ರಾಜಕಾರಣಿಗಳನ್ನು ಕಾಡುತ್ತಿದೆ ಐಟಿ-ಎಸಿಬಿ ಭೂತ..! ಹಿಟ್ ಲಿಸ್ಟ್ ನಲ್ಲಿ ಮತ್ತಷ್ಟು ಸಚಿವರು..?

ಈ ಸುದ್ದಿಯನ್ನು ಶೇರ್ ಮಾಡಿ

Income-Tax

ಬೆಂಗಳೂರು, ಆ.22- ರಾಜ್ಯ ರಾಜಕಾರಣದಲ್ಲಿ ಇದೀಗ ಐಟಿ ಹಾಗೂ ಎಸಿಬಿ ಭಾರೀ ಸದ್ದು ಮಾಡುತ್ತಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಲ್ಲಿ ನಡುಕ ಹುಟ್ಟಿದೆ. ಯಾರ ಮೇಲೆ ಯಾವ ಸಂದರ್ಭದಲ್ಲಿ ದಾಳಿಯಾಗುತ್ತದೆಯೋ, ಇನ್ನ್ಯಾರನ್ನು ಅಧಿಕಾರಿಗಳು ಬಂಧಿಸಿಬಿಡುತ್ತಾರೆಂಬ ಭೂತ ಎಲ್ಲರಲ್ಲೂ ಕಾಡುತ್ತಿದೆ. ಹೀಗಾಗಿ ಐಟಿ ಇಲ್ಲವೆ ಎಸಿಬಿ ಅಂದರೆ ಅಧಿಕಾರಿಗಳಿಗಿಂತ ರಾಜಕಾರಣಿಗಳೇ ಬೆಚ್ಚಿ ಬೀಳುತ್ತಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ, ಸಂಬಂಧಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಒಂದೆಡೆಯಾದರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.ಕೇಂದ್ರ ಸರ್ಕಾರ ಐಟಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತದೆ ಎಂಬುದು ಕೈ ಪಕ್ಷದ ನಾಯಕರ ಅಂಬೋಣ.
ಇದಕ್ಕೆ ತಿರುಗೇಟು ನೀಡುತ್ತಿರುವ ಬಿಜೆಪಿ ಎಸಿಬಿಯನ್ನು ಪ್ರತಿಪಕ್ಷದ ನಾಯಕರ ಮೇಲೆ ಛೂ ಬಿಡಲು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತದೆ ಎಂದು ಅಬ್ಬರಿಸುತ್ತಿದೆ. ಸಾಲದ್ದಕ್ಕೆ ರಾಜ್ಯಪಾಲರಿಗೆ ದೂರು ಸಹ ನೀಡಲಾಗಿದೆ. ಹೀಗೆ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ಐಟಿ-ಎಸಿಬಿ ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುತ್ತಿದ್ದಾರೆ. ಇದು ಇನ್ನೂ ಮುಂದುವರಿಯುವ ಲಕ್ಷಣಗಳೇ ಗೋಚರಿಸಿವೆ.

ನೀವು ಕೇಂದ್ರ ಸರ್ಕಾರದ ಮೂಲಕ ಐಟಿ ದುರುಪಯೋಗಪಡಿಸಿಕೊಂಡರೆ ನಾವು ಎಸಿಬಿ ಮೂಲಕ ನಿಮ್ಮನ್ನು ಮಟ್ಟ ಹಾಕುತ್ತೇವೆಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಜಿದ್ದಿಗೆ ಬಿದ್ದವರಂತೆ ತೊಡೆ ತಟ್ಟಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆದರೆ ಪ್ರತಿಯಾಗಿ ಕಾಲಗರ್ಭದಲ್ಲಿ ಹೂತು ಹೋಗಿದ್ದ ಪ್ರಕರಣಗಳನ್ನು ಹೊರತೆಗೆದು ಎಸಿಬಿಯಿಂದ ದೂರು ದಾಖಲಿಸುವ ಅಸ್ತ್ರ ಆಡಳಿತಾರೂಢ ಸರ್ಕಾರದಿಂದ ನಡೆಸುತ್ತದೆ ಎಂಬ ಆಪಾದನೆ ಕೇಳಿಬರುತ್ತಿದೆ.
ಯಾವಾಗ ಡಿ.ಕೆ.ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರೋ ಕಾಂಗ್ರೆಸ್‍ನ ಅರ್ಧ ಝಂಗಾಬಲವೇ ಉಡುಗಿಹೋಯಿತು. ಕಾಕತಾಳೀಯ ಎಂಬಂತೆ ಇದೇ ವೇಳೆ ಅಸ್ತ್ರಕ್ಕೆ ಪ್ರತಿ ಅಸ್ತ್ರ ಎನ್ನುವಂತೆ ಶಿವರಾಮ ಕಾರಂತ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಡಿ ನೋಟಿಫೈ ಮಾಡಲಾಗಿದೆ ಎಂದು ಯಡಿಯೂರಪ್ಪ ವಿರುದ್ಧ ಎರಡು ಎಫ್‍ಐಆರ್ ದಾಖಲಿಸಲಾಗಿದೆ.

ಇನ್ನಷ್ಟು ದೂರು ಸಾಧ್ಯತೆ:

ಮೂಲಗಳ ಪ್ರಕಾರ, ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ ಇನ್ನಷ್ಟು ದೂರುಗಳು ದಾಖಲಾಗುವ ಸಾಧ್ಯತೆಯಿದೆ. ಖಾಸಗಿ ವ್ಯಕ್ತಿ ಇಲ್ಲವೆ ಆರ್‍ಟಿಐ ಕಾರ್ಯಕರ್ತರ ಮೂಲಕ ದೂರು ದಾಖಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.ಈಗಾಗಲೇ ಎರಡು ಎಫ್‍ಐಆರ್ ದಾಖಲಾಗಿರುವುದರ ಜತೆಗೆ ಇನ್ನೂ 16 ದೂರುಗಳನ್ನು ನೀಡಲು ಖಾಸಗಿ ವ್ಯಕ್ತಿಗಳು ಮುಂದೆ ಬಂದಿದ್ದಾರೆ.

ಬಂಧನದ ಭೀತಿ..?

ಇಂದು ಹೈಕೋರ್ಟ್‍ನಲ್ಲಿ ಯಡಿಯೂರಪ್ಪ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ತಮ್ಮ ವಿರುದ್ಧ ಎಸಿಬಿಯಲ್ಲಿ ದುರುದ್ದೇಶಪೂರ್ವಕವಾಗಿ ದೂರು ದಾಖಲಾಗಿದ್ದು, ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ಎಫ್‍ಐಆರ್ ದಾಖಲಿಸಿದ್ದಾರೆಂದು ಬಿಎಸ್‍ವೈ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಒಂದು ವೇಳೆ ಹೈಕೋರ್ಟ್‍ನ ಏಕಸದಸ್ಯ ಪೀಠ ಜಾಮೀನು ನೀಡಿದರೆ ಯಡಿಯೂರಪ್ಪ ಕಾನೂನಿನ ಗಂಡಾಂತರದಿಂದ ಪಾರಾಗುತ್ತಾರೆ. ಇಲ್ಲದಿದ್ದರೆ ಅರ್ಜಿ ವಜಾಗೊಂಡರೆ ತಕ್ಷಣವೇ ಎಸಿಬಿ ಅಧಿಕಾರಿಗಳು ಯಡಿಯೂರಪ್ಪನವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಕಂಡುಬಂದರೆ ಯಡಿಯೂರಪ್ಪನವರನ್ನು ಬಂಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಡಿಕೆಗೂ ಕಂಟಕ:

ಇತ್ತ ಎಸಿಬಿ ಮೂಲಕ ಬಿಜೆಪಿ ಬೆದರಿಸಲು ಸರ್ಕಾರ ಮುಂದಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಒಂದು ವೇಳೆ ಎಸಿಬಿ ಅಧಿಕಾರಿಗಳು ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಯಡಿಯೂರಪ್ಪನವರನ್ನು ಬಂಧಿಸಿದರೆ ರಾಷ್ಟ್ರಮಟ್ಟದಲ್ಲಿ ಕಮಲ ನಾಯಕರಿಗೆ ಮುಜುಗರ ಉಂಟಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕೇಂದ್ರ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಮೇಲೆ 300 ಕೋಟಿಗೂ ಅಧಿಕ ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಯಮದಂತೆ ಬೇನಾಮಿ ಆಸ್ತಿ ಹೊಂದುವುದು ಕಾನೂನು ಬಾಹಿರ. ಇತ್ತ ಯಡಿಯೂರಪ್ಪ ಬಂಧನಕ್ಕೊಳಪಟ್ಟರೆ ಕೇಂದ್ರ ಸರ್ಕಾರ ಐಟಿ ಮೂಲಕ ಶಿವಕುಮಾರ್‍ಗೆ ಹೆಡೆಮುರಿ ಕಟ್ಟಿಸುವುದು ಶತಸಿದ್ಧ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಇನ್ನಷ್ಟು ದಾಳಿ ಸಾಧ್ಯತೆ:

ಮೂಲಗಳ ಪ್ರಕಾರ, ಎಸಿಬಿ ದುರ್ಬಳಕೆಯಾಗಿದೆ ಎಂಬುದು ಕಂಡುಬಂದರೆ ಆಡಳಿತಾರೂಢ ಕಾಂಗ್ರೆಸ್ ನಾಯಕರ ಮೇಲೆ ಇನ್ನಷ್ಟು ದಾಳಿ ನಡೆಸಲು ಐಟಿ ತಂಡ ಸಿದ್ಧವಾಗಿದೆ. ಸಚಿವರು, ಶಾಸಕರು ಹಾಗೂ ಮುಖ್ಯಮಂತ್ರಿ ಆಪ್ತರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲು ಈಗಾಗಲೇ ಐಟಿ ತನಿಖಾ ತಂಡ ಕಾರ್ಯೋನ್ಮುಖವಾಗಿದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin