೇಕಾಗಿದೆ. ಸದ್ಯದಲ್ಲೇ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಂತಿಮಗೊಳಿಸಲಿದ್ದಾರೆ.

ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಅಮಿತ್ ಶಾ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಉಸ್ತುವಾರಿ ನೇಮಕಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು ಈ ಕುರಿತ ಮಾಹಿತಿಯನ್ನು ಹೈಕಮಾಂಡ್‍ಗೆ ಕಳುಹಿಸಲಿದೆ. ಅಲ್ಲದೆ ಶಾಸಕರಿಗೆ ಮುಂದಿನ ಬಾರಿ ಅವರದ್ದೇ ಕ್ಷೇತ್ರದಲ್ಲಿ ಟಿಕೆಟ್ ಸಿಗುತ್ತದೆ ಎಂದು ಹೇಳುವ ಹಾಗಿಲ್ಲ. ಚುನಾವಣೆ ಹಿನ್ನಲೆ ಜವಾಬ್ದಾರಿ ವಹಿಸಿಕೊಂಡಿರುವ ವಿಧಾನಸಭಾ ಕ್ಷೇತ್ರದಿಂದಲೂ ಟಿಕೆಟ್ ನೀಡಬಹುದು. ಹೀಗಾಗಿ ಜವಾಬ್ದಾರಿ ವಹಿಸಿಕೊಂಡಿರುವ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಪಕ್ಷ ಬಲಪಡಿಸಬೇಕು ಎಂದು ಅಮಿತ್ ಶಾ ಸೂಚನೆ ನೀಡಿದ್ದು, ಟಿಕೆಟ್ ಆಕಾಂಕ್ಷಿಗಳಲ್ಲಿ ಇದೀಗ ತಲ್ಲಣ ಸೃಷ್ಠಿಸಿದೆ.

ಎಲ್ಲಾ ಹಾಲಿ ಶಾಸಕರಿಗೂ ಟಿಕೆಟ್ ಸಿಗಲ್ಲ ಎಂದು ಈಗಾಗಲೇ ಅಮಿತ್ ಶಾ ಸ್ಪಷ್ಟಪಡಿಸಿರುವುದರಿಂದ ಉಸ್ತುವಾರಿ ವಹಿಸಿಕೊಂಡ ಕ್ಷೇತ್ರಗಳಲ್ಲಿ ಹೆಚ್ಚಿನ ಶ್ರಮಹಾಕಿ ಪಕ್ಷ ಸಂಘಟಿಸಿ ಹಾಲಿ ಶಾಸಕರು ಟಿಕೆಟ್ ಗಿಟ್ಟಿಸಿಕೊಳ್ಳಬೇಕಿದೆ.

Facebook Comments

Sri Raghav

Admin