ಸಾಧಕರಿಗೆ ‘ಮಲೆನಾಡು ಮಿತ್ರ’ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ
ಒಂದು ಮಲೆನಾಡು ಸೀಮೆಯಲ್ಲಿ ನೃತ್ಯ ರೂಪಕದ ದೃಶ್ಯ.
ಒಂದು ಮಲೆನಾಡು ಸೀಮೆಯಲ್ಲಿ ನೃತ್ಯ ರೂಪಕದ ದೃಶ್ಯ.

ಬೆಂಗಳೂರು, ಆ.22-ಕಳೆದ ಹಲವು ವರ್ಷಗಳಿಂದ ಮಲೆನಾಡು ಮಿತ್ರವೃಂದ ತನ್ನದೇ ಆದ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳನ್ನು ರಾಜಧಾನಿ ಬೆಂಗಳೂರಿನಲ್ಲಿ ಆಚರಿಸಿಕೊಂಡು ಬರುತ್ತಿದೆ. ಮಲೆನಾಡು ಮೂಲದ ಘಮಲುಗಳ ಎಳೆಗಳು, ಅಲ್ಲಿನ ಜಾನಪದ ಕಲೆಗಳು, ಮಣ್ಣಿನ ಸೊಗಡು, ಜೀವನ ಚಿತ್ರಣಗಳನ್ನು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮಲೆನಾಡಿಗರ ಮುಂದೆ ಅನಾವರಣಗೊಳಿಸುತ್ತಾ ಮಿತ್ರವೃಂದ ತನ್ನದೇ ಆದ ಶೈಲಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಾ, ಆಗಾಗ್ಗೆ ಸಾಧಕರನ್ನು ಸನ್ಮಾನಿಸುತ್ತಾ, ಜನಸೇವಕರನ್ನು ಗೌರವಿಸುತ್ತಾ ಮಲೆನಾಡಿನ ಸೊಬಗನ್ನು ಹೈಟೆಕ್ ಸಿಟಿಯಲ್ಲಿ ಮೆರಗುಗೊಳಿಸುತ್ತಿರುವುದು ಮೆಚ್ಚುವಂತಹ ವಿಷಯ.

ಈ ನಿಟ್ಟಿನಲ್ಲಿ ಮಲೆನಾಡು ಮಿತ್ರವೃಂದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸರ್‍ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ಮಲೆನಾಡು ಸಾಧಕರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಿತು. ಒಂದು ಮಲೆನಾಡು ಸೀಮೆಯಲ್ಲಿ ಎಂಬ ರಮೇಶ್ ಬೇಗಾರ್ ತಂಡದವರು ನಡೆಸಿಕೊಟ್ಟ ಜಾನಪದ ಕಾರ್ಯಕ್ರಮ ಎಲ್ಲರೂ ತಲೆತೂಗುವಂತಿತ್ತು.  ಇಡೀ ರಾಷ್ಟ್ರಕ್ಕೆ ಮಾದರಿಯಾದ ಮೇಳಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರನ್ನು ಇಲ್ಲಿ ಪುರಸ್ಕರಿಸಲಾಯಿತು. ಮಲೆನಾಡು ಸಾಧಕ ಪ್ರಶಸ್ತಿಗೆ ಭಾಜನರಾದ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷ್ಣಕುಮಾರ್ ಅರಳಿಮಠ, ಶಿಕ್ಷಣ ಕ್ಷೇತ್ರದಲ್ಲಿ ಕೂತುಗೋಡು ಕಿರಿಯ ಪ್ರಾಥಮಿಕ ಪಾಠಶಾಲೆ, ಉದ್ಯಮ ಕ್ಷೇತ್ರದ ಸಾಧಕ ವಿಕಾಸ್ ಬೇಗಾನೆ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರದ ಎಚ್.ಎಸ್.ವೆಂಕಟೇಶ್ ಸಿಗಾಸೆ ಅವರನ್ನು ಸನ್ಮಾನಿಸಲಾಯಿತು.

ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಿ ಮಾತನಾಡಿ, ಮಲೆನಾಡಿನ ಸೊಬಗು, ಪ್ರಕೃತಿಯ ವೈಭವ ವನ್ನು ಕೊಂಡಾಡಿದರು. ಅಲ್ಲದೆ ಕಾಗೋಡು ಚಳವಳಿ ಶಾಂತವೇರಿ ಗೋಪಾಲಗೌಡರ ಸಾಧನೆಯನ್ನು ಸ್ಮರಿಸಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಕುವೆಂಪು ಅವರ ವಿಶ್ವಮಾನವ ಸಂದೇಶ ರಾಷ್ಟ್ರದ ಕನಸೇ ಇಲ್ಲದಂತಹ ಸಂದರ್ಭದಲ್ಲಿ ಅವರು ರಚಿಸಿದ ನಾಡಗೀತೆ ಬಗ್ಗೆ ಸಂದರ್ಭೋಚಿತವಾಗಿ ವಿವರಗಳನ್ನು ನೀಡಿದರು. ಮೇಗಳಿ ಮಾದರಿ ಗ್ರಾಮ ಪಂಚಾಯ್ತಿ ನನ್ನ ಕ್ಷೇತ್ರದಲ್ಲಿರುವುದು ನನ್ನ ಹೆಮ್ಮೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅನಿಲ್ ಹೊಸಕೊಪ್ಪ ಮಾತನಾಡಿ, ಸಂಘ-ಸಂಸ್ಥೆಗಳು, ಮನರಂಜನೆಯ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿರದೆ ತಮ್ಮ ನೆಲದ ಸೊಗಡನ್ನು ಅಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವತ್ತ ಸಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಮಲೆನಾಡು ಮಿತ್ರವೃಂದ ಮಲೆನಾಡಿನ ಸಮಸ್ಯೆಗಳ ಪರಿಹಾರದತ್ತ ಚಿತ್ತ ಹರಿಸಿದೆ. ಅಡಕೆ ನಿಷೇಧದ ಗುಮ್ಮ ಬಿಟ್ಟಾಗ ಅದರ ಬಗ್ಗೆ ಜಾಗೃತಿ ಮೂಡಿಸಿದೆ. ಮಲೆನಾಡನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಹೇಳಿದಾಗ, ನಮ್ಮ ವೃಂದ ಮೊದಲನೆ ದುಂಡುಮೇಜಿನ ಪರಿಷತ್ ಸಭೆ ನಡೆಸಿ ಜಾಗೃತಿ ಮೂಡಿಸಿತ್ತು ಎಂದು ಹೇಳಿದರು.
ಶಾಸಕ ಡಿ.ಎನ್.ದೇವರಾಜ್ ಮತ್ತಿತರರು ಪಾಲ್ಗೊಂಡಿದ್ದರು. ಖ್ಯಾತ ನ್ಯಾಯವಾದಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್‍ಕುಮಾರ್, ಮುರೋಳಿ, ರಘು ಖದ್ರಿ, ಎಸ್.ಕೆ.ತಿಮ್ಮಪ್ಪ ಹಾಗೂ ಷಣ್ಮುಖ ಎಸ್.ಕೆ., ಮಹೇಶ್‍ಗೌಡ ಮುಂತಾದವರು ನೆರವು ನೀಡಿದ್ದನ್ನು ಅಧ್ಯಕ್ಷರು ಸ್ಮರಿಸಿದರು.

Facebook Comments

Sri Raghav

Admin