ಬೆಂಗಳೂರಲ್ಲಿ ಕಳೆದ 24 ಗಂಟೆಯೊಳಗೆ 3 ಮರ್ಡರ್..!

ಈ ಸುದ್ದಿಯನ್ನು ಶೇರ್ ಮಾಡಿ

murder

ಬೆಂಗಳೂರು, ಆ.22- ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ರೌಡಿ ಶೀಟರ್ ಸೇರಿದಂತೆ ಮೂರು ಕಡೆ ಕೊಲೆ ನಡೆದಿದೆ. ತಲಘಟ್ಟಪುರದಲ್ಲಿ ಅಟ್ಟಾಡಿಸಿಕೊಂಡು ಟ್ಯಾಬ್ಲೆಟ್ ರಘುವನ್ನು ಹತ್ಯೆ ಮಾಡಿದ್ದರೆ, ಮಾರತ್‍ಹಳ್ಳಿಯಲ್ಲಿ ಕಳ್ಳರೆಂದು ಆರೋಪಿಸಿ ವೈಯರ್‍ನಿಂದ ಕಾರ್ಮಿಕನನ್ನು ಕೊಲ್ಲಲಾಗಿದೆ. ಇನ್ನು ಕೌಟುಂಬಿಕ ವಿಷಯವಾಗಿ ಶ್ರೀರಾಂಪುರದಲ್ಲಿ ಪತ್ನಿಯನ್ನು ಪತಿಯೇ ಹಗ್ಗದಿಂದ ಕುತ್ತಿಗೆ ಬಿಗಿದು ಕೊಂದಿದ್ದಾನೆ.

ರೌಡಿ ಟ್ಯಾಬ್ಲೆಟ್ ರಘುನನ್ನು ಕೊಚ್ಚಿ ಕೊಲೆ : 

ಬೆಂಗಳೂರು, ಆ.22- ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದ ರೌಡಿಶೀಟರ್ ಮೇಲೆ ಗುಂಪೊಂದು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಘು ಅಲಿಯಾಸ್ ಟ್ಯಾಬ್ಲೆಟ್(30) ಕೊಲೆಯಾದ ರೌಡಿ ಶೀಟರ್.  ಈತನ ವಿರುದ್ಧ ಹಲವು ಠಾಣೆಗಳಲ್ಲಿ 10 ಪ್ರಕರಣಗಳಿವೆ. ಕುಮಾರಸ್ವಾಮಿಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ಈತನ ಮೇಲೆ 2012ರ ನಂತರ ಯಾವುದೇ ಪ್ರಕರಣಗಳಿರಲಿಲ್ಲ.

ರಘು ತನ್ನ ನಾಲ್ವರು ಸ್ನೇಹಿತರೊಂದಿಗೆ ಮಂಡ್ಯದ ಬಳಿಯ ದೇವಸ್ಥಾನಕ್ಕೆ ಹೋಗಿ ತಡರಾತ್ರಿ ಕಾರಿನಲ್ಲಿ ಹಿಂದಿರುಗುತ್ತಿದ್ದರು.  ಈ ವೇಳೆ ರಘು ಸ್ನೇಹಿತನೊಬ್ಬ 100 ಅಡಿ ರಸ್ತೆಯ ರೇಶ್ಮೆನಗರದ ಬಳಿ ಇಳಿಯಬೇಕಿದ್ದರಿಂದ ಕಾರನ್ನು ನಿಲ್ಲಿಸುತ್ತಿದ್ದಂತೆ ಹಿಂದಿನಿಂದ ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಬಂದಿದ್ದ ಗುಂಪು ಏಕಾಏಕಿ ರಘು ಮೇಲೆ ಲಾಂಗು ಮತ್ತು ಮಚ್ಚಿನಿಂದ ದಾಳಿ ಮಾಡಿ ತಲೆ, ಕೈ-ಕಾಲು, ಹೊಟ್ಟೆಗೆ ಹೊಡೆದು ಪರಾರಿಯಾಗಿದೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡ ರಘು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಾಳಿ ವೇಳೆ ರಘು ಜತೆಯಲ್ಲಿದ್ದವರ ಪೈಕಿ ಒಬ್ಬಾತ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದು, ಇನ್ನುಳಿದವರು ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಸುದ್ದಿ ತಿಳಿದ ತಲಘಟ್ಟಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಶವವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಹಳೆ ದ್ವೇಷದಿಂದ ಈ ಕೊಲೆ ನಡೆದಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ. ಆದಷ್ಟು ಶೀಘ್ರ ಅವರನ್ನು ಬಂಧಿಸುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಈ ಸಂಜೆಗೆ ತಿಳಿಸಿದ್ದಾರೆ.
ಪತ್ನಿಯನ್ನು ಹಗ್ಗದಿಂದ ಬಿಗಿದು ಕೊಂದ : 

ಬೆಂಗಳೂರು, ಆ.22- ಹಣಕಾಸು ವಿಚಾರವಾಗಿ ಪತ್ನಿಯೊಂದಿಗೆ ಜಗಳ ವಾಡಿದ ಪತಿ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಹನುಮಂತನಗರದ ನಿವಾಸಿ ಜಾನಕಿ ಜ್ಯೋತಿ(35) ಕೊಲೆಯಾದ ಮಹಿಳೆ.
ಜಾನಕಿ ಜ್ಯೋತಿ- ಚಂದ್ರಶೇಖರ್(42) ದಂಪತಿಗೆ ತ್ರಿವಳಿ ಮಕ್ಕಳು ಸೇರಿ ಐದು ಮಂದಿ ಮಕ್ಕಳಿದ್ದು, ಈ ಮೊದಲು ಮಾಗಡಿ ರಸ್ತೆಯಲ್ಲಿ ವಾಸವಾಗಿದ್ದರು.
ಈ ಹಿಂದೆ ಜಾನಕಿ ಜ್ಯೋತಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ಎರಡು ತಿಂಗಳಿನಿಂದ ಕೆಲಸ ತೊರೆದು ಮನೆಯಲ್ಲೇ ಇದ್ದರು. ಪತಿ ಚಂದ್ರಶೇಖರ್ ಫ್ಲವರ್ ಡೆಕೋರೆಟರ್ ವೃತ್ತಿ ಮಾಡಿಕೊಂಡಿದ್ದನು.

ಚಂದ್ರಶೇಖರ್ ಪತ್ನಿಗೆ ಹಣ ಕೊಡುವಂತೆ ಹಾಗೂ ನಿವೇಶನ ಬರೆದುಕೊಡುವಂತೆ ಪೀಡಿಸುತ್ತಿದ್ದನಲ್ಲದೆ ಇದೇ ವಿಚಾರವಾಗಿ ಹಲವು ಬಾರಿ ಜಗಳವೂ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ನೊಂದಿದ್ದ ಜಾನಕಿ ಶ್ರೀರಾಂಪುರದ ಆನಂದಪುರದಲ್ಲಿರುವ ತನ್ನ ತವರು ಮನೆ ಬಳಿಯೇ ಬೇರೆ ಮನೆ ಮಾಡಿಕೊಂಡು ಮಕ್ಕಳೊಂದಿಗೆ ವಾಸವಾಗಿದ್ದರು.

ನಂತರದ ದಿನಗಳಲ್ಲಿ ಚಂದ್ರಶೇಖರ್ ಬಂದು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದನು. ಪುನಃ ಪುನಃ ಹಣ ಕೊಡುವಂತೆ ಹಾಗೂ ನಿವೇಶನವನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಪತ್ನಿಯೊಂದಿಗೆ ಚಂದ್ರಶೇಖರ್ ಜಗಳವಾಡಿದ್ದು, ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಪತ್ನಿ ಜೊತೆ ಇದೇ ವಿಚಾರಕ್ಕೆ ಜಗಳವಾಡಿ ಹಗ್ಗದಿಂದ ಜ್ಯೋತಿ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ನಾಲ್ಲು ಗಂಟೆ ಸುಮಾರಿನಲ್ಲಿ ಮಗು ಎದ್ದು ಅಮ್ಮನ ಬಳಿಗೆ ಹೋಗಿದೆ. ಅಮ್ಮ ಎಚ್ಚರವಾಗದಿದ್ದಾಗ ಅಕ್ಕನನ್ನು ಎಬ್ಬಿಸಿದೆ. ಅಕ್ಕಂದಿರು ಎದ್ದು ನೋಡಿ ಗಾಬರಿಯಾಗಿ ಸಮೀಪದಲ್ಲೇ ಇರುವ ಅಜ್ಜಿಗೆ ಹೇಳಿದ್ದಾರೆ.

ತಕ್ಷಣ ಕುಟುಂಬದವರು ಜ್ಯೋತಿ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದರಾದರೂ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸುದ್ದಿ ತಿಳಿದ ಶ್ರೀರಾಮಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶವವನ್ನು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಾರ್ಮಿಕನಿಗೆ
ವಿದ್ಯುತ್ ಶಾಕ್ ಕೊಟ್ಟು ಕೊಲೆ : 

ಬೆಂಗಳೂರು, ಆ.22- ಕಾರ್ಮಿಕರ ನಡುವೆ ಜಗಳ ನಡೆದು ಅದು ವಿಕೋಪಕ್ಕೆ ತಿರುಗಿ ಒಬ್ಬನಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿರುವ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಮೂಲತಃ ಪಶ್ಚಿಮ ಬಂಗಾಳದ ಬಷೀರ್ (20) ಕೊಲೆಯಾದ ಚಿಂದಿ ಆಯುವ ಯುವಕ. ಘಟನೆಯಲ್ಲಿ ಅಫೀಜ್ (19), ಅಜ್ಮಿಲ್ (20) ಎಂಬುವರು ಗಾಯಗೊಂಡಿದ್ದಾರೆ.

ಮುನಿಕೋಳ ಕೆರೆ ಆವರಣದಲ್ಲಿ ನೂರಾರು ಮಂದಿ ಬೆಂಗಾಲಿ ಮೂಲದ ಕಾರ್ಮಿಕರು ಶೆಡ್ ಹಾಕಿಕೊಂಡು ನೆಲೆಸಿದ್ದಾರೆ. ಈ ಕೆರೆಯ ನೀರನ್ನು ಟ್ಯಾಂಕರ್ ಮೂಲಕ ಸಾಗಿಸಿ ವಿವಿಧೆಡೆ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಇಲ್ಲಿ ವಿದ್ಯುತ್ ಸಂಪರ್ಕ ಮತ್ತು ಮೋಟರ್‍ಗಳನ್ನು ಕೂಡ ಇರಿಸಲಾಗಿತ್ತು.
ನಿನ್ನೆ ಕಾರ್ಮಿಕರ ನಡುವೆ ಗಲಾಟೆ ನಡೆದಿತ್ತು. ಕಾರ್ಮಿಕರಾದ ಅಜ್ಮಿಲ್, ಬಷೀರ್, ಅಫೀಜ್ ಎಂಬುವರ ಮೇಲೆ ಹಲ್ಲೆ ನಡೆಸಿ ನಂತರ ಅವರನ್ನು ಪಂಪ್‍ಹೌಸ್‍ನೊಳಗೆ ಕೂಡಿ ಹಾಕಲಾಗಿತ್ತು.

ಈ ವೇಳೆ ಬಷೀರ್ ಸ್ಥಳದಲ್ಲೇ ಸಾವನ್ನಪ್ಪಿದರೆ ಗಾಯಗೊಂಡ ಇಬ್ಬರನ್ನು ವಿಮ್ಸ್ ಆಸ್ಪತ್ರೆಗೆ ತಕ್ಷಣ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin