ಪ್ರಯಾಣಿಕರೇ, ಹಬ್ಬದ ಸಂದರ್ಭದಲ್ಲಿ ಸುಲಿಗೆ ಮಾಡುವ ಖಾಸಗಿ ಬಸ್‍ಗಳ ವಿರುದ್ಧ ದೂರು ಕೊಡಿ

ಈ ಸುದ್ದಿಯನ್ನು ಶೇರ್ ಮಾಡಿ

Private-Bus--01

ಬೆಂಗಳೂರು, ಆ.24- ಹಬ್ಬದ ಸಂದರ್ಭದಲ್ಲಿ ಪ್ರಯಾಣ ದರ ದುಬಾರಿ ಮಾಡುವ ಖಾಸಗಿ ಬಸ್‍ಗಳ ವಿರುದ್ಧ ಪ್ರಯಾಣಿಕರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸರಣಿ ರಜೆ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಸಹಜವಾಗಿ ಹೆಚ್ಚಾಗುವುದನ್ನು ಗಮನಿಸಿ ಕೆಎಸ್‍ಆರ್‍ಟಿಸಿ ವತಿಯಿಂದ ಸಾವಿರಕ್ಕೂ ಹೆಚ್ಚು ಬಸ್‍ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ.
ಆದರೂ ಖಾಸಗಿ ಬಸ್‍ಗಳು ಪ್ರಯಾಣ ದರವನ್ನು ಹೆಚ್ಚಿಸಿ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವುದು ಗಮನಕ್ಕೆ ಬರುತ್ತಿದೆ. ಆದರೆ, ಯಾವ ಪ್ರಯಾಣಿಕರು ಕೂಡ ಪ್ರಯಾಣ ದರ ಹೆಚ್ಚಳದ ವಿರುದ್ಧ ದೂರು ಕೊಡುತ್ತಿಲ್ಲ. ಪ್ರಯಾಣಿಕರು ದೂರು ಕೊಟ್ಟಿದ್ದೇ ಆದರೆ, ಕಾನೂನು ರೀತಿ ಖಾಸಗಿ ಬಸ್‍ಗಳ ವಿರುದ್ಧ ಕ್ರಮ ಜರುಗಿಸಬಹುದು.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲೂ ಕೂಡ ಖಾಸಗಿ ಬಸ್‍ಗಳಿಗೆ ದರ ಹೆಚ್ಚಳ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೂ ಅದೇ ರೀತಿ ಆರೋಪಗಳು ಕೇಳಿ ಬರುತ್ತಿವೆ. ಆದರೆ, ದೂರುಗಳು ಮಾತ್ರ ಸಲ್ಲಿಕೆಯಾಗುತ್ತಿಲ್ಲ. ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪ್ರಯಾಣಿಕರಿಗೆ ಹೊರೆ ಆಗುವುದನ್ನು ತಪ್ಪಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಹಬ್ಬಗಳು ಸೇರಿದಂತೆ ಸರಣಿ ರಜೆ ಇರುವ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದು ಸಹಜ. ಇದರ ಲಾಭವನ್ನು ಖಾಸಗಿ ಬಸ್‍ಗಳು ಪಡೆದುಕೊಂಡು ದುಬಾರಿ ಪ್ರಯಾಣದರ ವಸೂಲು ಮಾಡುವುದು ಸಾಮಾನ್ಯವಾಗಿದೆ.

Facebook Comments

Sri Raghav

Admin