ಉಗ್ರರಿಗೆ ಸ್ವರ್ಗವಾದ ಪಾಕ್‍ಗೆ ತಕ್ಕ ಶಾಸ್ತಿ : ಟ್ರಂಪ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Trum--01

ವಾಷಿಂಗ್ಟನ್, ಆ.22-ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗದಂಥ ನೆಲೆ ಕಲ್ಪಿಸುತ್ತಿರುವ ಪಾಕಿಸ್ತಾನ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಉಗ್ರರ ವಿರುದ್ಧ ಟ್ರಂಪ್ ಮತ್ತೆ ಗುಡುಗಿರುವುದರಿಂದ ಪಾಕ್ ಮತ್ತೆ ತಲ್ಲಣಗೊಂಡಿದೆ.
ಕಮಾಂಡರ್-ಇನ್-ಚೀಫ್ ಹುದ್ದೆಯನ್ನೂ ಹೊಂದಿರುವ ಅಧ್ಯಕ್ಷರು ತಮ್ಮ ಪ್ರಥಮ ಪ್ರೈಮ್ ಟೈಮ್ ಟೆಲಿವಿಷನ್ ಭಾಷಣದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದರು. ತನ್ನ ಭಾಷಣದಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಏಷ್ಯಾ ಬಗ್ಗೆ ಅಮೆರಿಕದ ಹೊಸ ನೀತಿಯನ್ನೂ ಸಹ ಪ್ರಕಟಿಸಿದರು. ಅಲ್ಲದೇ ಭಾರತದೊಂದಿಗೆ ಮಹತ್ವದ ಸಹಭಾಗಿತ್ವ ಸಂಬಂಧವನ್ನು ಮುಂದುವರಿಸುವುದಾಗಿಯೂ ಘೋಷಿಸುವ ಮೂಲಕ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.

ಪಾಕಿಸ್ತಾನವು ಭಯೋತ್ಪಾದಕರಿಗೆ ಸ್ವರ್ಗವಾಗಿದೆ. ವಿಧ್ವಂಸಕ ಕೃತ್ಯಗಳು ಮತ್ತು ಹಿಂಸಾಚಾರ ನಡೆಸುವ ಉಗ್ರರಿಗೆ ಆಶ್ರಯ ನೀಡುವುದನ್ನು ಮುಂದುವರಿಸಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಪಾಕಿಸ್ತಾನವು ಇದೇ ರೀತಿ ಮುಂದುವರಿದಿದ್ದೇ ಆದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಟ್ಟ ಕಡೆಯ ಎಚ್ಚರಿಕೆ ನೀಡಿದರು.  ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಅಮೆರಿಕದ ದೀರ್ಘಾವಧಿ ಯುದ್ಧವನ್ನು ಕೊನೆಗೊಳಿಸಲು ಆ ದೇಶದಿಂದ ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ಟ್ರಂಪ್ ನಿರಾಕರಿಸಿದರು. ಅಲ್ಲದೇ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಮತ್ತು ಸ್ಥಿರತೆಗಾಗಿ ಭಾರತವು ಮತ್ತಷ್ಟು ಸಹಕಾರ ನೀಡಬೇಕು. ವಿಶೇಷವಾಗಿ ಆರ್ಥಿಕ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ನೆರವು ನೀಡುವ ಮೂಲಕ ಯುದ್ಧಪೀಡಿತ ಆಫ್ಘನ್‍ಗೆ ಸಹಾಯಹಸ್ತ ಚಾಚಬೇಕು ಎಂದು ಅವರು ಕೋರಿದರು.

ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾ ಪಡೆಗಳು ಹಿಂದಕ್ಕೆ ಸರಿದಿದ್ದೇ ಆದರೆ, ಅಲ್ಲಿ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಭಯೋತ್ಪಾದಕರು ಮತ್ತೆ ಚಿಗಿತುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಆದ್ದರಿಂದ ಅಲ್ಲಿಂದ ಅಮೆರಿಕ ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು.

Facebook Comments

Sri Raghav

Admin