ವಿಲೀನ-ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Bank--01

ಬೆಂಗಳೂರು, ಆ.22- ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣ ವಿರೋಧಿಸಿ ರಾಷ್ಟ್ರೀಕೃತ ಬ್ಯಾಂಕುಗಳ ಉದ್ಯೋಗಿಗಳು ರಾಜ್ಯಾದ್ಯಂತ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ಜನವಿರೋಧಿ ಬ್ಯಾಕಿಂಗ್ ಸುಧಾರಣೆಗಳನ್ನು ವಿರೋಧಿಸಿ ದೇಶ ವ್ಯಾಪಿ ಒಂದು ದಿನದ ಮುಷ್ಕರಕ್ಕೆ ಯುನೈಟೆಡ್ ಪೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಘಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕುಗಳು ಇಂದು ಕಾರ್ಯನಿರ್ವಹಿಸದೆ ಪ್ರತಿಭಟನೆ ನಡೆಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಯಿತು. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಸಾವಿರಾರು ಬ್ಯಾಂಕ್ ನೌಕರರು ಸಮಾವೇಶಗೊಂಡು ಕೇಂದ್ರ ಸರ್ಕಾರದ ಜನವಿರೋಧಿ ಬ್ಯಾಂಕ್ ಸುಧಾರಣೆಗಳನ್ನು ಖಂಡಿಸಿದರು.

DSC_5355

ರಾಜ್ಯದ ಸುಮಾರು 90ಸಾವಿರ ಬ್ಯಾಂಕ್ ನೌಕರರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಎಲ್ಲಾ ಬ್ಯಾಂಕುಗಳು ಮುಚ್ಚಿದ್ದರಿಂದ ಸಾರ್ವಜನಿಕರ ದೈನಂದಿನ ವ್ಯವಹಾರಕ್ಕೆ ಅಡಚಣೆಯಾಯಿತು. ಕಾರ್ಪೊರೇಟ್ ವಲಯದ ಸುಸ್ತಿ ಸಾಲಗಳು ಹೆಚ್ಚುತ್ತಿವೆ. ಗ್ರಾಹಕರ ಮೇಲೆ ಹೆಚ್ಚುವರಿ ಸೇವಾ ಶುಲ್ಕವನ್ನು ಹೇರಲಾಗುತ್ತಿದೆ. ಜನರ ಉಳಿತಾಯ ಖಾತೆಗಳ ಹಣಕ್ಕೆ ಅತಿ ಕಡಿಮೆ ಬಡ್ಡಿ ನೀಡಲಾಗುತ್ತಿದೆ ಎಂದು ಬ್ಯಾಂಕ್ ಯೂನಿಯನ್ ಸಂಚಾಲಕ ವಸಂತ ರೈ ತಿಳಿಸಿದರು.
ಸುಸ್ತಿ ಸಾಲಗಳ ವಸೂಲಾತಿಗಾಗಿ ಸಂಸತ್ ನೇಮಿಸಿರುವ ಸಮಿತಿಯ ಶಿಫಾರಸುಗಳನ್ನು ತಕ್ಷಣ ಜಾರಿ ಮಾಡಬೇಕು. ವಸೂಲಾಗದ ಸಾಲಗಳ ಮರು ಪಾವತಿಗಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

DSC_5341

ಬ್ಯಾಂಕುಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಹಾಲಿ ಇರುವ ಬ್ಯಾಂಕ್ ಸಿಬ್ಬಂದಿಯ ಮೇಲೆ ಕೆಲಸದ ಹೊರೆ ಹೆಚ್ಚಾಗುತ್ತಿದೆ. ಕೂಡಲೇ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಬೇಕು. ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣ ಯೋಜನೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.  ಬ್ಯಾಂಕುಗಳಿಗೆ ಅಗತ್ಯವಿರುವಷ್ಟು ಬಂಡವಾಳವನ್ನು ಸರ್ಕಾರ ಪೂರೈಸುತ್ತಿಲ್ಲ. ಇದರಿಂದ ಬ್ಯಾಂಕುಗಳ ವಿಸ್ತರಣೆಗೆ ಧಕ್ಕೆಯಾಗುತ್ತದೆ. ಅಲ್ಲದೆ, ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಖಾಸಗಿ ಮತ್ತು ಸಣ್ಣ ಬ್ಯಾಂಕುಗಳ ಸ್ಥಾಪನೆಗೆ ಪರವಾನಗಿ ನೀಡುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ದುರ್ಬಲಗೊಳ್ಳುತ್ತಿವೆ.

DSC_5323

ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುವ ಕ್ರಮವನ್ನು ನಿಲ್ಲಿಸಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಗ್ರಾಹಕರ ಸ್ನೇಹಿ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ನೌಕರರು ಆಗ್ರಹಿಸಿದರು. ಉದ್ಯಮ ಸಂಸ್ಥೆಗಳ ವಸೂಲಾಗದ ಸಾಲ, ಎನ್‍ಪಿಎ ವಜಾ ಮಾಡುವ ನೀತಿಯನ್ನು ಕೈ ಬಿಡಬೇಕು. ಸುಸ್ತಿದಾರರಾಗುವುದನ್ನು ಕ್ರಿಮಿನಲ್ ಅಪರಾಧ ಎಂದು ಘೋಷಿಸಬೇಕು.  ಎನ್‍ಪಿಎ ವಸೂಲಾತಿಗೆ ಸಂಸತ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕು. ಎನ್‍ಪಿಎ ಹೊರೆಯನ್ನು ವಿವಿಧ ಶುಲ್ಕಗಳ ಹೆಚ್ಚಳದ ನೆಪದಲ್ಲಿ ಗ್ರಾಹಕರ ಮೇಲೆ ವಿಧಿಸಬಾರದು ಎಂದು ಒತ್ತಾಯಿಸಿದ್ದಾರೆ.

 

ಸಾಂಕೇತಿಕವಾಗಿ ಒಂದು ದಿನದ ಮುಷ್ಕರವನ್ನು ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಕೆಲ ಖಾಸಗಿ ಬ್ಯಾಂಕುಗಳು ಇಂದಿನ ಮುಷ್ಕರದಲ್ಲಿ ಸುಮಾರು 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಪಾಲ್ಗೊಂಡಿದ್ದರು.

Facebook Comments

Sri Raghav

Admin