ಈ ಬಾರಿಯ ದಸರಾ ಉದ್ಘಾಟಿಸಲಿರುವ ನಿತ್ಯೋತ್ಸವ ಕವಿ ಜೊತೆ ‘ಈ ಸಂಜೆ’ ವಿಶೇಷ ಸಂದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

KSN-Dasara

– ಸಂದರ್ಶಕರು: ಗೊರೂರು ಪಂಕಜ

ವಿಜಯನಗರ ಸಾಮ್ರಾಜ್ಯದ ಪರಂಪರೆಯ ಮುಂದುವರಿಕೆಯಾಗಿರುವ ವಿಶ್ವಮಟ್ಟದ ಜಾತ್ಯತೀತ ಸಾಂಸ್ಕøತಿಕ ಮಹಾಮೇಳ ದಸರಾ ಉದ್ಘಾಟನೆಗೆ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್‍ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿರುವ ಖುಷಿಯನ್ನು ಈ ಸಂಜೆ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೇ ನಿತ್ಯೋತ್ಸವ…

ಎಂದು ಹಾಡಿ ಜಲಪಾತದ ಸಿರಿ, ನಿಸರ್ಗದ ಸೌಂದರ್ಯವನ್ನು ನಾಡಿನ ಮೂಲೆ ಮೂಲೆಗೆ ತಲುಪಿಸಿದ ಸರಳ ಸಜ್ಜನಿಕೆಯ ನಿತ್ಯೋತ್ಸವ ಕವಿ ನಾಡೋಜ ನಿಸಾರ್ ಅಹಮದ್ ಅವರನ್ನು ವಿಶ್ವ ವಿಖ್ಯಾತ ಮೈಸೂರು ದಸರಾ-2017ರ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಕರ್ನಾಟಕ ಸರ್ಕಾರ ತನ್ನ ಸಾಹಿತ್ಯದೊಲವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಇಂತಹ ಗೌರವ ಸಂದಿರುವುದು ನಿಸಾರ್‍ಅವರ ಅಕ್ಷರ ಕಾಯಕಕ್ಕೆ ಸಂದ ಪುರಸ್ಕಾರ.
ಜಗದ್ವಿಖ್ಯಾತ ಜಂಬೂ ಸವಾರಿಗೆ ಚಾಲನೆ ನೀಡಲಿರುವ ಕನ್ನಡ ನಾಡಿನ ಹೆಮ್ಮೆಯ ಕವಿ ನಿಸಾರ್ ಅಹಮದ್ ಅವರು ತಮಗೆ ದೊರೆತಿರುವ ಗೌರವದ ಬಗ್ಗೆ, ಸಾಹಿತ್ಯ ಪರಿಚಾರಕರಾಗಿ ಈ ನಾಡಿಗೆ ಸಲ್ಲಿಸಿದ ಸೇವೆ ಕುರಿತು ಮುಕ್ತ ಮಾತುಕತೆ ನಿಮಗಾಗಿ…

KSN--02

ದಸರಾ ಉದ್ಘಾಟಿಸುವ ಗೌರವ ದೊರೆತಿರುವುದಕ್ಕೆ ನಿಮಗೆ ಏನನಿಸುತ್ತದೆ?

ನಿಜಕ್ಕೂ ಇದೊಂದು ಸುಕೃತ. ಮೊದಲಿಗೆ ಮೈಸೂರು ಜಿಲ್ಲಾಧಿಕಾರಿಯವರು ಫೋನ್ ಮಾಡಿ ವಿಷಯ ತಿಳಿಸಿ ಒಪ್ಪಿಗೆ ಕೋರಿದಾಗ ಸಂತೋಷ ಮತ್ತು ಆಶ್ಚರ್ಯದಿಂದ ಒಪ್ಪಿಕೊಂಡೆ. ಸಾಹಿತ್ಯದ ಸರೀಕರು ಎಷ್ಟೊಂದು ಜನ ಇದ್ದಾರೆ. ಅವರೆಲ್ಲರ ಮಧ್ಯೆ ನನ್ನ ಆಯ್ಕೆ ಆಶ್ಚರ್ಯ ತಂದಿದೆ. ಸಾಂಸ್ಕøತಿಕ ರಾಜಧಾನಿ ಮೈಸೂರಿನಲ್ಲಿ ನಡೆಯುವ ದೊಡ್ಡ ಹಬ್ಬದಲ್ಲಿ ಎಲ್ಲವೂ ಕನ್ನಡಮಯವಾಗಿರುತ್ತದೆ. ಸ್ತಬ್ಧಚಿತ್ರಗಳು, ಕಲಾತಂಡಗಳು ಪ್ರತಿಬಿಂಬಿಸುವಕರ್ನಾಟಕದ ಭವ್ಯ ಪರಂಪರೆಯನ್ನು ಪ್ರಚುರ ಪಡಿಸುತ್ತವೆ. ಅದನ್ನು ನೋಡುವುದೇ ಚೆಂದ. ಕಣ್ಣಿಗೊಂದು ಮಹಾಹಬ್ಬ. ಇಂತಹ ಸಮಾರಂಭ ಉದ್ಘಾಟಿಸುವ ದೊಡ್ಡ ಗೌರವ ಜೀವನದ ಮರೆಯಲಾಗದ ಕ್ಷಣ.KSN--01

ಕುರಿಗಳು ಸಾರ್ ಕುರಿಗಳು ವಿಡಂಬನಾತ್ಮಕ ಕವಿತೆ ಬರೆದ ನಿಮಗೆ ಪ್ರಸ್ತುತ ರಾಜಕೀಯದ ಬಗ್ಗೆ ಏನನಿಸುತ್ತದೆ?

ಪ್ರಸಕ್ತ ರಾಜಕೀಯದಲ್ಲಿ ನಡೆಯುತ್ತಿರುವ ಪರಸ್ಪರ ಕೆಸರೆರಚಾಟ, ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡಬಹುದೆಂಬ ರಾಜಕಾರಣಿಗಳ ಮನಸ್ಥಿತಿ, ವಿಲಕ್ಷಣ ತಂತ್ರಗಾರಿಕೆಗಳು, ನಾಡು-ನುಡಿ ಬಗ್ಗೆ ಅಭಿಮಾನ ಶೂನ್ಯತೆ ನೋಡಿ ಬೇಸರವೆನಿಸುತ್ತದೆ. ನಾನೂ ರಾಜಕೀಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದವನೇ. ಸಾಹಿತಿಗಳೂ ಸೇರಿದಂತೆ ಎಲ್ಲರೂ ರಾಜಕೀಯದ ಒಳ- ಹೊರಗುಗಳನ್ನು ತಿಳಿದುಕೊಳ್ಳಬೇಕು. ದೇಶದ ರಾಜಕೀಯದ ಸ್ಥಿತಿಗತಿಗಳು ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಆದ್ರೆ ರಾಜಕೀಯ ಮಾಡಬಾರದು. ಅದರಲ್ಲೂ ಕಲಾವಿದರು, ಸಾಹಿತಿಗಳು ರಾಜಕೀಯ ಮಾಡುವುದನ್ನು ಬಿಟ್ಟು ಅಂತರ್ಮುಖಿಯಾಗಿ ಸಮಾಜದಲ್ಲಿ ಬೇರು ಬಿಟ್ಟಿರುವ ಪಾರಂಪರಿಕ ಮೌಲ್ಯಗಳನ್ನು ದಾಖಲಿಸಬೇಕು. ರಾಜಕೀಯದಲ್ಲಿ ಇತ್ತೀಚೆಗೆ ಮೌಲ್ಯಗಳು ಕುಸಿಯುತ್ತಿವೆ.

ಇಂದಿನ ಕಾಲಘಟ್ಟದಲ್ಲಿ ಬರವಣಿಗೆ ಸಾಗುತ್ತಿರುವ ದಿಕ್ಕು ದೆಸೆಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಬರವಣಿಗೆ ಎಂದರೆ ಬರೀ ಅಕ್ಷರವಲ್ಲ. ಅದು ಆಯಾ ಕಾಲಘಟ್ಟದ ಜನಸಾಮಾನ್ಯರ ಬದುಕಿನ ವಿಧಾನ. ಸಾಹಿತ್ಯ ಯಾವಾಗಲೂ ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕು. ಕೇವಲ ಪಾಂಡಿತ್ಯ ಪ್ರದರ್ಶನಕ್ಕೆ ಸಿಮೀತವಾಗಿರಬಾರದು. ಇಂದಿಗೂ ಸಮಾಜದಲ್ಲಿ ಪ್ರಬಲವಾಗಿ ಬೇರೂರಿರುವ ಅಂಧಶ್ರದ್ಧೆ , ಅಂಧಾನುಕರಣೆ, ಮೂಢನಂಬಿಕೆ, ಶೋಷಣೆ ಅದರಲ್ಲೂ ಮಹಿಳೆಯರ ಶೋಷಣೆಗಳನ್ನು ಸಮಾಜದಿಂದ ಕಿತ್ತೆಸೆಯುವ ಜವಾಬ್ದಾರಿ ಸಾಹಿತಿಗಳ ಮೇಲಿದೆ. ಆದರೆ ಇತ್ತೀಚಿನ ಸಾಹಿತ್ಯದ ವರಸೆ ನೋಡಿದರೆ ಇಂದಿನ ಸಾಹಿತಿಗಳು ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿಲ್ಲವೇನೋ ಎಂಬ ಸಂದೇಹ ಉಂಟಾಗುತ್ತದೆ. ಇತ್ತೀಚಿನ ಕಾವ್ಯಗಳಲ್ಲಿ ಹೆಚ್ಚಾಗಿ ಉದ್ದ, ಅಗಲ ಕಾಣುತ್ತಿದೆಯೇ ಹೊರತು ಆಳ ಗೋಚರಿಸುತ್ತಿಲ್ಲ. ಮಹಿಳೆಯರು ಇತ್ತೀಚೆಗೆ ನಿಸ್ಸಂಕೋಚವಾಗಿ ಬರೆಯುತ್ತಿದ್ದಾರೆ. ಇದು ಆಶಾದಾಯಕವಾದುದು.

ಕಾವೇರಿ ವಿವಾದದ ಬಗ್ಗೆ ನೀವೇನಂತೀರಿ..?

ಹಳೆಯ ಒಪ್ಪಂದಕ್ಕೆ ಬದ್ಧರಾಗಿರುವುದರಿಂದ ಬಹಳಷ್ಟು ಅನ್ಯಾಯವಾಗುತ್ತಿದೆ. ರೈತರು ಕಂಗಾಲಾಗಿದ್ದಾರೆ. ಬ್ರಿಟೀಷರ ಕಾಲದ ಕುರುಡು ಒಪ್ಪಂದದಿಂದ ಕರ್ನಾಟಕಕ್ಕೆ ಮಾರಕವಾಗಿದೆ. ಕಾಲಕ್ಕೆ ತಕ್ಕಂತೆ, ಜನಸಂಖ್ಯೆ ಹೆಚ್ಚಳಕ್ಕೆ, ಜೀವನ ವಿಧಾನಕ್ಕೆ ತಕ್ಕಂತೆ ಒಪ್ಪಂದವೂ ಬದಲಾಗಬೇಕು. ಈಗ ನಡೆಯುತ್ತಿರುವ ಹೋರಾಟ ಆಂದೋಲನದ ಪ್ರವಾಹವಾಗಿ ರೂಪುಗೊಳ್ಳಬೇಕು. ಜತೆಗೆ ನೆರೆ ನಾಡಿನವರು ಸಮುದ್ರದ ಪಾಲಾಗುತ್ತಿರುವ ಕಾವೇರಿ ನೀರನ್ನು ಉಳಿಸಿಕೊಳ್ಳುವ ಕೆಲಸ ಮಾಡಿಕೊಳ್ಳಬೇಕು.

ಕನ್ನಡ ಪರ ಚಳವಳಿ ರೂಪುರೇಷೆ, ಜವಾಬ್ದಾರಿಗಳ ಬಗ್ಗೆ ನಿಮ್ಮ ಸಲಹೆ..?

ಕನ್ನಡ ಚಳವಳಿಗಳಿಗಳಿಗೂ ರಾಜಕೀಯ ಬೆರೆತು ಹೋಗಿದೆ. ಸಂಘಟನೆಗಳಲ್ಲಿ ಬಣಗಳಾಗಿವೆ. ಈಗ ನಡೆಯುತ್ತಿರುವ ಹೋರಾಟ ಸರಿಯೇ. ಮತ್ತಷ್ಟು ಉತ್ತಮ ರೀತಿಯಲ್ಲಿ ಸೂಕ್ತ ರೂಪುರೇಷೆಗಳನ್ನು ರೂಪಿಸಿಕೊಳ್ಳಬೇಕು. ಪ್ರತಿಭಟನೆಗಳು ಹಾದಿ ತಪ್ಪದಂತೆ, ಸ್ವಾರ್ಥಕ್ಕೆ ಬಳಕೆಯಾಗದಂತೆ ಎಚ್ಚರವಹಿಸಬೇಕು.
ಯಾವುದೇ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟು ಮಾಡುವುದು ಪ್ರತಿಭಟನೆಯ ಉದ್ದೇಶವಾಗಬಾರದು. ಪ್ರತಿಭಟನೆ ಪರಿಣಾಮಕಾರಿಯಾಗಿ ಇರಬೇಕೇ ಹೊರತು ಅಪಾಯಕಾರಿಯಾಗಬಾರದು. ಈ ನಾಡಿನ ಯಾವುದೇ ಒಳ್ಳೆಯ ಕೆಲಸಗಳಿಗೆ ಮಾಧ್ಯಮಗಳು, ನಾಗರಿಕರು ಕೈ ಜೋಡಿಸಬೇಕು. ಭಾಷೆಗಾಗಿ ಪೊಲೀಸರಿಂದ ಏಟು ತಿಂದು ಹೋರಾಡುವವರನ್ನು ನಾವು ಪ್ರೋತ್ಸಾಹಿಸಬೇಕು.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯಾಯಿತು. ಮುಂದೇನು?

ಈ ಬಗ್ಗೆ ವಿಶ್ವವಿದ್ಯಾಲಯ ಪಂಡಿತರ ವರ್ಗದ ಹಿತಾಸಕ್ತಿಗಳಿಗೆ ಸಿಮೀತವಾಗದೆ, ಹಳಗನ್ನಡ ಗ್ರಂಥಗಳನ್ನು ಪರಿಷ್ಕರಿಸುವುದನ್ನೇ ಉದ್ದೇಶವಾಗಿಸಿಕೊಳ್ಳದೆ ಸಾಮಾಜಿಕ ಸಮಸ್ಯೆಗಳನ್ನು ಒಳಗೊಳ್ಳುವ ಕೆಲಸಗಳನ್ನು ಮಾಡಬೇಕು. ಸಂಶೋಧನೆ ಇತ್ಯಾದಿ ಕೆಲಸಗಳು ಹೆಚ್ಚಾಗಿ ಆಗಬೇಕಿದೆ.ಈ ವಿಷಯದಲ್ಲಿ ಜನ ಸಾಮಾನ್ಯರಲ್ಲೂ ಅರಿವು ಮೂಡಿಸಬೇಕು. ಆಡಳಿತ ಮಟ್ಟದಲ್ಲಿ ಕನ್ನಡದಲ್ಲಿ ವ್ಯವಹರಿಸುವಂತಾಗಬೇಕು ಮತ್ತು ಕನ್ನಡ ಭಾಷೆ ನಮಗೆ ಅನ್ನ ನೀಡುತ್ತದೆ ಎಂಬ ಭರವಸೆ ಜನರಲ್ಲಿ ಮೂಡುವಂತಾಗಬೇಕು.

ಪ್ರತಿಭಾನ್ವಿತ ವ್ಯಕ್ತಿತ್ವವುಳ್ಳ ನಿಸಾರ್ ಅಹಮದ್ ಅವರ ಬಗ್ಗೆ ತಿಳಿದುಕೊಳ್ಳಬಹುದಾದ ಸಾಕಷ್ಟು ವಿಚಾರಗಳಿವೆ. ಅವರ ಬಗ್ಗೆ ನಾನೂ ಒಂದೆರಡು ಮಾತು ಹೇಳಲೇಬೇಕು. ಮಲೆನಾಡಿನ ಪ್ರಕೃತಿ ದೇವಿಯ ವೈಭವದ ಸಿರಿಯ ಜೋಗ ಜಲಪಾತದ ರುದ್ರ ರಮಣೀಯ ಸೌಂದರ್ಯವನ್ನು ತಮ್ಮ ಕಾವ್ಯ ಝರಿಯಲ್ಲಿ ಹರಿಸಿ ಸಾಹಿತ್ಯ ರಸಿಕರನ್ನು ತೇಲಾಡಿಸಿದವರು. ಜತೆಗೆ ಕುರಿಗಳು ಸಾರ್ ಕುರಿಗಳು ಎಂಬಂತಹ ವಿಡಂಬನಾತ್ಮಕ ಕವಿತೆಗಳನ್ನು ಈ ನಾಡಿನ ಜನೆತೆಗೆ ಕೊಟ್ಟವರು ನಿಸಾರ್ ಅಹಮದ್. ತಮ್ಮ ಕಾವ್ಯಗಳಲ್ಲಿ ನವರಸಗಳನ್ನು ಹಿತಮಿತವಾಗಿ ಸಮ್ಮಿಳಿತಗೊಳಿಸಿ ನಾಡಿನ ಶ್ರೇಷ್ಠ ಕವಿ ಎನಿಸಿಕೊಂಡವರು.
ಕೇವಲ 11ನೇ ವಯಸ್ಸಿನಲ್ಲೇ ಇವರ ಕವಿಹೃದಯದ ಮೇಲೆ ಗಾಢ ಪರಿಣಾಮ ಬೀರಿದ್ದು ಜಲಪಾತ. ಆಗಲೇ ಅವರು ಜಲಪಾತದ ವೈಭೋಗವನ್ನು ತಮ್ಮ ಪುಟ್ಟ ಪದ್ಯದ ಮೂಲಕ ಕಟ್ಟಿಕೊಟ್ಟಿದ್ದ ಮೇಧಾವಿ. 82ರ ಹರೆಯದ ನಿಸಾರ್ ಅಹಮದ್‍ಅವರ ಪೂರ್ಣ ಹೆಸರು ಕೊಕ್ಕರೆ ಹೊಸಳ್ಳಿ ಶೇಖ ಹೈದರ ನಿಸಾರ್ ಅಹಮದ್. ನಿಸಾರ್ ವಿಚಾರಾತ್ಮಕ ಮತ್ತು ವಿಮರ್ಶಾತ್ಮಕವಾದ ಗಟ್ಟಿ ಪದ್ಯ, ಗದ್ಯಗಳನ್ನು ನೀಡಿದವರು. ಕನ್ನಡ ನಾಡು ಕಂಡ ಸರ್ವಶ್ರೇಷ್ಠ ಕವಿಗಳಲ್ಲಿ ಒಬ್ಬರು. ಇವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ.

ಶೇಖ್ ಹೈದರ್-ಹಮೀದಾ ಬೇಗಂ ಪುತ್ರರಾದ ನಿಸಾರ್ ಅವರು, ಮಾಧ್ಯಮಿಕ ಶಾಲೆಯನ್ನು ಬೆಂಗಳೂರಿನಲ್ಲಿ ಓದಿ ಪ್ರೌಢಶಾಲೆಯನ್ನು ಹೊಸಕೋಟೆಯಲ್ಲಿ ಕಲಿತರು. ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಭೂವಿಜ್ಞಾನ ಆನರ್ಸ್ ಪದವಿಯನ್ನು 1957ರಲ್ಲಿ ಪಡೆದರು. 1958ರಲ್ಲಿ ಭೂಗರ್ಭ ಸಹಾಯಕ ವಿಜ್ಞಾನಿಯಾಗಿ ಗುಲಬರ್ಗಾದಲ್ಲಿ ಕೆಲಸ ಪ್ರಾರಂಭಿಸಿದರು. ಆ ಕೆಲಸ ಅವರ ಬರವಣಿಗೆಗೆ ಸಹಕಾರಿಯಾಗಲಿಲ್ಲ. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಚಿತ್ರದುರ್ಗ, ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸಿ ಆನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದರು. ಪ್ರಸ್ತುತ ್ಮ ಬೆಂಗಳೂರಿನ ಪದ್ಮನಾಭ ನಗರದಲ್ಲಿ ವಾಸಿಸುತ್ತಿದ್ದಾರೆ.

1960ರಲ್ಲಿ ಪ್ರಕಟಗೊಂಡ ಮನಸು ಗಾಂಧಿ ಬಜಾರು, 1970ರಲ್ಲಿ ಸಂಜೆ ಐದರ ಮಳೆ, 1976ರಲ್ಲಿ ನಿತ್ಯೋತ್ಸವ , 1992ರಲ್ಲಿ ಆಕಾಶಕ್ಕೆ ಸರಹದ್ದುಗಳಿಲ್ಲ, ನವೋಲ್ಲಾಸ ಪ್ರಕಟಗೊಂಡು ಜನಪ್ರಿಯವಾದ ಕೃತಿಗಳು. ನಿತ್ಯೋತ್ಸವ ಒಂದೇ ಕೃತಿ 25ಕ್ಕೂ ಹೆಚ್ಚು ಬಾರಿ ಮುದ್ರಣಗೊಂಡಿರುವುದು ನಿಸಾರ್ ಅವರ ಜನಪ್ರಿಯತೆ ಮತ್ತು ಬರಹದ ತಾಕತ್ತನ್ನು ನಿರೂಪಿಸುತ್ತದೆ. ಭಾರತೀಯ ಭಾಷೆಯಲ್ಲೇ ಮೊಟ್ಟ ಮೊದಲ ಬಾರಿಗೆ 1978ರಲ್ಲಿ ಭಾವಗೀತೆ ಕ್ಯಾಸೆಟ್ ಹೊರತಂದ ಅಗ್ಗಳಿಕೆ ನಿಸಾರ್ ಅವರದು. ಇದು ಕನ್ನಡ ಸುಗಮ ಸಂಗೀತಕ್ಕೆ ನಾಂದಿ ಹಾಡಿತು. ಏಕಾಂತಕ್ಕೆ ಲಾಲ್‍ಬಾಗ್; ಲೋಕಾಂತಕ್ಕೆ ಗಾಂಧಿ ಬಜಾರ್ ಎನ್ನುವ ಅವರ ಉವಾಚ ಸತ್ಯವೇ.

14 ಕವನ ಸಂಕಲನ, 10 ಗದ್ಯ ಕೃತಿಗಳು, 5 ಮಕ್ಕಳ ಸಾಹಿತ್ಯ ಗ್ರಂಥ, 5 ಅನುವಾದ ಗ್ರಂಥ ಸೇರಿದಂತೆ ವಿವಿಧ ಪ್ರಕಾರದ ಹಲವಾರು ಕೃತಿಗಳು, ಲೇಖನಗಳು, ವಿಮರ್ಶೆ ಇತ್ಯಾದಿ ಅವರ ಸಾಹಿತ್ಯಾನುಭವದ ಮೂಸೆಯಿಂದ ಮೂಡಿಬಂದಿವೆ. ಕೆ.ಎಸ್.ನಿಸಾರ್ ಅಹಮದ್ ಅವರ ಕೆಲ ಕವಿತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತೆಲಗು, ತಮಿಳು, ಮರಾಠಿ ಹಾಗೂ ಚೀನಿ ಭಾಷೆಗಳಿಗೆ ಅನುವಾದಗೊಂಡಿವೆ.  ಇವರ ಬದುಕು ಮತ್ತು ಬರಹ ಕುರಿತು ಬೆಂಗಳೂರು ಮತ್ತು ಗುಲಬರ್ಗಾ ವಿವಿಗಳಲ್ಲಿ ಪಿಎಚ್‍ಡಿ ಅಧ್ಯಯನ ಮಾಡಲಾಗಿದೆ.ಇನ್ನು ಇವರ ಬಗ್ಗೆ ಎರಡು ಬೃಹತ್ ಅಭಿನಂದನಾ ಗ್ರಂಥ, ಸಾಕ್ಷ್ಯಚಿತ್ರ, ಸಿಡಿಗಳು ಹೊರಬಂದಿದ್ದು ಸಾಹಿತ್ಯ ಲೋಕದ ಈ ರತ್ನಕ್ಕೆ ಸಂದ ಗೌರವವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ 1984-87ರವರೆಗೆ ರಚನಾತ್ಮಕ ಕೆಲಸಗಳನ್ನು ಮಾಡಿದರು.

ಅವಸರದಲ್ಲಿ, ಒತ್ತಡದಲ್ಲಿ, ಆತ್ಮತೃಪ್ತಿಗಾಗಿ ಬರೆದ ಗೀತೆಗಳಿಗೆ ನಿರೀಕ್ಷೆ ಮೀರಿದ ಕೀರ್ತಿ ಲಭಿಸಿದೆ. ಆದರೆ ಅತ್ಯಂತ ಶ್ರದ್ದೆ, ಕಾಳಜಿಯಿಂದ ಬರೆದ ಗದ್ಯ ಸಾಹಿತ್ಯ ಪ್ರಚುರವಾಗದ, ಚರ್ಚೆಯಾಗದ ಬಗ್ಗೆ ಬೇಸರವೂ ಅವರಿಗೆ.  ಎಂದಿಗೂ ಲಾಬಿಗಿಳಿಯದ ಅಪ್ಪಟ ಕವಿ ನಿಸಾರ್ ಅಹಮದ್ ಅವರಿಗೆ ಹಲವು ಪ್ರಶಸ್ತಿ ಗೌರವಗಳು ಒಲಿದಿವೆ. ಹಕ್ಕಿಗಳು, ಬರಿ ಬೆಡಗಲ್ಲೋ ಅಣ್ಣ, ಅನಾಮಿಕ ಆಂಗ್ಲರು, ಹಿರಿಯರು ಹರಸಿದ ಹೆದ್ದಾರಿ, ಮನದೊಂದಿಗೆ ಮಾತುಕತೆ ಮುಂತಾದ ಕೃತಿಗಳಿಗೆ ಸಾಹಿತ್ಯಅಕಾಡೆಮಿ ಪ್ರಶಸ್ತಿಲಭಿಸಿದೆ. ಹಂಪಿ ವಿವಿಯ ನಾಡೋಜ ಪುರಸ್ಕಾರ, ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ, ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗರಿ, ಭಾರತ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ, ಕುವೆಂಪು ಹೆಸರಿನ ವಿಶ್ವ ಮಾನವ ಪ್ರಶಸ್ತಿ, ವಿ.ಕೃ.ಗೋಕಾಖ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು ಅವರ ಸಾಹಿತ್ಯ ಪ್ರೌಢಿಮೆಗೆ ಸಾಕ್ಷಿಯಾಗಿವೆ.

 

Facebook Comments

Sri Raghav

Admin