ಅಮಿತ್ ಶಾ ಅವರ ತಂತ್ರ-ಕುತಂತ್ರ ಕರ್ನಾಟಕದಲ್ಲಿ ನಡೆಯಲ್ಲ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Param-Tumakuru--01n

ತುಮಕೂರು, ಆ.22- ಬಿಜೆಪಿಯವರಿಂದ ನಾವೇನು ಬುದ್ದಿ ಕಲಿಯಬೇಕಿಲ್ಲ. ಅಮಿತ್ ಶಾ ಅವರ ತಂತ್ರ-ಕುತಂತ್ರ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು. ನಗರದ ಎಪಿಎಂಸಿಯ 2016-17ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಪ್ರಾಂಗಣದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಚುನಾವಣೆ ಕಾರ್ಯತಂತ್ರ ರೂಪಿಸಿರಬಹುದು. ಆದರೆ ಅವರ ಕಾರ್ಯತಂತ್ರ ಇಲ್ಲಿ ನಡೆಯುವುದಿಲ್ಲ. ಇದೆನೂ ಬಿಹಾರ ಅಥವಾ ಉತ್ತರ ಪ್ರದೇಶವಲ್ಲ ಎಂದರು.

ಅವರಿಂದ ನಾವು ಬುದ್ದಿ ಕಲಿಯುವ ಅವಶ್ಯಕತೆ ಇಲ್ಲ. ನಮ್ಮಿಂದ ಅವರು ಕಲಿಯಬೇಕಾದ್ದದ್ದು ಸಾಕಷ್ಟಿದೆ ಎಂದ ಅವರು, ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಗಳು ಎಸಿಬಿಯನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಅವರ ವಿರುದ್ಧ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಸತ್ಯಕ್ಕೆ ದೂರವಾದ ವಿಚಾರ ಎಂದು ಹೇಳಿದರು. ನಾವು ಯಾವುದೇ ರೀತಿಯಲ್ಲೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ನಮಗೆ ರಾಜ್ಯದ ಅಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವೂ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸಿ4 ಸಮೀಕ್ಷೆಯನ್ನು ನಾವೇನು ದುಡ್ಡುಕೊಟ್ಟು ಮಾಡಿಸಿಲ್ಲ ಅಥವಾ ಮಾಡಿ ಎಂದು ಹೇಳಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ನಡೆ ಜನರ ಕಡೆ ಎಂಬ ಧ್ಯೇಯೋದ್ದೇಶದಿಂದ ಕೆಲಸ ಮಾಡುತ್ತಾ ಬಂದಿದ್ದೇವೆ. ಹಾಗಾಗಿ ಜನ ಮನ್ನಣೆ ನೀಡುತ್ತಿದ್ದಾರೆ ಎಂಬುದು ಸತ್ಯ ಎಂದು ನುಡಿದರು. ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದ ಆಕಾಂಕ್ಷಿ ಕುರಿತಂತೆ ಕೇಳಿದ ಪ್ರಶ್ನೆಗೆ. ಇದು ನನಗೆ ಸೇರಿದ ವಿಚಾರವಲ್ಲ. ಈ ವಿಚಾರವನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದೆ. ಮಾಜಿ ಸಚಿವ ಎಚ್.ವೈ.ಮೇಟಿ ಅವರ ಮೇಲಿನ ಸಿಐಡಿ ತನಿಖೆ ಮುಗಿದಿದ್ದು, ವರದಿ ಬರಬೇಕಿದೆ. ಮತ್ತೆ ಆ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತಳೆಯಲಾಗುವುದು ಎಂದು ತಿಳಿಸಿದರು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಜನರು ತಿಳಿಸುತ್ತಾರೋ ಅವರೇ ಆಗುತ್ತಾರೆ. ರಾಜ್ಯಪಾಲರು ಸರ್ಕಾರಕ್ಕೆ ಬರೆದಿರುವ ಪತ್ರದ ಪೂರ್ಣಾಂಶ ನಮಗೆ ತಿಳಿದಿಲ್ಲ. ಅದನ್ನು ಮುಖ್ಯಮಂತ್ರಿ ಅವರೇ ನಿರ್ವಹಿಸುತ್ತಾರೆ ಎಂದರು. ಕೆಪಿಎಸ್‍ಸಿ ಸದಸ್ಯರ ನೇಮಕಾತಿಯಲ್ಲಿ ಸಣ್ಣಪುಟ್ಟ ಲೋಪದೋಷ ಉಂಟಾಗಿರುವುದು ನಿಜ. ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದ ಅವರು, ತುಮಕೂರು ಕಾಂಗ್ರೆಸ್‍ನಲ್ಲಿ ಯಾವುದೇ ಗೊಂದಲವಿಲ್ಲ. ನಾವು ಕಾಂಗ್ರೆಸ್‍ನಲ್ಲಿ ಮೂಲೆಗುಂಪು ಆಗಿಲ್ಲ. ಕಳೆದ ಶನಿವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ನಾವು ಭಾಗವಹಿಸಲು ಆಗಲಿಲ್ಲ , ಅಷ್ಟೇ ಎಂದು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಮುದ್ದಹನುಮೇಗೌಡ, ಸಚಿವ ಟಿ.ಬಿ.ಜಯಚಂದ್ರ, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಗಂಗಾಧರಪ್ಪ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin