ಹಳಿ ತಪ್ಪಿದ ಕೈಫಿಯಾತ್ ಎಕ್ಸ್ ಪ್ರೆಸ್ ರೈಲು, 74 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Kaifiyat-Express-03

ಲಕ್ನೋ/ನವದೆಹಲಿ, ಆ.23-ಉತ್ಕಲ್ ಎಕ್ಸ್‍ಪ್ರೆಸ್ ಹಳಿ ತಪ್ಪಿ 23 ಮಂದಿ ಸಾವಿಗೀಡಾಗಿ, 156 ಪ್ರಯಾಣಿಕರು ಗಾಯಗೊಂಡ ದುರಂತ ಹಚ್ಚಹಸಿರಾಗಿರುವಾಗಲೇ ಉತ್ತರಪ್ರದೇಶದಲ್ಲಿ ಇಂದು ಮುಂಜಾನೆ ಮತ್ತೊಂದು ದುರ್ಘಟನೆ ಸಂಭವಿಸಿದೆ. ಅವುರೈಯಾ ಜಿಲ್ಲೆಯಲ್ಲಿ ಕೈಫಿಯಾತ್ ಎಕ್ಸ್‍ಪ್ರೆಸ್‍ನ 10 ಬೋಗಿಗಳು ಹಳಿ ತಪ್ಪಿ 74 ಮಂದಿ ಗಾಯಗೊಂಡಿದ್ದಾರೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ.

Kaifiyat-Express-04

ಉತ್ತರಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸಂಭವಿಸಿದ ಎರಡನೇ ರೈಲು ಅಪಘಾತ ಇದಾಗಿದೆ. ಅಜಂಗಢ್‍ನಿಂದ ದೆಹಲಿಗೆ ತೆರಳುತ್ತಿದ್ದ ಕೈಫಿಯಾತ್ ಎಕ್ಸ್‍ಪ್ರೆಸ್ ಇಂದು ಮುಂಜಾನೆ 2.50ರಲ್ಲಿ ಪಟ ಮತ್ತು ಅಚ್ಚಲ್ಡಾ ರೈಲು ನಿಲ್ದಾಣಗಳ ನಡುವೆ ಡಂಪರ್‍ಗೆ(ಸಾಮಾನು-ಸರಂಜಾಮು ಸಾಗಣೆಯ ಕೈಗಾಡಿ) ಡಿಕ್ಕಿ ಹೊಡೆಯಿತು. ಈ ಅಪಘಾತದ ರಭಸಕ್ಕೆ ರೈಲಿನ ಒಂದು ಬೋಗಿ ಉರುಳಿ ಬಿದ್ದು, ಇತರ ಒಂಭತ್ತು ಕೋಚ್‍ಗಳು ಹಳಿ ತಪ್ಪಿದವು. ಈ ದುರ್ಘಟನೆಯಲ್ಲಿ 74 ಮಂದಿ ಗಾಯಗೊಂಡರು.

Kaifiyat-Express-02

ಆದರೆ, ರೈಲ್ವೆ ವಕ್ತಾರರು (ಎನ್‍ಸಿಆರ್) ಹೇಳುವಂತೆ ಗಾಯಗೊಂಡವರ ಸಂಖ್ಯೆ 74ಕ್ಕಿಂತ ಕಡಿಮೆ. ರೈಲು ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಈ ಹಿಂದೆ ಜನರಲ್ ಮ್ಯಾನೇಜರ್ ಎಂ.ಸಿ. ಚೌಹಾಣ್ ತಿಳಿಸಿದ್ದರು.   ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಬಗ್ಗೆ ನಿಗಾ ವಹಿಸುತ್ತಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ರೈಲು ಹಳಿ ತಪ್ಪಿದ್ದರಿಂದ ಈ ಮಾರ್ಗ ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Kaifiyat-Express-01

Facebook Comments

Sri Raghav

Admin