ಸಿದ್ದರಾಮಯ್ಯ ಅಧಿಕಾರ ದುರುಪಯೋಗದ ಪ್ರತಿಫಲ ಅನುಭವಿಸುತ್ತಾರೆ : ಡಿವಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

Sadanandagowda--01

ಬೆಂಗಳೂರು, ಆ.20- ಅಧಿಕಾರ ದುರುಪಯೋಗಕ್ಕೂ ಇತಿಮಿತಿ ಇರುತ್ತದೆ. ಇದು ಅತಿಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಇನ್ಯಾರೇ ಆಗಲೀ ಇದರ ಪ್ರತಿಫಲ ಅನುಭವಿಸುತ್ತಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಎಚ್ಚರಿಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಯಾರೊಬ್ಬರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡ ನಿದರ್ಶನಗಳಿಲ್ಲ. ರಾಜಕೀಯ ಹಿತಾಸಕ್ತಿ, ಇಲ್ಲವೇ ಲಾಭಕ್ಕೂ ಇತಿಮಿತಿ ಇರುತ್ತದೆ. ಅದನ್ನು ಮೀರಿದರೆ ಮುಂದೊಂದು ದಿನ ನಮಗೆ ತಿರುಗುಬಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ಬಜೆಟ್, ಉಪಮುಖ್ಯಮಂತ್ರಿ, ವಿವಿಧ ಸಚಿವ ಸ್ಥಾನ, ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಾಡಿರುವ ಏಕೈಕ ಸಾಧನೆ ಎಂದರೆ ತನ್ನ ರಾಜಕೀಯ ವಿರೋಧಿಗಳನ್ನು ಸೆದೆ ಬಡಿಯಲು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಇತಿಹಾಸದಲ್ಲೇ ಇದೇ ಮೊದಲು ಎಂದು ವಾಗ್ದಾಳಿ ನಡೆಸಿದರು. ಅವರ ರಾಜಕೀಯ ಸಾಧನೆ ಏನೆಂದು ಯಾರಾದರೂ ಕೇಳಿದರೆ ತನ್ನ ವಿರೋಧಿಗಳನ್ನು ಹಣಿಯಲು ಎಸಿಬಿ, ಎಸ್‍ಐಟಿ, ಸಿಐಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡ ಅಪಕೀರ್ತಿ ಸಲ್ಲುತ್ತದೆ. ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕಿಯಾಗಿ ಉಳಿಯಲಿದೆ ಎಂದು ಹರಿಯಾಹ್ದರು.

ಎಸಿಬಿಯನ್ನು ದುರುಪಯೋಗ ಪಡಿಸಿಕೊಂಡು ಮಾಜಿ ಮುಖ್ಯಮಂತ್ರಿ ಹಾಗೂ ನಮ್ಮ ಪಕ್ಷದ ನಾಯಕರಾದ ಯಡಿಯೂರಪ್ಪ ವಿರುದ್ಧ ಎಫ್‍ಐಆರ್ ದಾಖಲಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವುದು ಸ್ವತಃ ಅಧಿಕಾರಿಯಿಂದಲೇ ಬಹಿರಂಗವಾಗಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆನು ಬೇಕು ಎಂದು ಪ್ರಶ್ನಿಸಿದರು.

ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕರ್ನಾಟಕದ ಮರ್ಯಾದೆ ಹರಾಜಾಗಿದೆ. ಅಧಿಕಾರ ಯಾರೊಬ್ಬರಿಗೂ ಶಾಶ್ವತ ಅಲ್ಲ ಎಂಬುದನ್ನು ಸಿದ್ದರಾಮಯ್ಯ ತಿಳಿಯಬೇಕು. ಇದೇ ದ್ವೇಷ ರಾಜಕಾರಣ ಮುಂದುವರೆಸಿದರೆ ಒಂದಲ್ಲೊಂದು ದಿನ ಇದು ನಿಮಗೆ ತಿರುಗುಬಾಣವಾಗುತ್ತದೆ ಎಂದು ಡಿವಿಎಸ್ ಗುಡುಗಿದ್ದಾರೆ.

ಸಗಣಿ-ಮಣ್ಣಿನ ಗಣಪತಿ ಉಪಯೋಗಿಸಿ:

ಇದೇ ವೇಳೆ ಮುಂಬರುವ ಗಣಪತಿ ಹಬ್ಬದ ವೇಳೆ ಸಾರ್ವಜನಿಕರು ರಾಸಾಯನಿಕ ಮಿಶ್ರಿತ, ಪ್ಲ್ಯಾಸ್ಟಿಕ್, ಬಣ್ಣಮಿಶ್ರಿತ ಗಣಪತಿ ಮೂರ್ತಿ ಬಳಸದೆ, ಪರಿಸರಕ್ಕೆ ಹಾನಿಯಾಗದ ಸಗಣಿ ಮತ್ತು ಮಣ್ಣಿನ ಗಣಪತಿ ವಿಗ್ರಹಗಳನ್ನು ಬಳಸಬೇಕೆಂದು ಸಾರ್ವಜನಿಕರಲ್ಲಿ ಸದಾನಂದಗೌಡ ಅವರು ಮನವಿ ಮಾಡಿದ್ದಾರೆ.
ಸಮರ್ಪಣ ಸೇವಾ ಸಂಸ್ಥೆ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಸದಸ್ಯಕ್ಕೆ 500ರಿಂದ 1000 ಮಣ್ಣಿನ ಮತ್ತು ಸಗಣಿಯ ಗಣಪತಿ ವಿಗ್ರಹಗಳನ್ನು ಮಾಡಿರುವುದು ದೇಶದಕ್ಕೆ ಮಾದರಿಯಾಗಿದೆ.

ಇಂತಹ ವಿಗ್ರಹಗಳನ್ನು ಬಳಸುವುದರಿಂದ ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ನಾವು ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು. ಸಗಣಿ ಮತ್ತು ಮಣ್ಣಿನ ವಿಗ್ರಹಗಳಲ್ಲಿ ಒಂದು ಬೆಳ್ಳಿ ಹಾಗೂ ನಾಲ್ಕು ಬಂಗಾರದ ನಾಣ್ಯಗಳನ್ನು ಇಡಲಾಗಿರುತ್ತದೆ. ಇದು ಯಾರಿಗೆ ಸಿಗುತ್ತದೋ ಅವರ ಕುಟುಂಬಕ್ಕೆ ಯಶಸ್ಸು ಲಭ್ಯವಾಗಲಿದೆ. ಸಾರ್ವಜನಿಕರು ಇಂತಹ ವಿಗ್ರಹಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ ಮೂಲಕ ಪರಿಸರಕ್ಕೆ ಉಂಟಾಗುವ ಹಾನಿಯನ್ನು ತಡೆಯಬೇಕೆಂದು ಮನವಿ ಮಾಡಿದರು.

Facebook Comments

Sri Raghav

Admin