ತ್ರಿವಳಿ ತಲಾಖ್ ರದ್ದು, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, ಕಾನೂನು ರೂಪಿಸಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Talaq-Talaq-Talaq

ನವದೆಹಲಿ, ಅ.22-ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ವಿವಾದಾತ್ಮಕ ತ್ರಿವಳಿ ತಲಾಖ್ (ವಿವಾಹ ವಿಚ್ಛೇದನ) ಪದ್ಧತಿಯನ್ನು ಸುಪ್ರೀಂಕೋರ್ಟ್ ಇಂದು ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಘೋಷಿಸಿ ರದ್ದು ಮಾಡಿ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್, ಕೆ.ಜೋಸೆಫ್, ನಾರಿಮನ್, ಯು.ಲಲಿತ್ ಹಾಗೂ ಅಬ್ದುಲ್ ನಜೀರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಈ ಐತಿಹಾಸಿಕ ತೀರ್ಪು ನೀಡಿದೆ.

ಐವರು ನ್ಯಾಯಮೂರ್ತಿಗಳಲ್ಲಿ ಮೂವರು ತ್ರಿವಳಿ ತಲಾಖ್ ರದ್ದುಪಡಿಸುವ ಪರ ತೀರ್ಪು ನೀಡಿದರೆ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ಕುರಿಯನ್ ಜೋಸೆಫ್ ಅವರುಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ 3-2 ಬಹುಮತದ ಆಧಾರದ ಮೇಲೆ ಶತಮಾನಗಳಿಂದಲೂ ಆಚರಣೆಯಲ್ಲಿದ್ದ ಇಸ್ಲಾಂ ಧರ್ಮದ ತ್ರಿವಳಿ ತಲಾಖ್ ರದ್ದು ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಂತಿಮ ತೀರ್ಪಿನಲ್ಲಿ ಘೋಷಿಸಿದರು.
ಇಸ್ಲಾಂ ಧರ್ಮದಲ್ಲಿ ತ್ರಿವಳಿ ತಲಾಖ್ ಆಚರಣೆಯಲ್ಲಿಲ್ಲ. ಇದು ಸಂವಿಧಾನ ಬಾಹಿರ ಮತ್ತು ಇದಕ್ಕೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವೇ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

Talaq

ಮೊದಲಿಗೆ ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ಖೇಹರ್, ತ್ರಿವಳಿ ತಲಾಖ್ ಪದ್ಧತಿಗೆ ಆರು ತಿಂಗಳು ತಡೆಯಾಜ್ಞೆ ನೀಡಿದ್ದಾರೆ. ಈ ಆರು ತಿಂಗಳೊಳಗೆ ಸಂಸತ್ ಹೊಸ ಕಾಯ್ದೆ ರಚನೆ ಮಾಡಬೇಕು. ಈ ವಿಷಯದಲ್ಲಿ ಎಲ್ಲ ಪಕ್ಷಗಳೂ ಅತೀತವಾಗಿ ವರ್ತಿಸಬೇಕೆಂದು ಸಲಹೆ ನೀಡಿದ್ದಾರೆ. ಈ ವಿಷಯದಲ್ಲಿ ನ್ಯಾಯಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿದೆ. ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪಿಗೆ ದೇಶಾದ್ಯಂತ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ತ್ರಿವಳಿ ತಲಾಖ್ ಮತ್ತು ಅದರ ಅನುಸರಣೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಒಟ್ಟು ಏಳು ಅರ್ಜಿಗಳ ಅಂತಿಮ ತೀರ್ಪು ಹೊರ ಬೀಳುತ್ತಿದ್ದಂತೆ ದೇಶದ ಅಸಂಖ್ಯಾತ ಮುಸ್ಲಿಂ ಮಹಿಳೆಯರು ನೆಮ್ಮದ್ದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಾನೂನು ರಚಿಸುವ ಸಂದರ್ಭದಲ್ಲಿ ಮುಸ್ಲಿಂ ಮಂಡಳಿಗಳು ಮತ್ತು ಶಿಯಾ ಕಾನೂನಿ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದೆ.
ಎಲ್ಲ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತ್ರಿವಳಿ ತಲಾಕ್‍ಗೆ ಸಂಬಂಭಪಟ್ಟ ಕಾನೂನು ರಚನೆಯಲ್ಲಿ ಕೇಂದ್ರ ಸರ್ಕಾರಕ್ಕೆ ನೆರವು ನೀಡಬೇಕು. ಈ ಕಾನೂನು ಆರು ತಿಂಗಳ ಒಳಗೆ ಜಾರಿಗೆ ಬರದಿದ್ದರೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಸಂವಿಧಾನ ಪೀಠ ಸ್ಪಷ್ಟ ಪಡಿಸಿದೆ.
ಮುಸ್ಲಿಂ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಗೊಳಿಸಿರುವಾಗ ಸ್ವತಂತ್ರ ಭಾರತ ಏಕೆ ಈ ಪದ್ದತಿಯಿಂದ ಮುಕ್ತ ಹೊಂದಿಲ್ಲ ಎಂದು ಪಂಚ ನ್ಯಾಯಾಧೀಶರ ಪೀಠ ಪ್ರಶ್ನಿಸಿತು.

ಬೇಸಿಗೆ ರಜೆಯ ಅವಧಿಯಲ್ಲಿ ವಿವಿಧ ಅರ್ಜಿಗಳನ್ನು ಒಟ್ಟುಗೂಡಿಸಿ 6 ದಿನಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಮೇ 18ರಂದು ತನ್ನ ತೀರ್ಪನ್ನು ಕಾದಿರಿಸಿತ್ತು.
ವಿಚಾರಣೆ ವೇಳೆ ತಾನು ಬಹುಪತ್ನಿತ್ವ ವಿಚಾರವನ್ನು ಪರಿಗಣಿಸುವುದಿಲ್ಲ. ಪ್ರಸ್ತುತ ವಿಚಾರಣೆಯಲ್ಲಿ ತ್ರಿವಳಿ ತಲಾಖ್ ಎಂಬುದು ಮುಸ್ಲಿಂ ಸಮುದಾಯದ ಮೂಲಭೂತ ಹಕ್ಕಿನ ಭಾಗವೇ ಎಂಬುದನ್ನು ಮಾತ್ರ ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು.   ಸಂವಿಧಾನ ಪೀಠದಲ್ಲಿ ಸಿಐಜಿ ಜೆ.ಎಸ್.ಖೇಹರ್, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್, ಯು.ಯು.ಲಲಿತ್ ಮತ್ತು ಎಸ್.ಅಬ್ದುಲ್ ನಜೀರ್ ಇದ್ದರು.
ತ್ರಿವಳಿ ತಲಾಖ್ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಆರೋಪಿಸಿ ಮಸ್ಲಿಂ ಮಹಿಳೆಯರ ಸಮೂಹ ದೂರು ಸಲ್ಲಿಸಿತ್ತು. ತ್ರಿವಳಿ ತಲಾಖ್ ನಿಷೇಧಿರಸಲು ಕಾನೂನು ಏಕೆ ರೂಪಿಸಿಲ್ಲ ಎಂದು ಪೀಠವು ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಈ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿತ್ತು. ಆದರೆ ತ್ರಿವಳಿ ತಲಾಖ್ ಪದ್ದತಿಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ತ್ರಿವಳಿ ತಲಾಖ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಹಿಳೆಯರ ಸಮೂಹವನ್ನು ಕೇಂದ್ರ ಸರ್ಕಾರ ಬೆಂಬಲಿಸಿತ್ತು. ಈ ವಿಚಾರವನ್ನು ಲಿಂಗ ಸಮಾನತೆ, ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯ ದೃಷ್ಟಿಯಿಂದ ಪರಿಶೀಲನೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗಿತ್ತು. ತ್ರಿವಳಿ ತಲಾಖ್ ಎಂಬುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಸಂಘರ್ಷ ಅಲ್ಲ. ಇದು ಮುಸ್ಲಿಂ ಸಮುದಾಯದೊಳಗಿನ ಪುರುಷರು ಮತ್ತು ಮಹಿಳೆಯರ ನಡುವಿನ ಸಂಘರ್ಷ ಎಂದು ಸರ್ಕಾರ ವಾದಿಸಿತ್ತು.   ತ್ರಿವಳಿ ತಲಾಖ್ ಪದ್ದತಿಯು ಇಸ್ಲಾಂ ಧರ್ಮದ ಮೂಲಭೂತ ಅಂಶ ಅಲ್ಲ ಎಂದೂ ಸಹ ಸರ್ಕಾರವು ವಾದ ಮಂಡಿಸಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin