ಹಳಿ ನಿರ್ವಹಣೆ ವೈಫಲ್ಯವೇ ಉತ್ಕಾಲ್ ಎಕ್ಸ್ ಪ್ರೆಸ್ ದುರಂತಕ್ಕೆ ಕಾರಣ

ಈ ಸುದ್ದಿಯನ್ನು ಶೇರ್ ಮಾಡಿ

Trail-Acci

ನವದೆಹಲಿ, ಆ.20- ಇಪ್ಪತ್ತಮೂರು ಮಂದಿ ಮೃತಪಟ್ಟು, 70ಕ್ಕೂ ಹೆಚ್ಚು ಜನ ಗಾಯಗೊಂಡ ಪುರಿ-ಹರಿದ್ವಾರ್-ಕಾಳಿಂಗ ಮಾರ್ಗದ ಉತ್ಕಾಲ್ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿದ ದುರಂತದ ಬಗ್ಗೆ ತನಿಖೆ ಚುರುಕುಗೊಂಡಿದೆ. ರೈಲು ಹಳಿ ತಪ್ಪಲು ಉಗ್ರರ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿರುವಾಗಲೇ, ಟ್ರ್ಯಾಕ್(ಹಳಿ) ನಿರ್ವಹಣೆಯಲ್ಲಿ ಸಿಬ್ಬಂದಿ ತೋರಿದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬುದು ಇಂದು ಬೆಳಗ್ಗೆ ನಡೆದ ತನಿಖೆಯಿಂದ ದೃಢಪಟ್ಟಿದೆ.

ಇದು ರೈಲು ಹಳಿ ತಪ್ಪಿದ ದುರಂತವಲ್ಲ, ಸಿಬ್ಬಂದಿಯ ಪ್ರಮಾದ ಎಂಬುದನ್ನು ರೈಲ್ವೆ ಇಲಾಖೆಯ ಉನ್ನತ ಮೂಲಗಳು ತಿಳಿಸಿದ್ದವು. ಅದು ಈಗ ಖಚಿತವಾಗಿದೆ. ದುರಂತ ಸಂಭವಿಸಿದ ಉತ್ತರಪ್ರದೇಶದ ಮುಜಾಫರ್‍ನಗರ್‍ದ ಈ ಮಾರ್ಗದಲ್ಲಿ ರೈಲು ಹಳಿಯನ್ನು ದುರಸ್ಥಿ ಮಾಡಲಾಗುತ್ತಿದೆ ಎಂಬ ಬಗ್ಗೆ ಎಕ್ಸ್‍ಪ್ರೆಸ್ ರೈಲಿನ ಚಾಲಕನಿಗೆ ಮಾಹಿತಿ ನೀಡಿರಲಿಲ್ಲ ಹಾಗೂ ಈ ಕುರಿತು ಅರಿವು ಇರಲಿಲ್ಲ ಎಂಬ ಸಂಗತಿಯೂ ಬಯಲಾಗಿದೆ.

ರೈಲು ಹಳಿ ನಿರ್ವಹಣೆ ದೋಷ ಮತ್ತು ವೈಫಲ್ಯವೇ ಈ ಘೋರ ದುರಂತಕ್ಕೆ ಕಾರಣ ಎಂದು ಪರಿಶೀಲನೆ ವೇಳೆ ಕಂಡುಬಂದಿದೆ. ರೈಲು ಹಳಿ ತಪ್ಪುವುದಕ್ಕೂ ಮುನ್ನ ಈ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಆದರೆ ಅತಿ ವೇಗವಾಗಿ ಬರುತ್ತಿದ್ದ ರೈಲಿನ ವೇಗವನ್ನು ಕಡಿಮೆ ಮಾಡಲು ಮುನ್ಸೂಚನೆಯನ್ನಾಗಲಿ ಅಥವಾ ಎಚ್ಚರಿಕೆ ಸಿಗ್ನಲ್ ಆಗಲಿ ಸಿಬ್ಬಂದಿ ನೀಡಿರಲಿಲ್ಲ ಎಂಬುದು ದೃಢಪಟ್ಟಿದೆ.

ಉತ್ಕಾಲ್ ಎಕ್ಸ್‍ಪ್ರೆಸ್ ರೈಲು ಗಂಟೆಗೆ 106 ಕಿ.ಮೀ.ವೇಗದಲ್ಲಿ ಬರುತ್ತಿತ್ತು. ಆದರೆ ಹಳಿ ದುರಸ್ತಿ ವೇಳೆ ಈ ರೈಲಿನ ವೇಗ ಗಂಟೆಗೆ 10 ರಿಂದ 15 ಕಿ.ಮೀ.ಗೆ ಇಳಿಸಬೇಕಿತ್ತು. ಈ ಕುರಿತು ರೈಲು ಚಾಲಕನಿಗೆ ಮುನ್ನವೇ ಸಿಗ್ನಲ್ ಅಥವಾ ಸೂಕ್ತ ಎಚ್ಚರಿಕೆ ನೀಡಬೇಕಿತ್ತು. ಆದರೆ ಈ ಯಾವುದೇ ನಿಯಮಗಳನ್ನು ಸಿಬ್ಬಂದಿ ಪಾಲಿಸಿಲ್ಲ ಎಂಬುದು ಸಾಬೀತಾಗಿದೆ. ಆದರೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಳಿಯನ್ನು ವಿರೂಪಗೊಳಿಸಲಾಗಿತ್ತು ಎಂದು ಆರೋಪಿಸಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ.

Facebook Comments

Sri Raghav

Admin