ರಾಮ್ ರಹೀಮ್ ಸಿಂಗ್ ಅತ್ಯಾಚಾರಿ, ಮಹತ್ವದ ತೀರ್ಪು ನೀಡಿದ ಕೋರ್ಟ್, ಆ.28 ರಂದು ಶಿಕ್ಷೆ ಪ್ರಕಟ

Ram-Raheim,--Singh

ಚಂಡೀಗಢ, ಆ.25-ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಡೇರಾ ಸಚಾ ಸೌದ ಸಂಸ್ಥೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ತಪ್ಪಿತಸ್ಥರು ಎಂದು ಪಂಚಕುಲಾದ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 28 ರಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.
2002ರಲ್ಲಿ ಗುರ್ಮಿತ್ ರಾಮ್ ರಹೀಮ್ ಅವರ ಆಶ್ರಮದಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣ ಸಂಬಂಧ ಶುಕ್ರವಾರ  ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

ತೀರ್ಪು ಪ್ರಕಟವಾದ ಬೆನ್ನಲ್ಲೇ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹರಿಯಾಣದ ಅಂಬಾಲ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಗುರ್‍ಮೀತ್ ರಾಮ್‍ರಹೀಮ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ, ಈ ನಡುವೆಯೂ ರಾಮ್‍ರಹೀಮ್ ಅನುಯಾಯಿಗಳು ರೈಲು ನಿಲ್ದಾಣ ,ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಮ್‍ರಹೀಮ್ ಸಿಂಗ್ ಅವರ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ಈಗಾಗಲೇ ಈ ಎರಡೂ ರಾಜ್ಯಗಳಲ್ಲಿ ಜಮಾಯಿಸಿದ್ದಾರೆ.  ಅನಾಮಧೇಯ ಪತ್ರಗಳು ವ್ಯಾಪಕವಾಗಿ ಬಂದ ಹಿನ್ನೆಲೆಯಲ್ಲಿ ದೇರಾ ಮುಖ್ಯಸ್ಥನ ವಿರುದ್ಧ 2002ರಲ್ಲಿ ಲೈಂಗಿಕ ಶೋಷಣೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಪಂಜಾಬ್ ಮತ್ತು ಹರ್ಯಾ ಣ ಹೈಕೋರ್ಟ್ ಸೂಚನೆ ನೀಡಿತ್ತು. ಸಿಂಗ್ ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪ ಹೊರೆಸಲಾಗಿತ್ತು. ಈ ಆರೋಪಗಳನ್ನು ಅವರು ನಿರಾಕರಿಸಿದ್ದರು. ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲೂ ದೇರಾ ಮುಖ್ಯಸ್ಥರು ವಿಚಾರಣೆ ಎದುರಿಸುತ್ತಿದ್ದಾರೆ.

ಶಾಂತಿ ಕಾಪಾಡುವಂತೆ ಮನವಿ : 

ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪಂಜಾಬ್ ನ 5 ಜಿಲ್ಲೆಗಳಲ್ಲಿ ಕಾರ್ಪ್ಯೂ ಜಾರಿ ಮಾಡಲಾಗಿದ್ದು, ಕರೆಂಟ್ ಮತ್ತು ದೂರವಾಣಿ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ . ಈಗಾಗಲೇ ಭುಗಿಲೆದ್ದ ಹಿಂಸಾಚಾರಕ್ಕೆ 3 ಜನರು ಬಲಿಯಾಗಿದ್ದು, ಮತ್ತಷ್ಟು ಹಿಂಸಾಚಾರ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

Facebook Comments

Sri Raghav

Admin