ಎರಡೆಳೆ ಒಂದಾದ ಬೆನ್ನಲ್ಲೇ ಸಿಎಂ ಪಳನಿಸ್ವಾಮಿ ವಜಾಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Palanisami

ಚೆನ್ನೈ, ಆ.22-ಎಐಎಡಿಎಂಕೆ ಎರಡು ಬಣಗಳು ಮತ್ತೆ ಒಂದಾದ ಬೆನ್ನಲ್ಲೇ ಮೂಲೆಗುಂಪಾದ ಪಕ್ಷದ ನಾಯಕ ಟಿಟಿವಿ ದಿನಕರನ್ ಪರ ಶಾಸಕರು ಅಪಸ್ವರ ತೆಗೆದಿದ್ದಾರೆ. ದಿನಕರನ್ ಬೆಂಬಲಿಗರೆಂದು ಹೇಳಿಕೊಂಡ ಶಾಸಕರ ಗುಂಪೊಂದು ಇಂದು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿ ನಂಬಿಕೆ ದ್ರೋಹ ಎಸಗಿರುವ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ನಮ್ಮ ವಿಶ್ವಾಸ ಕಳೆದುಕೊಂಡಿದ್ದಾರೆ. ನಮಗೆ ಅವರಲ್ಲಿ ನಂಬಿಕೆ ಇಲ್ಲ. ಈ ಹಿಂದೆ ಇದೇ ಸರ್ಕಾರದ ವಿರುದ್ಧ ಭಾರೀ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದ ಭಿನ್ನ ಬಣದ ಪನ್ನೀರ್ ಸೆಲ್ವಂ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಔಚಿತ್ಯ ಏನಿತ್ತು ಎಂದು ಕೆಲವು ಶಾಸಕರು ಪ್ರಶ್ನಿಸಿದ್ದಾರೆ.

ಫೆಬ್ರವರಿ 18ರಂದು ವಿಶ್ವಾಸ ಮತ ಸಂದರ್ಭದಲ್ಲಿ ಪಕ್ಷದ ಮುಖ್ಯಸ್ಥೆ ಶಶಿಕಲಾ ನಟರಾಜನ್ ಅವರ ಅಣತಿ ಮೇರೆಗೆ ಪಳನಿಸ್ವಾಮಿ ಅವರಿಗೆ ಎಐಎಡಿಎಂಕೆಯ 122 ಶಾಸಕರು ಬೆಂಬಲ ನೀಡಿದ್ದರು. ಪನ್ನೀರ್ ಸೆಲ್ವಂ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದರು. ಆದರೆ ಈಗ ಮುಖ್ಯಮಂತ್ರಿ ಅವರು ಪನ್ನೀರ್ ಸೆಲ್ವಂ ಜೊತೆ ಕೈ ಜೋಡಿಸಿದ್ದಾರೆ. ವಿಲೀನಕ್ಕೆ ಮುನ್ನ ನಮ್ಮನ್ನು ಸೌಜನ್ಯಕ್ಕಾದರೂ ಸಂಪರ್ಕಿಸಿಲ್ಲ ಎಂದು ದಿನಕರನ್ ಬೆಂಬಲಿಗರು ಆರೋಪಿಸಿದ್ದಾರೆ.

Facebook Comments

Sri Raghav

Admin