ಬೆಂಗಳೂರು ಪದವೀಧರ ಕ್ಷೇತ್ರದ ಟಿಕೆಟ್‍ಗೆ ಜೆಡಿಎಸ್‍ನಲ್ಲಿ ಪೈಪೋಟಿ

ಈ ಸುದ್ದಿಯನ್ನು ಶೇರ್ ಮಾಡಿ

jds

ಬೆಂಗಳೂರು, ಆ.23-ಬೆಂಗಳೂರು ಪದವೀಧರ ಕ್ಷೇತ್ರದ ಟಿಕೆಟ್‍ಗೆ ಜೆಡಿಎಸ್‍ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮುಂದಿನ ವರ್ಷ ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಈಗಾಗಲೇ ಸಿದ್ಧತೆಯನ್ನು ಆರಂಭಿಸಿದ್ದಾರೆ. ಜೆಡಿಎಸ್ ಟಿಕೆಟ್‍ಗಾಗಿ ಒಕ್ಕಲಿಗರ ಸಂಘದ ನಿರ್ದೇಶಕರಾದ ಅ.ದೇವೇಗೌಡ, ಎ.ಶಿವಣ್ಣ ಹಾಗೂ ಜೆಡಿಎಸ್ ಶಿಸ್ತು ಸಮಿತಿ ಅಧ್ಯಕ್ಷ ಎ.ಪಿ.ರಂಗನಾಥ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಈಗಾಗಲೇ ಪದವೀಧರರನ್ನು ಮತದಾರರ ಪಟ್ಟಿಗೆ ನೋಂದಾಯಿಸುವ ಕಾರ್ಯದಲ್ಲಿ ಆಕಾಂಕ್ಷಿಗಳು ತೊಡಗಿದ್ದಾರೆ. ಜೆಡಿಎಸ್ ಇನ್ನೂ ಕೂಡ ಅಧಿಕೃತವಾಗಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಕಳೆದ ಬಾರಿ ಮಾಜಿ ಸಚಿವ ರಾಮಚಂದ್ರಗೌಡ ಅವರ ವಿರುದ್ಧ ಜೆಡಿಎಸ್‍ನಿಂದ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದ ದೇವೇಗೌಡ ಈ ಬಾರಿಯೂ ಸ್ಪರ್ಧೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಜೆಡಿಎಸ್‍ನ ಉನ್ನತ ಮೂಲಗಳ ಪ್ರಕಾರ ಇದುವರೆಗೆ ಅಧಿಕೃತ ಅಭ್ಯರ್ಥಿ ಯಾರೆಂಬುದನ್ನು ಅಂತಿಮಗೊಳಿಸಿಲ್ಲ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಉತ್ಸುಕರಾಗಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುತ್ತದೆ. ಆಕಾಂಕ್ಷಿಗಳನ್ನು ಮನವೊಲಿಸಿ ಬಂಡಾಯವೇಳದಂತೆ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Facebook Comments

Sri Raghav

Admin