ಶಿಶುಗಳ ಸಾವಿನ ಕುರಿತು ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Baby-Child

ಕೋಲಾರ, ಆ.23-ನಗರದ ಎಸ್‍ಎನ್‍ಆರ್ ಆಸ್ಪತ್ರೆಯಲ್ಲಿ ಶಿಶುಗಳ ಮರಣದ ಕುರಿತಂತೆ ನುರಿತ ಮಕ್ಕಳ ವೈದ್ಯರಿಂದ ತನಿಖೆ ನಡೆಸಲು ಆದೇಶಿಸಿದ್ದೇನೆಂದು ಜಿಲ್ಲಾಧಿಕಾರಿ ಡಾ.ತ್ರಿಲೋಕಚಂದ್ರ ಹೇಳಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಆಗಸ್ಟ್ 21 ರಂದು 3 ಮಕ್ಕಳು ಮರಣ ಹೊಂದಿದ್ದು, ಇದರ ಬಗ್ಗೆ ಸುದ್ದಿಯಾಗಿದೆ.   ಆದ ಕಾರಣ ಕಳೆದ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವೈದ್ಯರು,ನರ್ಸ್‍ಗಳು ಮತ್ತು ಔಷಧಿಗಳ ಯಾವುದೇ ಕೊರತೆ ಕಂಡುಬಂದಿಲ್ಲ. ಇದು ಸುಸಜ್ಜಿತ ಆಸ್ಪತ್ರೆಯಾಗಿದೆ.

ತಾಯಿಗೆ ಮೂರು ಮಕ್ಕಳು ಒಂದೇ ಬಾರಿ ಜನಿಸಿದಾಗ ಮಿದುಳಿನ ತೊಂದರೆಯಿಂದ ಸಾವನ್ನಪ್ಪಿರುವುದು ಕಂಡುಬಂದಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು. ಸರ್ಜನ್ ಡಾ.ಶಿವಕುಮಾರ್ ಮಾತನಾಡಿ, ಆಸ್ಪತ್ರೆಯಲ್ಲಿ ಸುಸಜ್ಜಿತ ಉಪಕರಣಗಳಿದ್ದು, ಹೆರಿಗೆ ವಿಭಾಗದಲ್ಲಿ ಮೂರು ಜನ ವೈದ್ಯರಿದ್ದಾರೆ. ಎಸ್‍ಎನ್‍ಪಿಯುನಲ್ಲಿ ನಾಲ್ಕು ಜನ ವೈದ್ಯರಿದ್ದು, 13 ಮಂದಿ ನರ್ಸ್‍ಗಳು ಮೂರು-ನಾಲ್ಕರಂತೆ 24 ಗಂಟೆ ಕಾಲ ಕಾರ್ಯನಿರ್ವಹಿಸುತ್ತಾರೆ. ಈ ವಿಭಾಗಕ್ಕೆ 140 ರಿಂದ 150 ಮಕ್ಕಳು ದಾಖಲಾಗುತ್ತಾರೆ.

ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುಮಾರು 7-8 ಮಕ್ಕಳು ಸಾವನ್ನಪ್ಪಿದ್ದಾರೆ. ಇದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ವೈದ್ಯರು ನಿರ್ಲಕ್ಷ್ಯ ವಹಿಸದೆ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ವೇದಿಕೆಯವರು ಮಾತನಾಡಿ, ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ವೈದ್ಯರು ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಸಕ್ಸೇನಾ ಭೇಟಿ:

ಶಿಶುಗಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ತರಾಟೆಗೆ  ತೆಗೆದುಕೊಂಡರು. ವಿದ್ಯುತ್ ಇಲ್ಲದೆ ಟಾರ್ಚ್‍ಲೈಟ್‍ನಲ್ಲಿ ಪರಿಶೀಲನೆ ನಡೆಸಿದ ಅವರು, ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿ ಅವ್ಯವಸ್ಥೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ್ದ ಕೆಲ ಸಾರ್ವಜನಿಕರು ಸಹ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಎಳೆ ಎಳೆಯಾಗಿ ನೋವು ತೋಡಿಕೊಂಡರು. ನಂತರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಕೂಡ ಭೇಟಿ ನೀಡಿ ಪ್ರಸೂತಿ ವಾರ್ಡ್ ಹಾಗೂ ಮಕ್ಕಳ ವಾರ್ಡ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

Facebook Comments

Sri Raghav

Admin