ಮಾರಣಾಂತಿಕ ರೋಗಕ್ಕೆ ತುತ್ತಾದ ‘ದಾಸಪ್ಪ ಆಸ್ಪತ್ರೆ’..!

ಈ ಸುದ್ದಿಯನ್ನು ಶೇರ್ ಮಾಡಿ

Dasappa-Hospital--01

ಬೆಂಗಳೂರು, ಆ.23- ಇದು ನಗರದ ಹೃದಯ ಭಾಗದಲ್ಲಿರುವ ಪಾಲಿಕೆ ಆಸ್ಪತ್ರೆ. ಇಲ್ಲಿ ಆಹಾರ ಗುಣಮಟ್ಟ ಪರಿಶೀಲಿಸುವ ವಿಭಾಗವಿದೆ. ನೂರಾರು ಗರ್ಭಿಣಿಯರು ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಾರೆ. ಇಂತಹ ಆಸ್ಪತ್ರೆಯೇ ಇದೀಗ ಮಾರಣಾಂತಿಕ ರೋಗಕ್ಕೆ ತುತ್ತಾಗಿದೆ….!  ಅರೆ, ಇದೇನಿದು..? ಆಸ್ಪತ್ರೆಗೇ ರೋಗವೇ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳಬೇಡಿ. ಹೌದು. ಇದು ಅಕ್ಷರಶಃ ಸತ್ಯ. ಟೌನ್‍ಹಾಲ್ ಮುಂಭಾಗದಲ್ಲಿರುವ ದಾಸಪ್ಪ ಆಸ್ಪತ್ರೆಯೇ ಮಾರಣಾಂತಿಕ ರೋಗಕ್ಕೆ ತುತ್ತಾಗಿರುವುದು.

ಬಿಬಿಎಂಪಿಯ ಪ್ರಮುಖ ಆಸ್ಪತ್ರೆಯಾದ ದಾಸಪ್ಪ ಆಸ್ಪತ್ರೆ ಆವರಣದಲ್ಲಿರುವ ಉದ್ಯಾನವನ ಮತ್ತು ಕಚೇರಿಯ ಪೀಠೋಪಕರಣಗಳು ಗಬ್ಬುನಾರುತ್ತಿವೆ. ರೋಗಿಗಳಿಗೆ ಉತ್ತಮ ಪರಿಸರ ಒದಗಿಸಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾಗಿರುವ ಉದ್ಯಾನವನ ಕಸದ ಕೊಂಪೆಯಾಗಿದೆ. ಹೀಗಾಗಿ ಉದ್ಯಾನವನ ಸೊಳ್ಳೆ ಉತ್ಪತ್ತಿ ತಾಣವಾಗಿ ಪರಿವರ್ತನೆಯಾಗಿದ್ದು, ಆಸ್ಪತ್ರೆಗೆ ಬರುವ ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಮಾರಣಾಂತಿಕ ರೋಗಗಳು ತಗಲುವ ಅಪಾಯ ಎದುರಾಗಿದೆ.

ಇನ್ನು ಆಸ್ಪತ್ರೆಯ ಕೊಠಡಿಗಳು ಗೋದಾಮುಗಳಂತಾಗಿದ್ದು, ಹಳೇ ಪೀಠೋಪಕರಣಗಳನ್ನು ತುಂಬಲಾಗಿದ್ದು, ಹಳೇ ಸಾಮಗ್ರಿಗಳು ಧೂಳಿನಿಂದ ಮುಚ್ಚಿ ಹೋಗಿವೆ.
ಇನ್ನು ಆಸ್ಪತ್ರೆಯ ಮುಖ್ಯದ್ವಾರದಲ್ಲೇ ಬಸ್ ನಿಲ್ದಾಣವಿದೆ. ರಾತ್ರಿ ವೇಳೆ ದಾರಿ ಹೋಕರು ಆಸ್ಪತ್ರೆ ಬಾಗಿಲಲ್ಲೇ ಮೂತ್ರವಿಸರ್ಜನೆ ಮಾಡಿದರೂ ಕೇಳುವವರೇ ಇಲ್ಲ. ಹೀಗಾಗಿ ಆಸ್ಪತ್ರೆಗೆ ಹೋಗುವಾಗ ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಕೂಗಳತೆ ದೂರದಲ್ಲಿರುವ ಪಾಲಿಕೆ ಆಸ್ಪತ್ರೆಯೇ ಮಾರಣಾಂತಿಕ ರೋಗಕ್ಕೆ ತುತ್ತಾಗಿದ್ದರೂ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

Facebook Comments

Sri Raghav

Admin