ಮಳೆ ಬಂದರೂ, ಮೋಡ ಬಿತ್ತನೆ ಮಾಡಿದರೂ ಬರಗಾಲದಿಂದ ಮುಕ್ತಿ ಇಲ್ಲ

former

ಬೆಂಗಳೂರು, ಆ.24-ರಾಜ್ಯದಲ್ಲಿ ಮುಂಗಾರು ಕಳೆದ ಒಂದು ವಾರದಿಂದ ಚೇತರಿಕೆ ಕಂಡು ಉತ್ತಮ ಮಳೆಯಾಗುತ್ತಿರುವುದು ಒಂದೆಡೆಯಾದರೆ. ಮಳೆ ಪ್ರಮಾಣ ಹೆಚ್ಚಿಸಲು ಮೋಡ ಬಿತ್ತನೆ ಕಾರ್ಯವೂ ಮತ್ತೊಂದೆಡೆ ನಡೆಯುತ್ತಿದೆ. ಆದರೂ ರಾಜ್ಯ ಬರಗಾಲದಿಂದ ಮುಕ್ತವಾಗಿಲ್ಲ. ರಾಜ್ಯದ ಸುಮಾರು ನೂರು ತಾಲ್ಲೂಕುಗಳು ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ. ಹಲವು ಕಡೆ ಬಿತ್ತನೆಯೇ ಆಗಿಲ್ಲ. ಕೆಲವೆಡೆ ಬಿತ್ತನೆಯಾಗಿದ್ದರೂ ಆರಂಭದಲ್ಲೇ ಬೆಳೆ ಹಾನಿಗೀಡಾಗಿದೆ. ಇನ್ನು ಮಳೆ ಕೊರತೆ ಹೆಚ್ಚಾಗಿರುವ ಕಡೆಗಳಲ್ಲಿ ಅಲ್ಪಾವಧಿ ತಳಿಗಳ ಮೊರೆ ಹೋಗುವಂತೆ ಕೃಷಿ ಇಲಾಖೆಯೇ ಸಲಹೆ ನೀಡುತ್ತಾ ಬಂದಿದೆ.

ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ಆಗಸ್ಟ್ ನಂತರ ಬರ ಪೀಡಿತ ಪ್ರದೇಶಗಳ ಅಧಿಕೃತ ಘೋಷಣೆಯಾಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಘೋಷಿಸುವ ಸಾಧ್ಯತೆಗಳಿವೆ.  ಕಳೆದ ಮೂರು ವರ್ಷಗಳಿಂದಲೂ ರಾಜ್ಯ ಬರ ಪರಿಸ್ಥಿತಿಗೆ ಸಿಲುಕಿ ತತ್ತರಿಸುತ್ತಾ ಬಂದಿದೆ. ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದೇ ಉಳಿದಿದೆ. ಜಲಾಶಯ, ಕೆರೆ ಕಟ್ಟೆಗಳಲ್ಲೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ನೀರಿಲ್ಲ. ಹೀಗಾಗಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಬರ ಪೀಡಿತ ಪ್ರದೇಶಗಳ ಪಟ್ಟಿ ಮಾಡುವ ಕಾರ್ಯದಲ್ಲಿ ಮಗ್ನವಾಗಿವೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ಒಂದರಿಂದ ಇದುವರೆಗೆ 95 ತಾಲ್ಲೂಕುಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ಮೂರು ತಾಲ್ಲೂಕುಗಳಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಉಂಟಾಗಿದೆ. ಒಟ್ಟು 499 ಹೋಬಳಿಗಳು ಮಳೆ ಅಭಾವದಿಂದ ತತ್ತರಿಸಿ ಹೋಗಿವೆ.
ಹವಾ ಮುನ್ಸೂಚನೆ ಪ್ರಕಾರ ಮುಂಗಾರು ಚುರುಕಾಗಿದ್ದು, ಇನ್ನೆರಡು ದಿನಗಳ ಕಾಲ ಚದುರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮೋಡ ಬಿತ್ತನೆ:

ಕಳೆದ ಮೂರ್ನಾಲ್ಕು ದಿನಗಳಿಂದಲೂ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡ ಬಿತ್ತನೆ ಮಾಡುವ ಮೂಲಕ ಮಳೆ ಪ್ರಮಾಣ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಮಂಡ್ಯ ಜಿಲ್ಲೆ ನಾಗಮಂಗಲ, ರಾಮನಗರ, ಮಾಗಡಿ ತಾಲ್ಲೂಕುಗಳ ಏಳು ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಇಂದು ತುಮಕೂರು ಮತ್ತು ಚಿತ್ರದುರ್ಗ ಭಾಗದಲ್ಲಿ ಮೋಡ ಬಿತ್ತನೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Facebook Comments

Sri Raghav

Admin