ಬಿಬಿಎಂಪಿ ವಿರುದ್ಧ ಸೊಳ್ಳೆ ಪರದೆ ಹೊದ್ದು ವಿನೂತನ ಪ್ರತಿಭಟನೆ

BBMP-Proitest--01

ಬೆಂಗಳೂರು, ಆ.22- ನಗರದಲ್ಲಿ ಹೆಚ್ಚಾಗಿರುವ ಸೊಳ್ಳೆ ನಿಯಂತ್ರಣ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಸಂಯುಕ್ತ ಜನತಾದಳದ ಕಾರ್ಯಕರ್ತರು ಪಾಲಿಕೆ ಕೇಂದ್ರ ಕಚೇರಿ ಮುಂಭಾಗ ಸೊಳ್ಳೆ ಪರದೆ ಹೊದ್ದು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸೊಳ್ಳೆಗಳ ಹೆಚ್ಚಳದಿಂದ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿದೆ. ಹಾಗಾಗಿ ಅಪಾಯಕಾರಿಯಾದ ಡೆಂಘೀ, ಚಿಕೂನ್‍ಗುನ್ಯ ರೋಗ ಹೆಚ್ಚಾಗಿವೆ. ಈವರೆಗೆ 3722 ಡೆಂಘೀ, 1300 ಚಿಕೂನ್‍ಗುನ್ಯ ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆ ನಿಯಂತ್ರಣ ಮಾಡದಿರುವುದೇ ಇದಕ್ಕೆ ಕಾರಣ ಎಂದು ಮುಖಂಡರು ಆರೋಪಿಸಿದ್ದಾರೆ.

BBMP-Proitest--02

ಪ್ರಮುಖ ಆಸ್ಪತ್ರೆಗಳ ಮಾಹಿತಿ ಪ್ರಕಾರ ಕಳೆದ ಆರು ತಿಂಗಳಲ್ಲಿ 27ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಷ್ಟೆಲ್ಲಾ ಆದರೂ ಸೊಳ್ಳೆ ನಿಯಂತ್ರಣ ಮಾಡಲು ಬಿಬಿಎಂಪಿ ಮೀನಾಮೇಷ ಎಣಿಸುತ್ತಿದೆ. ನಾಲ್ಕು ಬಜೆಟ್‍ನಲ್ಲಿ ಸುಳ್ಳೆ ನಿಯಂತ್ರಣಕ್ಕೆ 27 ಕೋಟಿ ಮೀಸಲಿಟ್ಟಿದ್ದರೂ ಕೂಡ ಈವರೆಗೆ ಕೇವಲ 5 ಕೋಟಿ ಖರ್ಚು ಮಾಡಿದ್ದಾರೆ. ಹಾಗಾಗಿ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳಲು ಕಾರಣ ಎಂದು ದೂರಿದರು.

ಅಧಿಕಾರಿಗಳನ್ನು ಕೇಳಿದರೆ ರೋಗ ಉಲ್ಬಣಗುಂಡಿರುವ ಪ್ರದೇಶಗಳಿಗೆ ಸಂಪರ್ಕ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಸಬೂಬು ಹೇಳುತ್ತಾರೆ. ಆದರೂ ಸೊಳ್ಳೆ ಕಡಿಮೆಯಾಗಿಲ್ಲ. ಡೆಂಘೀ, ಚಿಕೂನ್ ಗುನ್ಯ ಹೆಚ್ಚುತ್ತಲೇ ಇದೆ. ಇವುಗಳ ಔಷಧಿ ಕೂಡ ದುಬಾರಿ. ಹಾಗಾಗಿ ಬಡವರು ಪರಿತಪಿಸುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ಪಾಲಿಕೆ ಆಸ್ಪತ್ರೆಗಳಲ್ಲಿ ರಿಯಾಯ್ತಿ ದರದಲ್ಲಿ ಔಷಧಿ ನೀಡಬೇಕು. ಸೊಳ್ಳೆ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜೆಡಿಯು ಕಾರ್ಯಕರ್ತರು ಒತ್ತಾಯಿಸಿದರು.

Facebook Comments

Sri Raghav

Admin