ಅಧಿಕಾರಕ್ಕೇರಲು ಶಪಥ ಮಾಡಿದ ಬಿಜೆಪಿಯಿಂದ ಪಂಚ ದಿಕ್ಕುಗಳಿಂದ ರಥಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Rath-Yatra--01

– ರವೀಂದ್ರ ವೈ.ಎಸ್
ಬೆಂಗಳೂರು, ಆ.21- ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಶಪಥ ಮಾಡಿರುವ ಬಿಜೆಪಿ ಪಂಚ ದಿಕ್ಕುಗಳಿಂದ ರಥಯಾತ್ರೆ ಆರಂಭಿಸುವ ಮೂಲಕ ಸರ್ಕಾರದ ವಿರುದ್ಧ ಪಾಂಚಜನ್ಯ ಮೊಳಗಿಸಲಿದೆ. 90ರ ದಶಕದಲ್ಲಿ ಪಕ್ಷದ ಭೀಷ್ಮ ಪಿತಾಮಹಾ ಎನಿಸಿದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ದೇಶಾದ್ಯಂತ ರಥಯಾತ್ರೆ ನಡೆಸಿದ್ದರ ಪರಿಣಾಮವೇ ಬಿಜೆಪಿ ಅಲ್ಲಲ್ಲಿ ಅರಳಲು ಸಾಧ್ಯವಾಗಿತ್ತು.
ಇದೀಗ ಇದೇ ಮಾದರಿಯಲ್ಲಿ ರಾಜ್ಯದ ಐದು ಕಡೆ ಬಿಜೆಪಿ ರಥಯಾತ್ರೆ ನಡೆಯಲಿದ್ದು, ಸೆ.10ರಂದು ಕರಾವಳಿ ಹೆಬ್ಬಾಗಿಲು ಮಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದೆ.

ರಾಜ್ಯ ಸರ್ಕಾರದ ಭ್ರಷ್ಟಾಚಾರ, ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಸಚಿವರ ರಾಜೀನಾಮೆ, ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ, ಅರಣ್ಯ ಸಚಿವ ರಮಾನಾಥರೈ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಐದು ಭಾಗಗಳಿಂದ ರಥ ಯಾತ್ರೆ ನಡೆಸಲಿದೆ.

ಈ ಹಿಂದೆ 1990ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಂದಿನ ಜನತಾದಳ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ಕೈಗೊಂಡಿದ್ದರು. ಪರಿಣಾಮ ಕಾಂಗ್ರೆಸ್ ಭಾರೀ ಬಹುಮತಗಳನ್ನು ಪಡೆಯುವ ಮೂಲಕ ಅಧಿಕಾರ ಗದ್ದುಗೆ ಹಿಡಿದಿತ್ತು. ಇತ್ತೀಚೆಗೆ ರಾಜ್ಯ ಪ್ರವಾಸಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ನಾಯಕರಿಗೆ ಪಕ್ಷ ಸಂಘಟನೆ, ರಾಜ್ಯ ಪ್ರವಾಸ ಹಾಗೂ ಜನರ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಇದರ ಪರಿಣಾಮವೇ ಬಿಜೆಪಿ ಯುವ ಮೋರ್ಚ ರಥ ಯಾತ್ರೆಯನ್ನು ನಡೆಸಲು ಮುಂದಾಗಿದೆ.

ಎಲ್ಲೆಲ್ಲಿ ರಥಯಾತ್ರೆ:

ಬಿಜೆಪಿ ಯುವ ಮೋರ್ಚ ರಾಜ್ಯಾಧ್ಯಕ್ಷ ಹಾಗೂ ಕೊಡಗು-ಮೈಸೂರು, ಸಂಸದ ಪ್ರತಾಪ್‍ಸಿಂಹ ನೇತೃತ್ವದಲ್ಲಿ ರಥಯಾತ್ರೆಯನ್ನು ನಡೆಸಲು ಮುಂದಾಗಿದ್ದು ಪಕ್ಷದ ಹಿರಿಯ ನಾಯಕರು ಮಾರ್ಗದರ್ಶಕರಾಗಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಹಾಗೂ ಶಿವಮೊಗ್ಗದಿಂದ ಏಕಕಾಲದಲ್ಲಿ ಈ ರಥ ಯಾತ್ರೆ ಪ್ರಾರಂಭವಾಗಲಿದೆ.

ಸೆ.1ರಿಂದ ರಥಯಾತ್ರೆ ವಿಧ್ಯುಕ್ತವಾಗಿ ಆರಂಭವಾಗಲಿದ್ದು, ಸೆ.7ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್‍ಕುಮಾರ್, ರಮೇಶ್‍ಜಿಗಜಿಣಗಿ, ನಿರ್ಮಲಾಸೀತಾರಾಂ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.ಸಮಾರೋಪ ಸಮಾರಂಭಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸುವ ಉದ್ದೇಶ ಬಿಜೆಪಿ ಹೊಂದಿದೆ. ಸಂಸದರು, ಶಾಸಕರು, ಮಾಜಿ ಸಚಿವರು ಮತ್ತಿತರ ಪದಾಧಿಕಾರಿಗಳು ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಬೇಕೆಂದು ಪಕ್ಷದ ಪ್ರಮುಖರು ಸೂಚಿಸಿದ್ದಾರೆ.

ವಿಶೇಷ ಅಲಂಕೃತ ರಥಯಾತ್ರೆ:

ಬಿಜೆಪಿ ಯುವ ಮೋರ್ಚ ಕೈಗೊಳ್ಳಲಿರುವ ರಥ ಯಾತ್ರೆಯನ್ನು ವಿಶೇಷವಾಗಿ ಅಲಂಕೃತವಾಗಿ ಶೃಂಗಾರ ಮಾಡಲಾಗುತ್ತದೆ. ವಿಶೇಷ ವಾಹನದಲ್ಲಿ ಆರ್‍ಎಸ್‍ಎಸ್ ನಾಯಕರ ಭಾವಚಿತ್ರಗಳು, ಇತ್ತೀಚೆಗೆ ಕೊಲೆಯಾದ ಆರ್‍ಎಸ್‍ಎಸ್ ಕಾರ್ಯಕರ್ತರಾದ ಶರತ್ ಮಡಿವಾಳ, ರುದ್ರೇಶ್ ಸೇರಿದಂತೆ 11 ಕಾರ್ಯಕರ್ತರ ಭಾವಚಿತ್ರಗಳು ರಥದಲ್ಲಿರುತ್ತವೆ. ಈಗಾಗಲೇ ರಥ ಯಾತ್ರೆಯನ್ನು ಯಾವ ರೀತಿ ಸಿದ್ಧಪಡಿಸಬೇಕು ಎಂಬುದಕ್ಕೆ ನುರಿತ ತಜ್ಞರ ಸಲಹೆ ಪಡೆಯಲಾಗಿದೆ.  ರಥ ಯಾತ್ರೆ ಹೊರಡುವ ವೇಳೆ ಪ್ರತಿ ರಥಕ್ಕೆ ಎರಡು ಸಾವಿರ ದ್ವಿಚಕ್ರ ವಾಹನಗಳು ಸಾಥ್ ನೀಡಲಿವೆ. ಒಟ್ಟು 10 ಸಾವಿರ ದ್ವಿಚಕ್ರ ವಾಹನಗಳು ಮಂಗಳೂರಿನಲ್ಲಿ ಐದು ದಿಕ್ಕುಗಳಿಂದ ಸಮಾಗಮಗೊಳ್ಳಲಿವೆ.

ಅಲ್ಲಲ್ಲಿ ಸಭೆ-ಸಮಾರಂಭ:

ಅಂದಹಾಗೆ ಬೆಂಗಳೂರಿನಿಂದ ಹೊರಡುವ ರಥಯಾತ್ರೆಯು ನೆಲಮಂಗಲ, ಕುಣಿಗಲ್, ಹಾಸನದಿಂದ ಮಂಗಳೂರು ಕಡೆ ಹೊರಟರೆ, ಮೈಸೂರಿನಿಂದ ಹೊರಡುವ ರಥಯಾತ್ರೆ ಹುಣಸೂರು ಮೂಲಕ ಮಡಿಕೇರಿ ತಲುಪಿ ಮಂಗಳೂರಿಗೆ ಆಗಮಿಸಲಿದೆ. ಶಿವಮೊಗ್ಗದಿಂದ ಹೊರಡಲಿರುವ ರಥ ತೀರ್ಥಹಳ್ಳಿ, ಉಡುಪಿ, ಕುಂದಾಪುರ, ಮಣಿಪಾಲ್ ಮೂಲಕ ಹೊರಟರೆ, ಹುಬ್ಬಳ್ಳಿ-ಧಾರವಾಡದಿಂದ ಹೊರಡುವ ರಥವು ದಾಂಡೆಲಿ, ಜೋಯಿಡ, ಕಾರವಾರ ಮತ್ತಿತರ ಕಡೆ ಸಂಚರಿಸಿ ಸೆ.7ರಂದು ಮಂಗಳೂರಿನ ಮಂಗಳ ಕ್ರೀಡಾಂಗಣಕ್ಕೆ ಆಗಮಿಸಲಿದೆ. ಒಟ್ಟಿನಲ್ಲಿ ಬಿಜೆಪಿ ಅಮಿತ್ ಶಾ ಆಗಮಿಸಿದ ಬಳಿಕ ಸರ್ಕಾರದ ವಿರುದ್ಧ ಫಿನಿಕ್ಸ್‍ನಂತೆ ಮೈ ಕೊಡವಿ ಎದ್ದಿರುವುದು ಗುಟ್ಟಾಗಿ ಉಳಿದಿಲ್ಲ.

Facebook Comments

Sri Raghav

Admin