ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಬಿಜೆಪಿ, ಭಾರಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BJP--Protest--01

ಬೆಂಗಳೂರು, ಆ.20- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಇಂದು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಕೆಂಡ ಕಾರಿದರು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದೆ ಶೋಭಾಕರಂದ್ಲಾಜೆ, ಮಾಜಿ ಸಚಿವರಾದ ವಿ.ಸೋಮಣ್ಣ, ಕಟ್ಟಾಸುಬ್ರಹ್ಮಣ್ಯನಾಯ್ಡು ಸೇರಿದಂತೆ ಬಿಬಿಎಂಪಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರ ಎಸಿಬಿಯನ್ನು ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷ ನಾಯಕರ ವಿರುದ್ಧ ಆಧಾರ ರಹಿತ ಮೊಕದ್ದಮೆಗಳನ್ನು ದಾಖಲಿಸುತ್ತಿದೆ. ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.ಬಿಜೆಪಿ ಮುಖಂಡ ಆರ್.ಅಶೋಕ್ ಮಾತನಾಡಿ, ರಾಜ್ಯ ಸರ್ಕಾರ ಪ್ರತಿಪಕ್ಷಗಳ ನಾಯಕರ ಬಾಯಿಮುಚ್ಚಿಸಲು ಎಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾಬೀತಾಗಿದೆ. ಸ್ವತಃ ಕೆಐಎಡಿಬಿ ಅಧಿಕಾರಿಯೇ ನನಗೆ ಒತ್ತಡ ಹಾಕಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇಕೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಯಡಿಯೂರಪ್ಪ ವಿರುದ್ಧ ಸುಳ್ಳು ಸಾಕ್ಷಿ ಹೇಳದಿದ್ದರೆ ನಿನ್ನೆ ವಿರುದ್ಧವೇ ದೂರು ದಾಖಲಿಸುತ್ತೇವೆ ಎಂದು ಎಸಿಬಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಇಲ್ಲದಿದ್ದರೆ ಮುಂಬಡ್ತಿ ಕೊಡುವುದಿಲ್ಲ ಎಂದು ಬ್ಲಾಕ್‍ಮೇಲ್ ಮಾಡಲಾಗಿದೆ. ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಯಾವುದೇ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು ಸೇರಿದಂತೆ ರಾಜಕೀಯ ಎದುರಾಳಿಗಳ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಂಡ ನಿದರ್ಶನವನ್ನು ನಾವು ಕಂಡಿರಲಿಲ್ಲ. ಸಿದ್ದರಾಮಯ್ಯ ಇತಿಹಾಸದಲ್ಲಿ ಶಾಶ್ವತವಾಗಿ ಕಪ್ಪು ಚುಕ್ಕಿಯಾಗಿ ಉಳಿಯಲಿದ್ದಾರೆ ಎಂದು ಕಿಡಿಕಾರಿದರು.

ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ಎಸಿಬಿ ರಚನೆ ಮಾಡಿದಾಗಲೇ ನಾವು ವಿಧಾನಮಂಡಲದ ಕಲಾಪಗಳಲ್ಲಿ ಪ್ರತಿಭಟನೆ ನಡೆಸಿದ್ದೆವು. ಸರ್ಕಾರದ ವಿರುದ್ಧ ದನಿ ಎತ್ತಿದವರನ್ನು ಅಡಗಿಸಲು ಎಸಿಬಿ ದುರ್ಬಳಕೆಯಾಗಲಿದೆ ಎಂಬ ಅನುಮಾನ ಅಂದೇ ವ್ಯಕ್ತವಾಗಿತ್ತು. ಇದೀಗ ಯಡಿಯೂರಪ್ಪ ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಆರೋಪಿಸಿದರು.

ಸಿದ್ದು ವಿರುದ್ಧ ಎಫ್‍ಐಆರ್ ದಾಖಲಿಸಲಿ:

ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಮೊಟ್ಟಮೊದಲು ಎಸಿಬಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ಎಫ್‍ಐಆರ್ ಹಾಕಿ ವಿಚಾರಣೆ ನಡೆಸಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರ ವಿರುದ್ಧ ಎಸಿಬಿಯಲ್ಲಿ 20ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಅನೇಕ ತಿಂಗಳು ಕಳೆದರೂ ಅಧಿಕಾರಿಗಳು ಇದರ ಬಗ್ಗೆ ಒಂದೇ ಒಂದು ನೋಟಿಸ್ ನೀಡುವುದಾಗಲಿ ಇಲ್ಲವೇ ಎಫ್‍ಐಆರ್ ದಾಖಲಿಸಿಲ್ಲ. ಇದು ಎಸಿಬಿ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ನಿದರ್ಶನ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಶಾಶ್ವತವಾಗಿ ಇರವುದಿಲ್ಲ. ಅಧಿಕಾರಿಗಳು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಮುಂದೆ ಬರುವ ಸರ್ಕಾರಗಳಿಗೆ ನೀವು ಕೆಂಗಣ್ಣಿಗೆ ಗುರಿಯಾದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು. ಪಕ್ಷದ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ರಾಜ್ಯ ಸರ್ಕಾರ ಎಸಿಬಿ ದುರುಪಯೋಗ ಪಡಿಸಿಕೊಂಡು ಬಿಜೆಪಿ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸುತ್ತಿದೆ. ಇಂತಹ ಸಾವಿರ ದೂರುಗಳು ದಾಖಲಾದರೂ ಪಕ್ಷ ಹೆದರುವುದಿಲ್ಲ. ನೀವು ಎಷ್ಟೇ ಎಫ್‍ಐಆರ್ ಹಾಕಿದರೂ ಎದುರಿಸಲು ಸಿದ್ದ ಎಂದು ತಿರುಗೇಟು ನೀಡಿದರು.

Facebook Comments

Sri Raghav

Admin