ಉಳ್ಳವರ ಪಾಲಾಗುತ್ತಿದೆಯೇ ಇಂದಿರಾ ಕ್ಯಾಂಟೀನ್‍ನ ಬಡವರ ಊಟ…?

ಈ ಸುದ್ದಿಯನ್ನು ಶೇರ್ ಮಾಡಿ

Indira-Canteen

ಬೆಂಗಳೂರು, ಆ.23- ಮಧ್ಯಮ ವರ್ಗದ ಹಸಿವು ನೀಗಿಸಲು ರಾಜ್ಯ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‍ನ ಮೂಲ ಉದ್ದೇಶ ಬುಡಮೇಲಾಗುವಂತಿದೆ.  ಏಕೆಂದರೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇ ಬಡವರು, ಕೂಲಿಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರ ಹಸಿವು ನೀಗಿಸುವ ಕಾರಣದಿಂದ.

ಕಳೆದ ಒಂದು ವಾರದಿಂದ ಆರಂಭವಾಗಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಮಾಡುತ್ತಿರುವುವರನ್ನು ಗಮನಿಸಿದರೆ ಮಧ್ಯಮವರ್ಗದವರಿಗಿಂತ ಹೆಚ್ಚಾಗಿ ಆರ್ಥಿಕವಾಗಿ ಸಬಲರಾಗಿರುವವರೇ ಇಲ್ಲಿ ಕಂಡು ಬರುತ್ತಿದ್ದಾರೆ.  ಯಾವ ಉದ್ದೇಶವಿಟ್ಟುಕೊಂಡು ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತ್ತೋ ಇದು ಉಳ್ಳವರ ಪಾಲಾಗುತ್ತದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ 71 ಇಂದಿರಾ ಕ್ಯಾಂಟೀನ್‍ಗಳು ಕಾರ್ಯಾರಂಭ ಮಾಡಿವೆ. ಬೆಳಗ್ಗೆ 7ರಿಂದ 10ರವರೆಗೆ 5ರೂ. ದರದಲ್ಲಿ ಇಡ್ಲಿ, ರೈಸ್‍ಬಾತ್, ಖಾರಾಬಾತ್ ನೀಡಲಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ 10ರೂ. ದರದಲ್ಲಿ ಅನ್ನ-ಸಾಂಬಾರ್ ವಿತರಣೆ ಮಾಡಲಾಗುತ್ತಿದೆ.

Indira-Canteen--021

ಉಳ್ಳವರ ಪಾಲು:

ಬಹುತೇಕ ಇಂದಿರಾ ಕ್ಯಾಂಟೀನ್‍ಗಳಲ್ಲಿ ಆರ್ಥಿಕವಾಗಿ ಸಬಲ ಹಾಗೂ ಸದೃಢವಾಗಿರುವವರು ಬಂದು ಸಾಲಿನಲ್ಲಿ ನಿಂತು ತಿಂದು ಹೋಗುತ್ತಿರುವ ದೃಶ್ಯಗಳು ಎಲ್ಲೆಡೆ ಸರ್ವೆ ಸಾಮಾನ್ಯವಾಗಿವೆ. ಬೆಳಗ್ಗೆ ವಾಯು ವಿವಾಹರಕ್ಕೆ ಬರುವವರು, ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಹಿಂದಿರುಗುವವರು ಕಾರು, ಇಲ್ಲವೇ ದ್ವಿಚಕ್ರ ವಾಹನದಲ್ಲಿ ಬಂದು ತಿಂಡಿ ತಿನ್ನುತ್ತಾರೆ. ಐದು ರೂ.ಗೆ ತಿಂಡಿ ಸಿಗುವಾಗ ನಾವ್ಯಾಕೆ ಬಿಡಬೇಕು ಎಂಬುದು ಬಹುತೇಕರ ವಾದ.  ದಿನಕ್ಕೆ ಇಂದಿರಾ ಕ್ಯಾಂಟೀನ್‍ನಲ್ಲಿ 300 ಮಂದಿಗೆ ಮಾತ್ರ ತಿಂಡಿ, ಆಹಾರ ನೀಡಲಾಗುತ್ತದೆ. ಎಷ್ಟೋ ಮಂದಿ ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದ ಜನರು ಈಗಿನ ದರದಲ್ಲಿ ತಿಂಡಿ ತಿನ್ನಲು ಸಾಧ್ಯವಾಗುವುದಿಲ್ಲ. 30-40 ರೂ. ಕೊಟ್ಟು ದುಬಾರಿ ಹೋಟೆಲ್‍ಗಳಲ್ಲಿ ತಿನ್ನುವ ಬದಲು ಇಂದಿರಾ ಕ್ಯಾಂಟೀನ್‍ನಲ್ಲಿ ತಿಂದರೆ ಹಣ ಉಳಿತಾಯ ಮಾಡಬಹುದು ಎಂಬುದು ಬಹುತೇಕರ ಲೆಕ್ಕಾಚಾರ. ಆದರೆ, ಬೆಳಗ್ಗೆ ಕ್ಯಾಂಟೀನ್ ಬಾಗಿಲು ತೆರೆಯುವುದಕ್ಕೂ ಮುನ್ನವೇ ವಾಯು ವಿಹಾರಕ್ಕೆ ಬರುವ ಅನೇಕ ಮಂದಿ ಸ್ಥಿತಿವಂತರು ತಿಂಡಿ ತಿನ್ನಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇದರಿಂದ ನಿಜವಾಗಿಯೂ ಸಿಗಬೇಕಾದ ಫಲಾನುಭವಿಗಳು ತಿಂಡಿ, ಊಟ ಯಾವುದೂ ಸಿಗದೆ ಹತಾಶೆಯಿಂದ ಹಿಡಿಶಾಪ ಹಾಕುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬರುತ್ತಿದೆ.

ಹೆಚ್ಚಳಕ್ಕೆ ಬೇಡಿಕೆ:

ಸದ್ಯಕ್ಕೆ ಪ್ರತಿ ಇಂದಿರಾ ಕ್ಯಾಂಟೀನ್‍ನಲ್ಲಿ ದಿನಕ್ಕೆ 300 ಮಂದಿಗೆ ಮಾತ್ರ ಊಟ, ತಿಂಡಿ ವ್ಯವಸ್ಥೆ ಇದೆ. ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಒಂದೊಂದು ಕ್ಯಾಂಟೀನ್‍ನಲ್ಲಿ ತಿಂಡಿ ಹಾಗೂ ಊಟ ಸೇವಿಸಲು ಪ್ರತಿ ಪಾಳಿಯಲ್ಲಿ ಕನಿಷ್ಠ 2ರಿಂದ 3ಸಾವಿರ ಜನ ಸಾಲು ಗಟ್ಟಿ ನಿಲ್ಲುವ ದೃಶ್ಯ ಕಾಣುತ್ತದೆ.
300 ಮಂದಿಗೆ ಮಾತ್ರ ಆಹಾರ ವಿತರಣೆ ಮಾಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಬದಲಿಗೆ ಇದರ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂಬುದು ಬಹುತೇಕ ಸಾರ್ವಜನಿಕರ ಒತ್ತಾಯ.
ನಿರ್ಬಂಧ ಹೇರಬೇಕು:

ಇನ್ನು ಕ್ಯಾಂಟೀನ್‍ನಲ್ಲಿ ಬಂದು ಆಹಾರ ಸೇವಿಸುವವರಿಗೆ ಕೆಲವು ನಿರ್ಬಂಧ ಹಾಕುವುದು ಭವಿಷ್ಯದ ದೃಷ್ಟಿಯಿಂದ ಒಳಿತು. ಪ್ರಧಾನಿ ನರೇಂದ್ರ ಮೋದಿ ಉಳ್ಳವರು ಗ್ಯಾಸ್ ಸಬ್ಸಿಡಿಯನ್ನು ಹಿಂದಿರುಗಿಸಬೇಕು ಎಂದು ದೇಶದ ಜನತೆಗೆ ಒಂದು ಕರೆ ಕೊಟ್ಟರು. ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ಹರಿದು ಬಂತು. ಇದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಉಳ್ಳವರು ಕ್ಯಾಂಟೀನ್ ತಿಂಡಿ ತಿನ್ನುವ ಬದಲು ಬಡವರು, ಕೂಲಿ ಕಾರ್ಮಿಕರು, ಮಧ್ಯಮವರ್ಗದವರು ಹಾಗೂ ಕೊಳೆಗೇರಿ ಜನರಿಗೆ ಅನುಕೂಲ ಕಲ್ಪಿಸಲಿ ಎಂದು ಮನವಿ ಮಾಡಬೇಕು. ಸಾಧ್ಯವಾಗದಿದ್ದರೆ ಕ್ಯಾಂಟೀನ್‍ನಲ್ಲಿ ಬಂದು ತಿಂದು ಹೋಗುವವರಿಗೆ ಗುರುತಿನ ಚೀಟಿ ನೀಡುವುದು ಇಲ್ಲವೇ ನಿರ್ಬಂಧ ಹಾಕುವ ಅನಿವಾರ್ಯತೆ ಇದೆ.

ಯಶಸ್ವಿಯತ್ತ ಅಪ್ಪಾಜಿ ಕ್ಯಾಂಟೀನ್:

Appaji-Canteen--0004

ಇನ್ನು ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಆರಂಭಕ್ಕೂ ಮುನ್ನವೇ ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೆಸರಿನಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ. ಹನುಮಂತನಗರ ವಾರ್ಡ್‍ನಲ್ಲಿ ಆರಂಭವಾಗಿರುವ ಅಪ್ಪಾಜಿ ಕ್ಯಾಂಟೀನ್‍ಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಾರಂಭಿಕವಾಗಿ ಶರವಣ ಒಂದು ಕ್ಯಾಂಟೀನ್ ಆರಂಭಿಸಿದ್ದು, ನಿರ್ವಹಣೆ, ಊಟ-ತಿಂಡಿ ಶುಚಿತ್ವಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ಅಪ್ಪಾಜಿ ಕ್ಯಾಂಟೀನ್‍ನಲ್ಲಿ 3ರೂ.ಗೆ ಕಾಫಿ, ಟೀ, 5ರೂ.ಗೆ ತಟ್ಟೆ ಇಡ್ಲಿ, ಖಾರಾಭಾತ್, ಕೇಸರಿಭಾತ್, ವಡೆ, 10ರೂ.ಗೆ ಮುದ್ದೆ, ಅನ್ನಸಾಂಬಾರ್, ಹಪ್ಪಳ ನೀಡಲಾಗುತ್ತದೆ.

ಪ್ರತೀ ದಿನ ಅಪ್ಪಾಜಿ ಕ್ಯಾಂಟೀನ್‍ನಲ್ಲಿ 400 ಮಂದಿಗೆ ಮಾತ್ರ ಊಟ, ತಿಂಡಿ ವ್ಯವಸ್ಥೆ ಇದೆ. ಈ ಭಾಗದಲ್ಲಿರುವ ಮಧ್ಯಮವರ್ಗದವರು, ಕಾಲೇಜು ವಿದ್ಯಾರ್ಥಿಗಳು, ತರಕಾರಿ ಮಾರುವವರು, ಕೂಲಿ ಕಾರ್ಮಿಕರು ಕ್ಯಾಂಟೀನ್‍ಗೆ ಬಂದು ಸರತಿಯಲ್ಲಿ ನಿಂತು ಊಟ, ತಿಂಡಿ ಸೇವಿಸುತ್ತಾರೆ.
ನಾವು ಪ್ರಾರಂಭಿಕವಾಗಿ ಒಂದು ಕ್ಯಾಂಟೀನ್ ಮಾತ್ರ ಆರಂಭಿಸಿದ್ದೇವೆ. ಮೊದಲ ತಿಂಗಳ ಖರ್ಚು, ವೆಚ್ಚ, ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯಗಳು, ಊಟ, ತಿಂಡಿ ಶುಚಿತ್ವ ಎಲ್ಲವನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್ಪಾಜಿ ಕ್ಯಾಂಟೀನ್‍ಗಳನ್ನು ಆರಂಭಿಸುವ ಚಿಂತನೆ ಇದೆ ಎನ್ನುತ್ತಾರೆ ಶರವಣ.
ಕಳೆದ ಒಂದು ತಿಂಗಳಿನಿಂದ ಇಂದಿರಾ ಕ್ಯಾಂಟೀನ್ ಆರಂಭವಾಗುವ ಮುನ್ನವೇ ನಾವು ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದೆವು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ ರಾಜಕೀಯ ಲಾಭಕ್ಕಾಗಿ ಇದನ್ನು ಪ್ರಾರಂಭ ಮಾಡುತ್ತಿದ್ದಾರೆ ಎಂದು ಕುಹುಕವಾಡಿದ್ದರು.

ನಮಗೆ ರಾಜಕೀಯ ಲಾಭ, ನಷ್ಟಕ್ಕಿಂತ ಬಡವರು, ಮಧ್ಯಮವರ್ಗದವರು ಎರಡು ಹೊತ್ತು ನೆಮ್ಮದಿಯಾಗಿ ಊಟ ತಿನ್ನಬೇಕು ಎಂಬ ಕಾರಣಕ್ಕಾಗಿ ಆರಂಭಿಸಿದ್ದೇವೆ. ಎಲ್ಲರೂ ನೆಮ್ಮದಿಯಾಗಿದ್ದರೆ ನಮಗೂ ಕೂಡ ಸಂತಸ ಎಂದು ಶರವಣ ಹರ್ಷ ವ್ಯಕ್ತಪಡಿಸಿದ್ದಾರೆ.

 

ಅಮ್ಮನ ಮಾದರಿ ಅನುಸರಿಸಲಿ:

Canteen--01

ಇನ್ನು ನೆರೆಯ ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆರಂಭಿಸಿದ್ದ ಅಮ್ಮ ಕ್ಯಾಂಟೀನ್ ಕೂಡ ಇದೀಗ ಯಶಸ್ಸಿನ ಮುನ್ನುಗ್ಗುತ್ತಿದೆ. ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಜಯಲಲಿತಾ ಮಧ್ಯಮವರ್ಗದವರನ್ನು ಗುರಿಯಾಗಿಟ್ಟುಕೊಂಡು ಅಮ್ಮಾ ಕ್ಯಾಂಟೀನ್ ಪ್ರಾರಂಭದಲ್ಲಿ ಚನ್ನೈನಲ್ಲಿ ಆರಂಭಿಸಿದರು. ಇದಕ್ಕೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾದ ಕಾರಣ ಇಂದು ತಮಿಳುನಾಡಿನಾದ್ಯಂತ ಅಮ್ಮ ಕ್ಯಾಂಟೀನ್‍ಗಳು ತಲೆ ಎತ್ತಿವೆ. ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ರಿಕ್ಷಾವಾಲಾಗಳು, ರೈತರು, ಕಟ್ಟಡ ಕಾರ್ಮಿಕರು ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಜನರು ನೆಮ್ಮದಿಯಾಗಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಸೇವಿಸುತ್ತಾರೆ.  ರಾಜ್ಯ ಸರ್ಕಾರ ಕೂಡ ಹೆಚ್ಚಿನ ಕ್ಯಾಂಟೀನ್‍ಗಳನ್ನು ಆರಂಭಿಸುವುದರ ಜತೆಗೆ ಇದು ಸಬಲರಿಗೆ ಅನುಕೂಲವಾಗುವ ಬದಲು ಯಾವ ಉದ್ದೇಶವಿಟ್ಟುಕೊಂಡು ಆರಂಭಿಸಲಾಗಿತ್ತೋ ಅದರ ಕಡೆ ಗಮನ ಹರಿಸಬೇಕಾದ ಅಗತ್ಯವಿದೆ ಎಂಬುದು ಸಾರ್ವಜನಿಕರ ಒತ್ತಾಯ.

ಒಟ್ಟು ಕ್ಯಾಂಟೀನ್-71
ಬೆಳಗಿನ ತಿಂಡಿ -ದರ 5ರೂ.
ಇಡ್ಲಿ, ರೈಸ್‍ಬಾತ್, ಖಾರಾಬಾತ್, ಚಿತ್ರಾನ್ನ, ಪಲಾವು
ಮಧ್ಯಾಹ್ನ ಹಾಗೂ ರಾತ್ರಿ ಊಟ- ದರ 10ರೂ.
ಅನ್ನ, ಸಾಂಬಾರು
ಅಪ್ಪಾಜಿ ಕ್ಯಾಂಟೀನ್:
ಕಾಫಿ, ಟೀ- 3ರೂ.
ಬೆಳಗಿನ ತಿಂಡಿ: ತಟ್ಟೆ ಇಡ್ಲಿ, ಖಾರಾಭಾತ್, ಕೇಸರಿಭಾತ್, ವಡೆ-5ರೂ.
ಮಧ್ಯಾಹ್ನ ಊಟ: ಮುದ್ದೆ, ಬಸ್ಸಾರು, ಅನ್ನ, ಹಪ್ಪಳ, ಉಪ್ಪಿನ ಕಾಯಿ-10ರೂ.
ಪ್ರತಿ ದಿನ 400 ಮುದ್ದೆ, 400 ತಟ್ಟೆ ಇಡ್ಲಿ, 400 ಕಾಫಿ, ಟೀ, 400 ಖಾರಾಭಾತ್.
ಅಮ್ಮ ಕ್ಯಾಂಟೀನ್:
ಬೆಳಗಿನ ತಿಂಡಿ: ಇಡ್ಲಿ ಸಾಂಬಾರ್-1ರೂ.
ಮಧ್ಯಾಹ್ನದ ಊಟ: ಅನ್ನ,ಸಾಂಬಾರ್-5ರೂ., ಮೊಸರನ್ನ-3ರೂ.

Facebook Comments

Sri Raghav

Admin