ನಾಳೆ ರಾಮ್‍ರಹೀಮ್ ಅತ್ಯಾಚಾರ ಪ್ರಕರಣದ ತೀರ್ಪು, ಪಂಜಾಬ್-ಹರ್ಯಾಣದಲ್ಲಿ ಹೈ ಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Ram-Rahim

ಚಂಡೀಗಢ, ಆ.24-ತೀವ್ರ ಕುತೂಹಲ ಕೆರಳಿಸಿರುವ ರಾಮ್‍ರಹೀಮ್ ಅತ್ಯಾಚಾರ ಪ್ರಕರಣದ ಬಗ್ಗೆ ನಾಳೆ ಶುಕ್ರವಾರ ವಿಶೇಷ ನ್ಯಾಯಾಲಯವೊಂದು ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ದೇರಾ ಸಚಾ ಸೌಧ ಮುಖ್ಯಸ್ಥ ಗುರ್‍ಮೀತ್ ರಾಮ್‍ರಹೀಮ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ತೀರ್ಪು ಹೊರಬೀಳಲಿರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ.

ಹರ್ಯಾಣದ ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯವು ಆ.25ರಂದು ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಹರ್ಯಾಣದ ಪಂಚಕುಲ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಮ್‍ರಹೀಮ್ ಸಿಂಗ್ ಅವರ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಈಗಾಗಲೇ ಈ ಎರಡೂ ರಾಜ್ಯಗಳಲ್ಲಿ ಜಮಾಯಿಸಿದ್ದಾರೆ. ಇನ್ನಷ್ಟು ಮಂದಿ ಸೆಕ್ಟರ್ 23ರಲ್ಲಿರುವ ನಾಮ್ ಚರ್ಚಾಘರ್‍ಗೆ (ಪ್ರಾರ್ಥನಾ ಮಂದಿರ) ಆಗಮಿಸಿದ್ದು, ಧಾರ್ಮಿಕ ಮುಖಂಡನ ಬೆಂಬಲಕ್ಕೆ ನಿಂತಿದ್ದಾರೆ. ಶುಕ್ರವಾರ ಕೋರ್ಟ್‍ಗೆ ಖುದ್ದಾಗಿ ಹಾಜರಾಗುವಂತೆ ರಾಮ್‍ರಹೀಮ್‍ಗೆ ಸಿಬಿಐ ವಿಶೇಷ ನ್ಯಾಯಾಲಯ ಈಗಾಗಲೇ ಸೂಚಿಸಿದೆ.

ಅನಾಮಧೇಯ ಪತ್ರಗಳು ವ್ಯಾಪಕವಾಗಿ ಬಂದ ಹಿನ್ನೆಲೆಯಲ್ಲಿ ದೇರಾ ಮುಖ್ಯಸ್ಥನ ವಿರುದ್ಧ 2002ರಲ್ಲಿ ಲೈಂಗಿಕ ಶೋಷಣೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಪಂಜಾಬ್ ಮತ್ತು ಹರ್ಯಾ ಣ ಹೈಕೋರ್ಟ್ ಸೂಚನೆ ನೀಡಿತ್ತು. ಸಿಂಗ್ ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪ ಹೊರೆಸಲಾಗಿತ್ತು. ಈ ಆರೋಪಗಳನ್ನು ಅವರು ನಿರಾಕರಿಸಿದ್ದರು.  ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲೂ ದೇರಾ ಮುಖ್ಯಸ್ಥರು ವಿಚಾರಣೆ ಎದುರಿಸುತ್ತಿದ್ದಾರೆ.  ನಾಳೆ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.

Facebook Comments

Sri Raghav

Admin