ಅಕ್ರಮ ಭೂ ಖರೀದಿ ಪ್ರಕರಣದಲ್ಲಿ ರಾಬರ್ಟ್‍ವಾದ್ರಾಗೆ ಮತ್ತೆ ಕಾನೂನು ಸಂಕಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Robert--01

ನವದೆಹಲಿ, ಆ.23- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ನಡೆಸಿದ್ದಾರೆ ಎನ್ನಲಾದ ಭೂ ಹಗರಣವನ್ನು ಸಿಬಿಐ ತನಿಖೆ ನಡೆಸುವಂತೆ ರಾಜಸ್ಥಾನ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.  ಇದರಿಂದ ಸೋನಿಯಾ ಅವರ ಅಳಿಯ ಹಾಗೂ ಪ್ರಿಯಾಂಕ ವಾದ್ರಾ ಅವರ ಪತಿಯಾಗಿರುವ ರಾಬರ್ಟ್ ವಾದ್ರಾ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ರಾಜಸ್ತಾನದ ಬಿಕನೇರ್ ಜಿಲ್ಲೆಯಲ್ಲಿ 374.44 ಹೆಕ್ಟೇರ್ ಭೂಮಿಯನ್ನು ರಾಬರ್ಟ್ ವಾದ್ರಾ 2009-11ರ ಮಧ್ಯದಲ್ಲಿ ಕಾನೂನು ಬಾಹೀರವಾಗಿ ಖರೀದಿಸಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಾಗಿದೆ.

ಬಿಕನೇರ್ ಜಿಲ್ಲೆಯ ಘಜ್ನೇರ್ ಮತ್ತು ಕೊಲಯತ್ ಪೊಲೀಸ್ ಠಾಣೆಯಲ್ಲಿ ವಾದ್ರಾ ವಿರುದ್ಧ 18 ಎಫ್‍ಐಆರ್ ದಾಖಲು ಮಾಡಲಾಗಿದೆ. ಇದು ಸಾವಿರಾರು ಕೋಟಿ ಭೂ ವಂಚನೆಯಾಗಿರುವುದರಿಂದ ಸಿಬಿಐ ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಇಲಾಖೆಗೆ ರಾಜಸ್ತಾನ ಮುಖ್ಯಮಂತ್ರಿ ವಸುಂಧರ ರಾಜೆ ನಿನ್ನೆ ಪತ್ರ ಬರೆದಿದ್ದಾರೆ. ವಾದ್ರಾ ನಡೆಸಿರವು ಭೂ ಹಗರಣವನ್ನು ಸಿಬಿಐ ತನಿಖೆ ನಡೆಸುವಂತೆ ನಾವು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದೇವೆ. ವಾದ್ರಾ ವಿರುದ್ದ ವಿವಿಧ ಠಾಣೆಗಳಲ್ಲಿ ಒಟ್ಟು 18 ಎಫ್‍ಐಆರ್‍ಗಳು ದಾಖಲಾಗಿವೆ. ಇದು ಸಾವಿರಾರು ಕೋಟಿ ವಂಚನೆಯಾಗಿರುವುದರಿಂದ ಸಿಬಿಐಯಿಂದ ಮಾತ್ರ ಸತ್ಯಾಂಶ ಹೊರತರಲು ಸಾಧ್ಯವಾಗುತ್ತದೆ. ಆದ್ದರಿಂದಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಿಬಿಐ ತನಿಖೆ ನಡೆಸುವಂತೆ ಪತ್ರ ಬರೆದಿರುವುದಾಗಿ ರಾಜಸ್ತಾನದ ಗೃಹ ಸಚಿವ ಗುಲಾಬ್‍ಚಂದ್ ಕಠಾರಿಯಾ ಖಚಿತ ಪಡಿಸಿದ್ದಾರೆ.

ಬಿಕನೇರ್ ಜಿಲ್ಲೆಯ ಘಜ್ನೇರ್ ಪೊಲೀಸ್ ಠಾಣೆಯಲ್ಲಿ 16 ಹಾಗೂ ಕೊಲಯತ್ ಪೊಲೀಸ್ ಠಾಣೆಯಲ್ಲಿ 2 ಎಫ್‍ಐಆರ್‍ಗಳನ್ನು ವಾದ್ರಾ ವಿರುದ್ಧ ಪೊಲೀಸರು ದಾಖಲಿಸಿದ್ದಾರೆ.2009-11ರಲ್ಲಿ ಅತ್ಯಂತ ಬೆಲೆ ಬಾಳುವ ಕೃಷಿ ಜಮೀನನ್ನು ವಾದ್ರಾ ಕಡಿಮೆ ದರದಲ್ಲಿ ಖರೀದಿ ಮಾಡಿದ್ದಾರೆ. ಅಂದಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಕಾನೂನು ಉಲ್ಲಂಘಿಸಿ ವಾದ್ರಾಗೆ ಜಮೀನು ಖರೀದಿಸಲು ಶಿಫಾರಸು ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ.

ಒಂದು ಹಂತದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರದ ಶಿಫಾರಸನ್ನು ರದ್ದು ಮಾಡಿದ್ದರು. ಕಾನೂನಿನ ಪ್ರಕಾರ ಕೃಷಿ ಜಮೀನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದ್ದರು. ಆದರೆ, ಈ ಅಧಿಕಾರಿಯನ್ನು ಎತ್ತಂಗಡಿ ಮಾಡಿ ಕೊನೆಗೆ ಬೇನಾಮಿ ವ್ಯಕ್ತಿಯ ಹೆಸರಿನಲ್ಲಿ 374.44 ಹೆಕ್ಟೇರ್ ಜಮೀನನ್ನು ಖರೀದಿ ಮಾಡಿದ್ದಾರೆ. ರಾಬರ್ಟ್ ವಾದ್ರಾ ಒಡೆತನದ ಸ್ಕೈಲೈಟ್‍ಹಾಸ್ಪಿಟಾಲಿಟಿ ಸಂಸ್ಥೆ ಕಾನೂನು ಬಾಹಿರವಾಗಿ ಜಮೀನು ಖರೀದಿ ಮಾಡಿದ್ದು, ನೂರಾರು ಕೋಟಿ ಬೇನಾಮಿ ಹಣದ ವಹಿವಾಟು ನಡೆದಿರುವುದನ್ನು ಜಾರಿ ನಿರ್ದೇಶನಾಲಯ ಈಗಾಗಲೇ ಪತ್ತೆಹಚ್ಚಿದೆ. ಇದರ ಸೂಚನೆಯಂತೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಬಿಕನೇರ್ ಜಿಲ್ಲೆಯ 34 ಗ್ರಾಮಗಳಲ್ಲಿ ಜಮೀನು ಖರೀದಿಸಿರುವ ವಾದ್ರಾ ವಿರುದ್ಧ ಈ ಹಿಂದೆ ಸೇನಾ ಅಧಿಕಾರಿಗಳು ಕೆಂಗಣ್ಣು ಬೀರಿದ್ದರು. ಇದು ಸೇನಾ ವಲಯ ಘಟಕವಾಗಿದ್ದು, ಇಲ್ಲಿ ತರಬೇತಿ ಶಿಬಿರಗಳು ನಡೆಯುತ್ತವೆ. ವಾದ್ರಾ ನಕಲಿ ದಾಖಲನೆಗಳನ್ನು ಸೃಷ್ಟಿಸಿ ಜಮೀನು ಖರೀದಿ ಮಾಡಿದ್ದಾರೆ ಎಂದು ಆರೋಪಿಸಿತ್ತು. ಇದೀಗ ರಾಜಸ್ತಾನ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಿರುವುದು ಮುಂದೆ ನಡೆಯುವ ಬೆಳವಣಿಗೆಗಳ ಬಗ್ಗೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.

Facebook Comments

Sri Raghav

Admin