ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1500 ಸರ್ವೆಯರ್‍ಗಳ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

kagodu

ಬೆಂಗಳೂರು, ಆ.24- ಕಂದಾಯ ಇಲಾಖೆಯಲ್ಲಿ ಹೊರ ಗುತ್ತಿಗೆ ಪದ್ದತಿಯನ್ನು ರದ್ದುಪಡಿಸಲಾಗಿದ್ದು, ಖಾಲಿ ಇರುವ 1500 ಸರ್ವೆಯರ್‍ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳಲ್ಲಿ ಸರ್ವೆಯರ್‍ಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆ ನಂತರ ಜಮೀನುಗಳ ಸರ್ವೆ ಕಾರ್ಯಕ್ಕೆ ಉಂಟಾಗಿರುವ ಸಮಸ್ಯೆಗಳು ಬಗೆಹರಿಯಲಿವೆ. ಈಗಾಗಲೇ 3ಸಾವಿರ ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಬಗರ್‍ಹುಕುಂ ಸಾಗುವಳಿ ಮಂಜೂರಾತಿಗಾಗಿ ಎರಡೂವರೆ ಲಕ್ಷ ರೂ. ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಗೋಮಾಳ ಜಮೀನನ್ನು ಮಂಜೂರು ಮಾಡಬಾರದು. ಡೀಮ್ಡ್ ಅರಣ್ಯ ಪ್ರದೇಶವನ್ನು ಅರಣ್ಯ ಭೂಮಿಯಿಂದ ಕೈಬಿಡಬಾರದು ಎಂಬ ನಿರ್ಬಂಧ ಇರುವುದರಿಂದ ಬಗರ್‍ಹುಕುಂ ಸಾಗುವಳಿ ಸಂಬಂಧ ಅರ್ಜಿಗಳ ವಿಲೇವಾರಿ ವಿಳಂಬವಾಗಿದೆ ಎಂದು ಹೇಳಿದರು. ಗೋಮಾಳ ಹಾಗೂ ಡೀಮ್ಡ್ ಅರಣ್ಯ ವಿಚಾರದಲ್ಲಿ ಮೇಲ್ಮನೆ ಸಲ್ಲಿಸಬೇಕಾಗಿದೆ ಎಂದ ಅವರು, ರಾಜ್ಯದಲ್ಲಿ ಹಾನಿಗೀಡಾಗಿರುವ ಬಗ್ಗೆ ಮಾಹಿತಿ ಪಡೆದು ಅಂದಾಜು ಪಟ್ಟಿ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.

ನಿರ್ಧಾಕ್ಷಿಣ್ಯ ಕ್ರಮ:

ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಬಗರ್‍ಹುಕುಂ ಭೂಮಿಯನ್ನು ಹಂಚಿಕೆ ಮಾಡಿರುವ ಆರೋಪ ಇದ್ದು, ಎಷ್ಟೇ ಪ್ರಭಾವಿಗಳಾದರೂ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಯಾರೇ ಆಗಿದ್ದರೂ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗುವುದು. ಬಿಜೆಪಿ ಆಡಳಿತಾವಧಿಯಲ್ಲಿ ನಿಯಮ ಮೀರಿ ಬಗರ್‍ಹುಕುಂ ಸಾಗುವಳಿ ಮಂಜೂರು ಮಾಡಲಾಗಿದೆ ಎಂಬ ಆರೋಪವಿದೆ. ಬೆಂಗಳೂರಿನಿಂದ 18 ಕಿ.ಮೀ. ವ್ಯಾಪ್ತಿ ಒಳಗೆ ಬಗರ್‍ಹುಕುಂ ಸಾಗುವಳಿ ಮಂಜೂರು ಮಾಡಲು ಅವಕಾಶವಿಲ್ಲ. ಆದರೂ ನಿಯಮ ಮೀರಿ ಸಾಗುವಳಿ ಮಂಜೂರಾತಿ ನೀಡಿರುವ ನಿದರ್ಶನವಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

Facebook Comments

Sri Raghav

Admin