ಮೀಟರ್ ಬಡ್ಡಿ ದಂಧೆಯಿಂದಲೇ ದಂಪತಿ ಆತ್ಮಹತ್ಯೆ, ಕಾರ್ಪೊರೇಟರ್ ಸೇರಿ ಐವರ ವಿರುದ್ಧ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

Family-Suicide--01

ಬೆಂಗಳೂರು, ಆ.23- ಮಾವಳ್ಳಿಯಲ್ಲಿ ದಂಪತಿ ಆತ್ಮಹತ್ಯೆಗೆ ಮೀಟರ್ ಬಡ್ಡಿಯೇ ಕಾರಣವೆಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್ ಸೇರಿದಂತೆ ಐದು ಮಂದಿಯ ವಿರುದ್ಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಡ್ಡಮಾವಳ್ಳಿಯಲ್ಲಿ ಮಿಲಿಟರಿ ಹೊಟೇಲ್ ನಡೆಸುತ್ತಿದ್ದ ನಂಜುಂಡಸ್ವಾಮಿ-ಪುಷ್ಪಲತಾ ದಂಪತಿ ನಾಲ್ಕೈದು ಮಂದಿಯಿಂದ ಸಾಲವಾಗಿ ಪಡೆದಿದ್ದ ಅಸಲಿಗಿಂತ ಮೂರು ಪಟ್ಟು ಬಡ್ಡಿಯನ್ನು ಕೊಟ್ಟಿದ್ದಾರೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ನಂಜುಂಡ ಸ್ವಾಮಿ ಅವರು ಆತ್ಮಹತ್ಯೆಗೂ ಮುನ್ನ ಡೈರಿಯಲ್ಲಿ 21 ಪುಟಗಳ ಡೆತ್‍ನೋಟ್ ಬರೆದಿಟ್ಟಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ತನಿಖೆ ಮಾಡಿದಾಗ ಕೆಲವು ಅಂಶಗಳು ಬೆಳಕಿಗೆ ಬಂದಿವೆ. ಮೀಟರ್ ಬಡ್ಡಿಯ ಸುಳಿಗೆ ಸಿಲುಕಿದ ದಂಪತಿ ಅಸಲೂ ತೀರಿಸಲಾಗದೆ, ಬಡ್ಡಿಯನ್ನೂ ಕಟ್ಟಲಾಗದೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಡೈರಿಯಲ್ಲಿ ಬರೆದಿರುವ ಮಾಹಿತಿಯಿಂದ ತಿಳಿದುಬಂದಿದೆ.

ನನ್ನ ತಮ್ಮ ಹಾಗೂ ಅವರ ಪತ್ನಿಗೆ ಹಣಕಾಸಿನ ತೊಂದರೆಯಿದ್ದು, ಸಾಲ ಮಾಡಿಕೊಂಡಿದ್ದರು. ಅಲ್ಲದೆ, ಹಲವರಿಂದ ಹಣದ ವಿಚಾರವಾಗಿ ಮೋಸ ಹೋಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೈರಿಯಲ್ಲಿ ಬರೆದಿರುವಂತೆ ಹೆಮ್ಮಿಗೆಪುರ ವಾರ್ಡ್‍ನ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್, ಕೆ.ಜಿ.ಕೃಷ್ಣ ಮತ್ತು ಇವರ ಆಡಿಟರ್ ದೇವೇಗೌಡ, ಲಕ್ಷ್ಮಿನಾರಾಯಣರೆಡ್ಡಿ ಮತ್ತು ತೇಜಸ್ವಿನಿ ನಾರಾಯಣ್‍ರವರೇ ಇವರ ಸಾವಿಗೆ ಕಾರಣವಾಗಿದ್ದಾರೆ ಎಂದು ನಂಜುಂಡಸ್ವಾಮಿಯವರ ಸಹೋದರ ಮಂಜುನಾಥ ಕಲಾಸಿಪಾಳ್ಯ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಹಣಕಾಸಿನ ವಿಚಾರದಲ್ಲಿ ನನ್ನ ತಮ್ಮನಾದ ನಂಜುಂಡಸ್ವಾಮಿಯಿಂದ ಕೆಲವು ಆಸ್ತಿಯನ್ನು ಕ್ರಯ ಮಾಡಿಸಿಕೊಂಡು ಹಣ ನೀಡದೆ ಮೋಸ ಮಾಡಿದ್ದರಿಂದ ಮನನೊಂದು ಪತಿ-ಪತ್ನಿ ಇಬ್ಬರೂ ಸಾವಿಗೆ ಶರಣಾಗಿದ್ದು, ಡೈರಿಯಲ್ಲಿ ನಮೂದಿಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಂಜುನಾಥ್ ತಿಳಿಸಿದ್ದಾರೆ.

Facebook Comments

Sri Raghav

Admin