‘ನಾನೇ ಮುಂದಿನ ಮುಖ್ಯಮಂತ್ರಿ’ ಎಂದ ಡಿಕೆಶಿ, ಕಾಂಗ್ರೆಸ್ ನಲ್ಲಿ ಕಂಪನ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--015

ಬೆಂಗಳೂರು, ಆ.23-ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕೈ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. ಕಳೆದ ನಾಲ್ಕು ವರ್ಷಗಳಿಂದ ತುಟಿ ಬಿಚ್ಚದ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ನಾನೇ ಮುಖ್ಯಮಂತ್ರಿ ಎಂಬ ಹೇಳಿಕೆ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನಿದ್ದೆಗೆಡಿಸಿದೆ. ಜೆಡಿಎಸ್‍ನ ಏಳು ಭಿನ್ನ ಶಾಸಕರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದ ನಂತರ ಕೈ ನಾಯಕರ ನಡುವಿನ ಭಿನ್ನಮತ ಭುಗಿಲೆದ್ದಿದೆ.

ಕಾಂಗ್ರೆಸ್‍ನಲ್ಲಿ ಖರ್ಗೆ, ಪರಂ, ಸಿಎಂ ಮತ್ತು ಡಿಕೆಶಿ ಬಣಗಳಿದ್ದು, ಇದುವರೆಗೂ ಯಾರೂ ಪಕ್ಷಕ್ಕೆ ಹಾನಿಯಾಗುವಂತೆ ನಡೆದುಕೊಂಡಿರಲಿಲ್ಲ. ಆದರೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆ ಈ ನಾಲ್ವರು ಪ್ರಮುಖ ನಾಯಕರ ನಡುವಿನ ಭಿನ್ನಮತ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಗಳಿವೆ. ಜೆಡಿಎಸ್‍ನ ಏಳು ಭಿನ್ನ ಶಾಸಕರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡುವ ಕುರಿತಂತೆ ಚರ್ಚಿಸಲು ಇತ್ತೀಚೆಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು.

ವಿಮಾನದಲ್ಲಿ ಜೆಡಿಎಸ್‍ನ ಶಾಸಕರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡು ಅವರಿಗೆ ಟಿಕೆಟ್ ನೀಡುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಕೊಂಡ ಮನವಿಗೆ ಯುವರಾಜ ಯಸ್… ಯಸ್… ಎನ್ನುತ್ತಿದ್ದುದು ಪರಂಗೆ ನಿದ್ರಾಭಂಗ ಉಂಟು ಮಾಡಿದೆ. ದೆಹಲಿಯಲ್ಲಿ ವಿಮಾನ ಇಳಿಯುತ್ತಿದ್ದಂತೆ ತುರ್ತಾಗಿ ತಮ್ಮ ಮಗನನ್ನು ಕಾಣುವ ಹಂಬಲ ವ್ಯಕ್ತಪಡಿಸಿ ಪರಂ ಮತ್ತೆ ಬೆಂಗಳೂರಿಗೆ ವಾಪಸ್ಸಾಗಿದ್ದರು. ಮಾತ್ರವಲ್ಲ, ಪರಂ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ 700 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ದಿ ಕಾಮಗಾರಿಗಳ ಲೋಕಾರ್ಪಣೆ ಸಮಾರಂಭಕ್ಕೆ ಗೈರಾಗಿ ಬೆಂಗಳೂರಿನಲ್ಲಿ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದರು.

ಇದಕ್ಕೆ ಕಾರಣ ತುಮಕೂರು ಕಾರ್ಯಕ್ರಮದಲ್ಲಿ ಮೊದಲು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಭಾವಚಿತ್ರ ಹಾಕಿ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರ ಭಾವಚಿತ್ರವನ್ನು ನಾಲ್ಕನೇ ಸಾಲಿನಲ್ಲಿ ಹಾಕಲಾಗಿತ್ತು. ಈ ಪಿತೂರಿ ಹಿಂದೆ ಸಿಎಂ ಅವರ ಕೈವಾಡವಿದೆ ಎಂದು ಭಾವಿಸಿರುವ ಪರಂ ಅವರು ಸಿದ್ದು ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.  2013ರಲ್ಲಿ ಸಿಎಂ ಮತ್ತು ಪರಂ ನಡುವೆ ಉತ್ತಮ ಬಾಂಧವ್ಯವಿತ್ತು. ಎಲ್ಲೇ ಹೋದರೂ ಇಬ್ಬರು ನಾಯಕರು ಒಟ್ಟಾಗೇ ಹೋಗುತ್ತಿದ್ದರು. ಯಾವಾಗ ಸಿದ್ದರಾಮಯ್ಯ ಅವರು ಮತ್ತೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಿಂಬಿಸಿಕೊಳ್ಳಲು ಮುಂದಾದರೋ ಅಲ್ಲಿಂದಲೇ ಶುರುವಾಗಿದೆ ಈ ಇಬ್ಬರು ನಾಯಕರ ನಡುವಿನ ಶೀತಲ ಸಮರ.

 

DK-Shivakumar--01

ಸಿಎಂ ಕಂಡರೆ ಡಿ.ಕೆ.ಶಿವಕುಮಾರ್‍ಗೂ ಆಗಲ್ಲ:

ಗುಜರಾತ್ ಕಾಂಗ್ರೆಸ್ ಶಾಸಕರನ್ನು ನಗರಕ್ಕೆ ಕರೆತಂದ ನಂತರ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ಕನಿಷ್ಠ ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳು ನನ್ನ ನೆರವಿಗೆ ಬರಲಿಲ್ಲ ಎಂಬ ಆಕ್ರೋಶ ಡಿಕೆಶಿ ಅವರಲ್ಲಿ ಮಡುಗಟ್ಟಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಎಂದೂ ತುಟಿ ಬಿಚ್ಚದ ಡಿಕೆಶಿ ಅವರು, ನಿನ್ನೆ ಮಾಗಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಮಾಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಿ. ಮುಂದಿನ ಸಿಎಂ ನಾನೇ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಕಾರ್ಯಕರ್ತರಿಗೂ ಡಿಕೆಶಿ ಅಭಯ ನೀಡಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮೂರೇ ವರ್ಷದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದರೂ ನನಗೆ ಸಚಿವ ಸ್ಥಾನ ನೀಡಲು ಹಿಂದು-ಮುಂದು ನೋಡಿದರು. ಇನ್ನು ಮುಂದೆ ಹೀಗಾಗಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾನೇ ಸಿಎಂ ಎಂಬ ಡಿಕೆಶಿ ಅವರ ಘಂಟಾಘೋಷ ಹೇಳಿಕೆ ಹಲವು ನಾಯಕರಲ್ಲಿ ನಡುಕ ಉಂಟು ಮಾಡಿದೆ.

 

DK-Shivakumar--01

ರೇಸ್‍ನಲ್ಲಿದ್ದಾರೆ ಖರ್ಗೆ:
ಸತತ ಒಂಭತ್ತು ಬಾರಿ ವಿಧಾನಸಭೆಗೆ ಹಾಗೂ ಎರಡು ಬಾರಿ ಲೋಕಸಭೆಗೆ ಗೆದ್ದು ಬರುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ಒಳಗಾಗಿರುವ ಪಕ್ಷದ ನಿಷ್ಠಾವಂತ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿ ಮಟ್ಟದಲ್ಲಿ ನನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಸದ್ದಿಲ್ಲದೆ ಪಕ್ಷದ ವರಿಷ್ಠರ ಬಳಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದುವರೆಗೂ ಪಕ್ಷಕ್ಕೆ ನಿಷ್ಠೆ ತೋರಿದ್ದೇನೆ. ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ಈಗಲಾದರೂ ನನಗೆ ಸೂಕ್ತ ಸ್ಥಾನಮಾನ ಕಲ್ಪಿಸಿ ಎನ್ನುವುದು ಖರ್ಗೆ ಅವರ ಬೇಡಿಕೆಯಾಗಿದೆ.

ಜೆಡಿಎಸ್‍ನ ಏಳು ಭಿನ್ನರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಆಕ್ಷೇಪ ವ್ಯಕ್ತಪಡಿಸದ ಖರ್ಗೆ ಅವರು, ಪಕ್ಷದ ನಾಲ್ವರು ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಟಿಕೆಟ್ ತಪ್ಪಿಸಿದರೆ ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗಳಿಗೆ ಟಾಂಗ್ ನೀಡಿದ್ದಾರೆ.

 

DK-Shivakumar--01

ಹುಮ್ಮಸ್ಸು ಹೆಚ್ಚಿಸಿದ ಸಮೀಕ್ಷೆ:
ಸಿ4 ಸಮೀಕ್ಷೆ ನಂತರ ಸಿದ್ದರಾಮಯ್ಯ ಅವರಲ್ಲಿ ಮತ್ತಷ್ಟು ಹುರುಪು ಮೂಡಿದ್ದು, ಅದೇ ಹುಮ್ಮಸ್ಸಿನಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಅದರ ಸಾಧನೆ ಆಧಾರದ ಮೇಲೆ ನಾನೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಬಹುದು ಎಂಬ ನಿಟ್ಟಿನಲ್ಲಿ ಕಾರ್ಯಾಚರಣೆಗಿಳಿದಿದ್ದಾರೆ.

ಆದರೆ ಇದುವರೆಗೂ ಸುಮ್ಮನಿದ್ದ ಮೂಲ ಕಾಂಗ್ರೆಸ್ಸಿಗರು ಸಿದ್ದು ವಿರುದ್ಧ ಕತ್ತಿ ಮಸಿಯುತ್ತಿದ್ದಾರೆ. ಅವರಿಗೆ ಟಾಂಗ್ ನೀಡಲು ತಮ್ಮದೇ ಆದ ರೀತಿಯಲ್ಲಿ ಮಸಲತ್ತು ನಡೆಸುತ್ತಿದ್ದು, ಸಿಎಂ ಗದ್ದುಗೆಗೆ ಪೈಪೋಟಿ  ನಡೆಸುತ್ತಿದ್ದಾರೆ. ಅಧಿಕಾರಕ್ಕಾಗಿ ಪ್ರಮುಖ ನಾಲ್ವರು ನಾಯಕರ ನಡುವೆ ಇದುವರೆಗೂ ಮುಸುಕಿನ ಗುದ್ದಾಟ ಮಾತ್ರ ಇತ್ತು, ಆದರೆ ಡಿಕೆಶಿ ಅವರು ನಿನ್ನೆ ನೀಡಿರುವ ಹೇಳಿಕೆಯಿಂದ ಇದೀಗ ಆ ನಾಯಕರು ಬಹಿರಂಗ ಅಖಾಡಕ್ಕಿಳಿದರೂ ಆಶ್ಚರ್ಯಪಡುವಂತಿಲ್ಲ.

 

Facebook Comments

Sri Raghav

Admin