ನಾಲ್ವರು ಅಂತಾರಾಜ್ಯ ಕಳ್ಳರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Police--011

ಬೆಂಗಳೂರು, ಆ.21- ತನ್ನ ಗ್ಯಾಂಗ್ ನಿರ್ವಹಣೆಗಾಗಿ ಹಾಗೂ ದುಶ್ಚಟಗಳಿಗಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮನೆಗಳ್ಳತನ ಮಾಡುತ್ತಿದ್ದ ಹಾಗೂ ರಾತ್ರಿವೇಳೆ ಕ್ಯಾಬ್‍ಗಳನ್ನು ಬುಕ್ ಮಾಡಿ ನಂತರ ಚಾಲಕರಿಗೆ ಮಾರಕಾಸ್ತ್ರಗಳಿಂದ ಹೆದರಿಸಿ ಕಾರು ಹಾಗೂ ಮೊಬೈಲ್‍ಗಳನ್ನು ದೋಚುತ್ತಿದ್ದ ನಾಲ್ವರನ್ನು ಮಡಿವಾಳ ಪೊಲೀಸರು ಬಂಧಿಸಿ 20 ಲಕ್ಷ ರೂ. ಬೆಲೆಬಾಳುವ ಆಭರಣ ವಶಪಡಿಸಿಕೊಂಡಿದ್ದಾರೆ.

ಮೂಲತಃ ಆಂಧ್ರ ಪ್ರದೇಶದ ಹರೀಶ (32), ತಮಿಳುನಾಡಿನ ಶಂಕರ್‍ರಾಮ್ (21), ಸುಹೇಲ್ (22) ಮತ್ತು ಅಸ್ಗರ್ ಆಲಿ (21) ಬಂಧಿತ ಅಂತಾರಾಜ್ಯ ಕಳ್ಳರು. ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಬೀಗ ಒಡೆದು ಆಭರಣಗಳು, ಬೆಳ್ಳಿ ಸಾಮಾನುಗಳನ್ನು ಕಳವು ಮಾಡಿಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಬೊಳೆತ್ತಿನ್ ಮತ್ತು ಪಿಎಸ್‍ಐ ಹಲಗೇಗೌಡ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದೆ.

ಆರೋಪಿಗಳಿಂದ 20 ಲಕ್ಷ ರೂ. ಬೆಲೆಬಾಳುವ 620 ಗ್ರಾಂ ತೂಕದ ಆಭರಣಗಳು ಹಾಗೂ 4 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು 4 ಕನ್ನಕಳವು ಪ್ರಕರಣ ಪತ್ತೆಯಾಗಿವೆ. ಪ್ರಮುಖ ಆರೋಪಿ ಹರೀಶ್ ಹಲವರನ್ನು ಸೇರಿಸಿಕೊಂಡು ತಂಡವನ್ನಾಗಿ ಮಾಡಿ ಮನೆಗಳ್ಳತನ ಮಾಡುತ್ತಿದ್ದನಲ್ಲದೆ 2016ರಲ್ಲಿ ಕಾಡುಗೋಡಿ ವ್ಯಾಪ್ತಿಯಲ್ಲಿ ಸ್ನೇಹಿತರೊಂದಿಗೆ ಸೇರಿಕೊಂಡು 50 ಲಕ್ಷ ರೂ. ಸುಪಾರಿ ಪಡೆದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದನು.ಅಲ್ಲದೆ, ಈತ ಅಂತಾರಾಜ್ಯಗಳಲ್ಲಿ ದರೋಡೆ ಮಾಡಿದ್ದು, ಈತನ ವಿರುದ್ಧ ಎಚ್‍ಎಸ್‍ಆರ್ ಠಾಣೆ, ಬ್ಯಾಟರಾಯನಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಪರಪ್ಪನ ಅಗ್ರಹಾರ ಠಾಣೆಗಳಲ್ಲಿ ಕಳವು ಮತ್ತು ಸುಲಿಗೆ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಎಚ್‍ಎಸ್‍ಆರ್ ಲೇಔಟ್ ಠಾಣೆಯ ರೌಡಿಪಟ್ಟಿಯಲ್ಲಿ ಈತನ ಹೆಸರಿದೆ.
ಆರೋಪಿ ಹರೀಶ್ ಮತ್ತು ಶಂಕರರಾಮ್ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡು ಗ್ಯಾಂಗ್ ನಿರ್ವಹಣೆಗಾಗಿ ಹಾಗೂ ದೈನಂದಿನ ಖರ್ಚು-ವೆಚ್ಚ ಮತ್ತು ದುಶ್ಚಟಗಳಿಗಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ರಾತ್ರಿ ವೇಳೆ ಕ್ಯಾಬ್‍ಗಳನ್ನು ಬುಕ್ ಮಾಡಿ ಚಾಲಕರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಕಾರು ಹಾಗೂ ಮೊಬೈಲ್‍ಗಳನ್ನು ದೋಚುತ್ತಿದ್ದರು.

ಆರೋಪಿ ಶಂಕರ್‍ರಾಮ್ ವಿರುದ್ಧ ತಮಿಳುನಾಡಿನಲ್ಲಿ ಮೂರು ಪ್ರಕರಣ, ಬೆಂಗಳೂರಿನಲ್ಲಿ ಐದು ಪ್ರಕರಣ ದಾಖಲಾಗಿವೆ. ಈತ ಕಳೆದ ಸಾಲಿನಲ್ಲಿ ತಮಿಳುನಾಡಿನಲ್ಲಿ ಮನೆಗಳ್ಳತನ ಮಾಡಲು ಹೋಗಿದ್ದಾಗ 60 ವರ್ಷದ ವೃದ್ಧೆಯನ್ನು ಕೊಲೆಗೈದು ಕಳ್ಳತನ ಮಾಡಿರುವುದಲ್ಲದೆ, ಆರಕೋಣಂ ವ್ಯಾಪ್ತಿಯ ಐಎನ್‍ಎಸ್ ರಾಜಾಲಿ ಇಂಡಿಯನ್ ನೇವಿ ಕಾಂಪೌಂಡ್ ಕ್ಯಾಂಪಸ್ ಒಳನುಗ್ಗಿ ಸಿಬ್ಬಂದಿಯ ಪಿಸ್ತೂಲು ಕಿತ್ತುಕೊಂಡು ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದನು. ಈ ನಾಲ್ವರು ಮಡಿವಾಳ ಠಾಣೆಯಲ್ಲಿ ನಡೆದಿದ್ದ 3 ಕನ್ನಗಳವು ಪ್ರಕರಣ, ಎಚ್‍ಎಸ್‍ಆರ್ ಲೇಔಟ್‍ನ 1 ಹಗಲು ಕನ್ನಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

Facebook Comments

Sri Raghav

Admin