‘ಇಂದಿರಾ ಕ್ಯಾಂಟಿನ್‍’ ಗೆ ಅಡ್ಡಿಪಡಿಸುವರ ವಿರುದ್ಧ ಕಠಿಣ ಕ್ರಮ : ಸಿಎಂ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha-CM--01

ಬೆಂಗಳೂರು, ಆ.22- ಇಂದಿರಾ ಕ್ಯಾಂಟಿನ್‍ನ ಯಶಸ್ಸಿನಿಂದ ಕಂಗಾಲಾಗಿರುವ ಬಿಜೆಪಿಯವರು ಗಿರಿನಗರ ಸೇರಿದಂತೆ ಕೆಲವೆಡೆ ಕ್ಯಾಂಟಿನ್ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರಿಗೆ ಮೇಯರ್ ಜಿ.ಪದ್ಮಾವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂತಹ ಹುನ್ನಾರಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ ಇಂದಿರಾ ಕ್ಯಾಂಟಿನ್‍ಗೆ ಯಾರೇ ಅಡ್ಡಿ ಬಂದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮೇಯರ್ ಪದ್ಮಾವತಿ ಇಂದು ಬೆಳಗ್ಗೆ ನಗರದ ಹಲವು ಕಡೆಗಳಲ್ಲಿನ ಇಂದಿರಾ ಕ್ಯಾಂಟಿನ್‍ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಇಂದಿರಾ ಕ್ಯಾಂಟಿನ್‍ನ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು. ರಾಜ್ಯಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟಿನ್‍ಗೆ ಕೆಲವು ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಇಲ್ಲಿನ ಊಟದ ಬಗ್ಗೆ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಮೇಯರ್ ದೂರು ನೀಡಿದ್ದಾರೆ.

ಇದರಿಂದ ಸಿಟ್ಟಾದ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಒಂದಾಗಿರುವ ಈ ಯೋಜನೆಯನ್ನು ಬಡವರಿಗಾಗಿ ರೂಪಿಸಲಾಗಿದೆ. ಏನೇ ಲೋಪದೋಷ ಇದ್ದರೂ ಸರಿಪಡಿಸಿಕೊಳ್ಳಿ. ಪ್ರತಿದಿನ ಕ್ಯಾಂಟಿನ್‍ನ ಸ್ಥಿತಿಗತಿ ಬಗ್ಗೆ ನನಗೆ ವರದಿ ನೀಡಬೇಕು. ಒಂದು ವಾರದ ಕ್ಯಾಂಟಿನ್ ಪ್ರಗತಿಯನ್ನು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಗಿರಿನಗರದಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿ ಕ್ಯಾಂಟಿನ್‍ಗೆ ಅಡ್ಡಿ ಪಡಿಸುತ್ತಿದೆ, ಅದರ ಹಿನ್ನೆಲೆ ಏನು ಎಂಬ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ದುರುದ್ದೇಶದಿಂದ ಕ್ಯಾಂಟಿನ್‍ಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತನ್ನಿ. ಚರ್ಚೆ ಮಾಡಿ ಪರಿಹರಿಸೋಣ ಎಂದಿದ್ದಾರೆ.  ಕೆಲವು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ ನಂತರ ಪರಿಸ್ಥಿತಿ ತಿಳಿಯಾಗಿದೆ. ಅಧಿಕಾರಿಗಳು ಸ್ಪಂದಿಸಲು ಆರಂಭಿಸಿದ್ದಾರೆ. ಪ್ರತಿ ಕ್ಯಾಂಟಿನ್‍ಗೂ ತೆರಳಿ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ಗುಣಮಟ್ಟದ ಬಗ್ಗೆ ಪರಿಶೀಲಿಸಲು ಸೂಚಿಸಲಾಗಿದೆ. ಅದನ್ನು ಅವರು ಪಾಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಭೇಟಿ ನಂತರ ಮೇಯರ್ ಸುದ್ದಿಗಾರರಿಗೆ ತಿಳಿಸಿದರು.

ಇಂದಿರಾ ಕ್ಯಾಂಟಿನ್‍ಗಳಿಗೆ ಸಿಸಿಟಿವಿ:

ಈ ನಡುವೆ ಇಂದಿರಾ ಕ್ಯಾಂಟಿನ್‍ಗೆ ಮಸಿ ಬಳಿಯುವ ಹುನ್ನಾರ ನಡೆದಿದ್ದು, ಅದನ್ನು ತಡೆಯಲು ಮತ್ತು ತಪ್ಪಿತಸ್ಥರನ್ನು ಗುರುತಿಸಲು ಎಲ್ಲ ಕ್ಯಾಂಟಿನ್‍ಗಳಿಗೂ ಸಿಸಿಟಿವಿ ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ. ಕ್ಯಾಂಟಿನ್‍ಗೆ ಯಾರು ಬರುತ್ತಾರೆ ಎಂಬುದನ್ನು ಪತ್ತೆ ಹಚ್ಚಿ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವ ಯೋಜನೆ ಕೈಗೆತ್ತಿಕೊಂಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin