ಸಂಪುಟಕ್ಕೆ ಇಬ್ರಾಹಿಂ ಸೇರಿಸಲು ಸಿಎಂ ಸಿದ್ದು ಕಸರತ್ತು

Siddaramaiah-Ibrahim

ಬೆಂಗಳೂರು, ಆ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ಸಿ.ಎಂ.ಇಬ್ರಾಹಿಂ ಸಚಿವ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇದುದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರ ಬರಲಿದೆ. ಆ.19ರಂದು ನಡೆಯಬೇಕಿದ್ದ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮವನ್ನು ಇಬ್ರಾಹಿಂ ಅವರಿಗಾಗಿ ಮುಂದೂಡಲಾಯಿತು ಎಂದು ಹೇಳಲಾಗಿದೆ.

ರಾಜ್ಯದ ಅತಿ ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಸಮುದಾಯವನ್ನು ಓಲೈಸಲು ಸಿಎಂ ಸಿದ್ದರಾಮಯ್ಯ ಮುಂದಾಗಿ ದ್ದಾರೆ. ಈಗಾಗಲೇ ಮುಸ್ಲಿಂ ಸಮುದಾಯದಿಂದ ರೋಷನ್ ಬೇಗ್, ತನ್ವೀರ್‍ಸೇಠ್ ಅವರುಗಳು ಸಚಿವರಾಗಿದ್ದಾರೆ. ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡುವುದು ಬೇಡ ಎಂಬ ಆಕ್ಷೇಪಗಳು ಕಾಂಗ್ರೆಸ್‍ನಲ್ಲಿ ಕೇಳಿ ಬರುತ್ತಿವೆ. ಬಾಕಿ ಇರುವ ಐದು ತಿಂಗಳಿಗಷ್ಟೇ ಇಬ್ರಾಹಿಂ ಸಚಿವರಾಗುತ್ತಿದ್ದು, ಅದಕ್ಕೆ ಅಡ್ಡಿಪಡಿಸಬೇಡಿ ಎಂದು ಮುಖ್ಯಮಂತ್ರಿ ಅವರು ಕೂಡ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕುರುಬ ಸಮುದಾಯದಿಂದ ಆಕಾಂಕ್ಷಿಗಳಾಗಿದ್ದ ಎಚ್.ಎಂ.ರೇವಣ್ಣ, ಸಿ.ಎಸ್.ಶಿವಳ್ಳಿ ಅವರಿಗೆ ಸಿಎಂ ಅವರ ಈ ನಿರ್ಧಾರಿದಂದ ನಿರಾಶೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ದಲಿತ ಸಮುದಾಯದಿಂದ ಆರ್.ಬಿ.ತಿಮ್ಮಾಪುರ್ ಅವರುಗಳ ಜತೆಗೆ ಮೋಟಮ್ಮ, ಪಿ.ಎಂ. ನರೇಂದ್ರಸ್ವಾಮಿ, ಆನೇಕಲ್ ಶಿವಣ್ಣ ಅವರುಗಳು ಪೈಪೋಟಿಗಿಳಿದಿದ್ದಾರೆ. ಲಿಂಗಾಯಿತ ಸಮುದಾಯದಿಂದ ಷಡಾಕ್ಷರಿ ಅವರ ಹೆಸರು ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ. ಸಚಿವ ಸಂಪುಟ ವಿಸ್ತರಣೆ ದಿನೇ ದಿನೇ ಹೊಸ ತಿರುವು ಪಡೆಯುತ್ತಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಲಾಬಿಯೂ ಕೂಡ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಗೌರಿ-ಗಣೇಶ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Facebook Comments

Sri Raghav

Admin