ತುಮಕೂರಲ್ಲಿ 20 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರು..!

ಈ ಸುದ್ದಿಯನ್ನು ಶೇರ್ ಮಾಡಿ

Fake-Voters--01

– ಚೇಳೂರು ಕುಮಾರ್
ತುಮಕೂರು, ಆ.22- ತುಮಕೂರಿನ ಉಪವಿಭಾಗಾಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗದ ಕೆಂಗಣ್ಣು ಬಿದ್ದಿದೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 15 ರಿಂದ 20 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರು ಇದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಿರುವ ಅಧಿಕಾರಿಗಳ ಮೇಲೆ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದರು.

ಕಳೆದ ಆರು ತಿಂಗಳಿನಿಂದ ಈ ಬಗ್ಗೆ ಆರೋಪ-ಪ್ರತ್ಯಾರೋಪ ಕೇಳಿಬಂದಿತ್ತು.  ಕಳೆದ ಎರಡು ತಿಂಗಳ ಹಿಂದೆ ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸಾಮಾಜಿಕ ಹೋರಾಟಗಾರ ಪಂಚಾಕ್ಷರಯ್ಯ ಎಂಬುವರು ನಕಲಿ ಮತದಾರರ ಪಟ್ಟಿಯ ಸೇರ್ಪಡೆ ವಿಚಾರವಾಗಿ ಸಂಪೂರ್ಣ ದಾಖಲೆ ಸಲ್ಲಿಸಿದ್ದರು. ದಾಖಲೆ ಹಿನ್ನೆಲೆಯಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳಿಗೆ ತನಿಖೆ ಮಾಡಲು ಚುನಾವಣಾ ಆಯೋಗ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿ ತಪ್ಸಮಾ ಜಹೇರಾ ಅವರಿಗೆ ಸೂಚಿಸಿದ್ದರು. ಅದರಂತೆ ಉಪವಿಭಾಗಾಧಿಕಾರಿಗಳು ಕಳೆದ ಐದು ವರ್ಷಗಳಿಂದೀಚೆಗೆ ಮತದಾರರ ಪಟ್ಟಿಗೆ ಸೇರ್ಪಡೆಯಾದ ವರದಿಯನ್ನು ಪಡೆದು ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು.
ಆದರೆ, ಚುನಾವಣಾ ಆಯೋಗ ಪಂಚಾಕ್ಷರಯ್ಯ ಅವರು ಸಲ್ಲಿಸಿರುವ ದಾಖಲೆಗಳಿಗೂ, ಉಪವಿಭಾಗಾಧಿಕಾರಿಗಳು ನೀಡಿರುವ ವರದಿಗೂ ಅಜಗಜಾಂತರ ಕಂಡುಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೊಗದ ಅಧಿಕಾರಿಗಳ ವರದಿಗೆ ಕೆಂಡಾಮಂಡಲವಾಗಿದೆ.

ಇದ್ದಕ್ಕಿದ್ದಂತೆ 20 ಸಾವಿರಕ್ಕೂ ಹೆಚ್ಚು ಮತದಾರರು ಸೇರ್ಪಡೆಯಾಗಲು ಹೇಗೆ ಸಾಧ್ಯ, ನೀಡಿರುವ ವರದಿಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಚುನಾವಣಾ ಆಯೋಗ ಅಂಕಿ-ಅಂಶಗಳ ವರದಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಚುನಾವಣಾ ಆಯೋಗದಿಂದ ಜಿಲ್ಲಾಧಿಕಾರಿಗಳಿಗೆ ಮೌಖಿಕ ಆದೇಶ: ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಕೆ.ಪಿ.ಮೋಹನ್‍ರಾಜ್ ಅವರಿಗೆ ರಾಜ್ಯ ಜಂಟಿ ಮುಖ್ಯ ಚುನಾವಣಾ ಅಧಿಕಾರಿಗಳು ದೂರವಾಣಿ ಕರೆ ಮಾಡಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನೀಡಿರುವ ವರದಿಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಸಮರ್ಪಕವಾಗಿ ತನಿಖೆ ಮಾಡಿ, ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಸೂಚಿಸಿದೆ.

ಲೋಪವೆಸಗಿರುವ ಅಧಿಕಾರಿಗಳು ಯಾರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿ ಜಹೇರಾ ಅವರ ಮೇಲೆ ತೂಗುಗತ್ತಿ ತೂಗುತ್ತಿದೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin