ಬಿಎಸ್ವೈ ವಿರುದ್ಧ ಸುಳ್ಳು ದೂರು, ರಾಜ್ಯಪಾಲರ ಮೊರೆಹೋದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

BJP--0125

ಬೆಂಗಳೂರು, ಆ.21- ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ದುರುಪಯೋಗ ಪಡಿಸಿಕೊಂಡು ಪ್ರತಿ ಪಕ್ಷದ ನಾಯಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಬಿಜೆಪಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಗುದ್ದಾಟ ಈಗ ರಾಜಭವನ ತಲುಪಿದೆ.  ತಕ್ಷಣವೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವುದು, ಎಸಿಬಿಯನ್ನು ರದ್ದು ಮಾಡುವುದು, ರದ್ದುಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವುದು, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಿಯೋಗ ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ದೂರು ಸಲ್ಲಿಸಿತು.

BJP--01

ವಿಧಾನಮಂಡಲಗಳ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಕೇಂದ್ರ ಸಚಿವ ಅನಂತ್‍ಕುಮಾರ್, ಸಂಸದರಾದ ಪ್ರಹ್ಲಾದ್‍ಜೋಷಿ, ಶೋಭಾಕರಂದ್ಲಾಜೆ, ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಸುರೇಶ್‍ಕುಮಾರ್, ಬಿ.ಜೆ.ಪುಟ್ಟಸ್ವಾಮಿ, ಕೆ.ಶಿವನಗೌಡನಾಯಕ್ ಸೇರಿದಂತೆ ಮತ್ತಿತರ ನಿಯೋಗವು ರಾಜ್ಯಪಾಲರಿಗೆ ಲಿಖಿತ ದೂರು ನೀಡಿದೆ.

ಸರ್ಕಾರ ವಜಾಕ್ಕೆ ಆಗ್ರಹ:

ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರ ಎಸಿಬಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದಕ್ಕೆ ಕೆಐಎಡಿಬಿ ಅಧಿಕಾರಿ ಬಸವರಾಜೇಂದ್ರ ಬಹಿರಂಗಗೊಳಿಸಿರುವ ದೂರು ಸಾಕ್ಷಿಯಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದರು.
ಪ್ರತಿಪಕ್ಷಗಳ ನಾಯಕರ ದೂರವಾಣಿ ಕದ್ದಾಲಿಕೆ, ಎಸಿಬಿ ದುರುಪಯೋಗ, ಕೆಲ ನಕಲಿ ಆರ್‍ಟಿಐ ಕಾರ್ಯಕರ್ತರ ಮೂಲಕ ದುರುದ್ದೇಶ ಪೂರಕ ದೂರು ದಾಖಲಿಸುವುದು, ಕುಸಿದು ಬಿದ್ದಿರುವ ಕಾನೂನು, ಆರ್‍ಎಸ್‍ಎಸ್ ಕಾರ್ಯಕರ್ತರ ಕಗ್ಗೊಲೆ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿರುವುದಾಗಿ ಹೇಳಿದರು.

ಶಿವರಾಂ ಕಾರಂತರ ಬಡಾವಣೆ ಯೋಜನೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಅಂತಿಮ ಅಧಿಸೂಚನೆ ಹೊರಡಿಸದೇ ಇರುವಾಗ ಕಾನೂನು ಬಾಹೀರವಾಗಿ ಡಿ ನೋಟಿಫೈ ಮಾಡಲು ಸಾಧ್ಯವೇ ಇಲ್ಲ. ಎಸಿಬಿ ದುರುಪಯೋಗ ಪಡಿಸಿಕೊಂಡಿರುವ ಸರ್ಕಾರವನ್ನು ತಕ್ಷಣ ವಜಾ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ದೂರಿನಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರ ಪ್ರತಿಪಕ್ಷಗಳ ನಾಯಕರ ದೂರವಾಣಿಗಳನ್ನು ಕದ್ದಾಲಿಸಲು ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಎಸಿಬಿಯ ಎಡಿಜಿಪಿ ಎಂ.ಎನ್.ರೆಡ್ಡಿ ಅವರನ್ನು ದುರ್ಬಳಕೆ ಮಾಡಿಕೊಂಡಿದೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿರುವುದರಿಂದ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದರು.

ಸಿದ್ದು ಸರ್ಕಾರದ ಕೌಂಟ್‍ಡೌನ್:

ಕೇಂದ್ರ ಸಚಿವ ಅನಂತ್‍ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೌಂಟ್‍ಡೌನ್ ಪ್ರಾರಂಭವಾಗಿದೆ. ಎಸಿಬಿಯನ್ನು ದುರುಪಯೋಗ ಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಮುಂದೆ ಇದರ ಪ್ರತಿಫಲವನ್ನು ಅವರು ಅನುಭವಿಸುತ್ತಾರೆ ಎಂದು ಎಚ್ಚರಿಸಿದರು.
ಶಿವರಾಂ ಕಾರಂತ ಬಡಾವಣೆಯ ಯೋಜನೆಯನ್ನೇ ಹೈಕೋರ್ಟ್‍ನ ಏಕಸದಸ್ಯ ಪೀಠ ರದ್ದುಪಡಿಸಿದೆ. ಹೀಗಿರುವಾಗ ಯಡಿಯೂರಪ್ಪ ಯಾರಿಗೋ ಅನುಕೂಲ ಕಲ್ಪಿಸಲು ಕಾನೂನು ಬಾಹೀರವಾಗಿ ಭೂ ಸ್ವಾಧೀನ ಪ್ರಕ್ರಿಯೆಯಿಂದ ಜಮೀನು ಕೈ ಬಿಟ್ಟಿದ್ದಾರೆ ಎಂಬುದು ಹಾಸ್ಯಸ್ಪದ ಎಂದು ವ್ಯಂಗ್ಯವಾಡಿದರು.

ತಮ್ಮ ಭ್ರಷ್ಟಾಚಾರರವನ್ನು ಮುಚ್ಚಿಕೊಳ್ಳಲು ಪ್ರತಿಪಕ್ಷ ನಾಯಕರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಯಡಿಯೂರಪ್ಪ ವಿರುದ್ಧ ಪ್ರಕರಣಗಳನ್ನು ಸಿಎಜಿ ಆಧಾರದ ಮೇಲೆ ಹೈಕೋರ್ಟ್ ವಜಾಗೊಳಿಸಿದೆ. ಈಗ ಪುನಃ ಮುಚ್ಚಿಹೋಗಿದ್ದ ಪ್ರಕರಣವನ್ನು ಕೆದಕಿ ಎಫ್‍ಐಆರ್ ಹಾಕಲಾಗಿದೆ ಎಂದು ದೂರಿದರು. ರಾಜ್ಯಪಾಲರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಬಂಧಪಟ್ಟವರ ಜತೆ ಮಾತನಾಡುವ ಭರವಸೆ ನೀಡಿದ್ದಾರೆ ಎಂದರು.

ಮೊದಲು ಸಿಎಂ ಮೇಲೆ ದೂರು ದಾಖಲಾಗಲಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ 15ಕ್ಕೂ ಹೆಚ್ಚು ದೂರು ದಾಖಲಾಗಿವೆ. ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಡಿ.ಕೆ.ಶಿವಕುಮಾರ್ ಸೇರಿದಂತೆ ಶಾಸಕರು, ಅಧಿಕಾರಿಗಳ ಮೇಲೆಯೂ ದೂರು ದಾಖಲಾಗಿದ್ದರೂ ಎಸಿಬಿ ಅಧಿಕಾರಿಗಳು ಒಂದೇ ಒಂದು ನೋಟಿಸ್ ಇಲ್ಲವೇ ಎಫ್‍ಐಆರ್ ದಾಖಲಿಸಿಲ್ಲ ಎಂದು ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಮೊದಲು ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಿ ಎಫ್‍ಐಆರ್ ಹಾಕಬೇಕು. ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಹಾಡಹಗಲೇ ಕೊಲೆ ಮಾಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಎಸಿಬಿಯ ಎಡಿಜಿಪಿ ಎಂ.ಎನ್.ರೆಡ್ಡಿ ಅವರ ಮೂಲಕ ಪ್ರತಿಪಕ್ಷ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಆಡಳಿತ ನಡೆಸಲು ವಿಫಲವಾಗಿರುವ ಸರ್ಕಾರವನ್ನು ತಕ್ಷಣವೇ ರಾಜ್ಯಪಾಲರು ವಜಾಗೊಳಿಸುವಂತೆ ಒತ್ತಾಯಿಸಿದರು.
ಇದಕ್ಕೂ ಮುನ್ನ ಬಿಜೆಪಿ ನಿಯೋಗವು ಅಂಬೇಡ್ಕರ್ ಪ್ರತಿಮೆಯಿಂದ ರಾಜಭವನದವರೆಗೆ ಕಾಲ್ನಡಿಗೆ ಜಾಥ ನಡೆಸಿತು.

2018 ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಆಯ್ಕೆಯ ಪಕ್ಷ ..?

View Results

Loading ... Loading ...
Facebook Comments

Sri Raghav

Admin