ಮುಂದಿನ ತಿಂಗಳಿನಿಂದ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಶುರು

ಈ ಸುದ್ದಿಯನ್ನು ಶೇರ್ ಮಾಡಿ

Dev-JDS

ಹುಬ್ಬಳ್ಳಿ, ಆ.23- ಮುಂಬರುವ 2018ರ ವಿಧಾನಸಭಾ ಚುನಾವಣೆಗೆ ಮುಂದಿನ ತಿಂಗಳು ಅಭ್ಯರ್ಥಿ ಗಳನ್ನು ಆಯ್ಕೆಗೆ ಚಾಲನೆ ನೀಡಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್‍ನಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಭ್ಯರ್ಥಿಗಳ ಪಟ್ಟಿಯನ್ನು ನನಗೆ ಕೊಟ್ಟಿದ್ದಾರೆ. ಪಟ್ಟಿಯನ್ನು ಸೆಪ್ಟೆಂಬರ್‍ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಸತತ ಐದು ದಿನಗಳಿಂದ ಪ್ರವಾಸ ಮಾಡುತ್ತಿದ್ದೇನೆ. ಪಕ್ಷ ಸಂಘಟನೆಗೆ ಈ ಭಾಗದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ರತಿಯೊಂದು ಜಿಲ್ಲೆಯಲ್ಲಿ ಪ್ರವಾಸ ಮಾಡಿ ವರದಿ ನೀಡಲಿವೆ ಎಂದು ಹೇಳಿದರು. ಉತ್ತರ ಕರ್ನಾಟಕ ಪ್ರವಾಸ ಬಳಿಕ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಾಗುವುದು. ಮುಂಬರುವ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂಬ ಕುರಿತು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಲಾಗುವುದು ಎಂದರು.

ನಾನು ಇನ್ನು ದೆಹಲಿಗೆ ಹೋಗುವುದಿಲ್ಲ. ಬೆಂಗಳೂರಿನಲ್ಲೇ ಇದ್ದು, ಪಕ್ಷದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುತ್ತೇನೆ. ಆಯಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ, ಪಕ್ಷದ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚಿಸುತ್ತೇನೆ ಎಂದು ತಿಳಿಸಿದರು. ಸಮೀಕ್ಷೆ ಕೆಲವರಿಗೆ ಖುಷಿ ನೀಡಿರಬಹುದು, ಇನ್ನು ಕೆಲವರಿಗೆ ನಿರಾಸೆ ಉಂಟು ಮಾಡಿರಬಹುದು. ನಿರಾಸೆಯಾದವರು ಪಕ್ಷ ಸಂಘಟನೆಗೆ ಒತ್ತು ನೀಡಲಿ, ನನ್ನ ಮುಂದಿನ ಗುರಿ ಚುನಾವಣೆ. ರೈತರ ಸಾಲಮನ್ನಾಕ್ಕೆ ದೆಹಲಿಗೆ ಹೋಗುವುದು ಬೇಡ. ಇಲ್ಲೇ ಆಗಲಿ. ಕೇಂದ್ರ ಸರ್ಕಾರಕ್ಕೆ ಕೆಲ ರಾಜ್ಯಗಳು ಮಾತ್ರ ಕಣ್ಣಿಗೆ ಕಾಣಿಸುತ್ತವೆ ಎಂದು ಹೇಳಿದರು.ಮಹದಾಯಿ, ಕಳಸಾಬಂಡೂರಿ ಯೋಜನೆ ಸಮಸ್ಯೆ ಬಗೆಹರಿಸುವುದು ಪ್ರಧಾನಿ ಮೋದಿ ಅವರಿಗೆ ದೊಡ್ಡ ವಿಚಾರವಲ್ಲ. ಇದರಲ್ಲಿ ರಾಜಕೀಯ ಮಾಡುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ನಾನು ಕಾವೇರಿ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನೇ ಮೋದಿ ಅವರು ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾರದರ್ಶಕ ಆಡಳಿತ ನಡೆಸುತ್ತೇನೆ ಎಂದಿದ್ದರು. ಈಗ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಗೊತ್ತಿದೆ. ಬರಿ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್‍ನ ಬಂಡವಾಳ ನನಗೆ ಚೆನ್ನಾಗಿ ಗೊತ್ತು. ಮೂರುವರೆ ವರ್ಷ ಯಡಿಯೂರಪ್ಪ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದರೆ ? ಡಿ.ಕೆ.ಶಿವಕುಮಾರ್ ಹಾಗೂ ಯಡಿಯೂರಪ್ಪ ಒಂದಾಗಿ ಏನು ಮಾಡಿದರು ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

Facebook Comments

Sri Raghav

Admin