ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಮಹತ್ವದ ತೀರ್ಪು, ಆಧಾರ್ ಅತಂತ್ರ

Adha-r--01

ನವದೆಹಲಿ, ಆ.24-ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಭಾರೀ ಹಿನ್ನಡೆಯಾಗಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಒಂಭತ್ತು ನ್ಯಾಯಾಧೀಶರ ಸಂವಿಧಾನ ಪೀಠ ಭಾರತೀಯ ಸಂವಿಧಾನದ ಅಡಿ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ಪ್ರತಿಪಾದಿಸಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನಿಂದ ಆಧಾರ್ ಭವಿಷ್ಯ ಅತಂತ್ರವಾಗಿದೆ.

ಭಾರತೀಯ ಸಂವಿಧಾನದ 21ನೇ ವಿಧಿ ಅಡಿ ಪ್ರದತ್ತವಾದ ಹಕ್ಕುಗಳ ಭಾಗವಾಗಿ ಖಾಸಗಿತನದ ಹಕ್ಕನ್ನು ರಕ್ಷಿಸಬೇಕೆಂದು ಸಂವಿಧಾನ ಪೀಠ ಮಹತ್ವದ ತೀರ್ಪು ನೀಡಿದೆ.  ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಮಂಡಿಸಿದ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಖಾಸಗಿತನದ ಹಕ್ಕನ್ನು ಸಂವಿದಾನದಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಎಂಬ ವಿಚಾರವಾಗಿ ಸಲ್ಲಿಸಿದ ಅರ್ಜಿ ಕುರಿತು ಇಂದು ಮಹತ್ವದ ತೀರ್ಪು ನೀಡುವ ಮೂಲಕ ವ್ಯಕ್ತಿಯ ಖಾಸಗಿತನದ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆಧಾರ್ ಮೂಲಕ ಜನರ ವೈಯಕ್ತಿಕ ಮತ್ತು ಖಾಸಗಿ ಮಾಹಿತಿಗಳನ್ನು ಕೇಳುತ್ತಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.  ನ್ಯಾಯಮೂರ್ತಿಗಳಾದ ಜೆ. ಚಮಲೇಶ್ವರ್, ಎಸ್.ಎ. ಬೊಬ್ಡೆ, ಆರ್.ಕೆ.ಅಗರ್‍ವಾಲ್, ಆರ್.ಎಫ್.ನಾರಿಮನ್, ಎ.ಎಂ. ಸಪ್ರೆ, ಡಿ.ವೈ.ಚಂದ್ರಚೂಡ್, ಎಸ್.ಕೆ.ಕೌಲ್, ಮತ್ತು ಎಸ್.ಅಬ್ದುಲ್ ನಜೀರ್ ಅವರು ಈ ತೀರ್ಪಿಗೆ ಸಹಮತ ವ್ಯಕ್ತಪಡಿಸಿದ್ಧಾರೆ.

ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕೆ ಅಥವಾ ಬೇಡವೇ ಎಂಬ ವಿಚಾರವಾಗಿ ನ್ಯಾಯಪೀಠವು ಮೂರು ವಾರಗಳಲ್ಲಿ ಆರು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು. ನವ ನ್ಯಾಯಮೂರ್ತಿಗಳ ಸಂವಿಧಾನಾ ಪೀಠ ಆಗಸ್ಟ್ 2ರಂದು ತೀರ್ಪು ಕಾದಿರಿಸಿತ್ತು.

Facebook Comments

Sri Raghav

Admin