ಖಟ್ಟರ್ ರಾಜಕೀಯ ಶರಣಾಗತಿ, ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

Manohar-Lal-Kattar--v01

ಚಂಡೀಗಢ, ಆ.26-ನಿನ್ನೆ ಹರ್ಯಾಣದಲ್ಲಿ ಹಿಂಸಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ವಿಚಾರಣೆಯಲ್ಲಿ ಹರಿಯಾಣ ಪಂಜಾಬ್ ಹೈಕೋರ್ಟ್ ಇಲ್ಲಿನ ರಾಜ್ಯಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ. ಹರಿಯಾಣದಲ್ಲಿನ ವ್ಯಾಪಕ ಹಿಂಸಾಚಾರದ ಬಗ್ಗೆ ಅಲ್ಲಿನ ಸರ್ಕಾರ ಹೈಕೋರ್ಟ್‍ಗೆ ವರದಿ ಸಲ್ಲಿಸಿದ ಸಂದರ್ಭದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಮುಖ್ಯಮಂತ್ರಿ ಮನೋಹರ್‍ಲಾಲ್ ಖಟ್ಟರ್ ರಾಜಕೀಯ ಶರಣಾಗತಿಯಿಂದ ಇಂತಹ ಪರಿಸ್ಥಿತಿ ಉಂಟಾಗಲು ಕಾರಣ ಎಂದು ಕಟು ಮಾತುಗಳಲ್ಲಿ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಸ್ವಯಂಘೋಷಿತ ದೇವಮಾನವ ಬಾಬಾ ರಾಮ್‍ರಹೀಮ್ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಘೋಷಣೆಯಾದ ಬೆನ್ನಲ್ಲೇ ಹರಿಯಾಣದಲ್ಲಿ ಹಿಂಸಾಚಾರ ಭುಗಿಲೆದ್ದು ಅಪಾರ ಸಾವು, ನೂರಾರು ಜನ ಗಾಯಗೊಂಡಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇಷ್ಟೆಲ್ಲ ಮಾಹಿತಿ ಒಬ್ಬ ಮುಖ್ಯಮಂತ್ರಿಗೆ ಇಲ್ಲವೆಂದ ಮೇಲೆ ರಾಜಕೀಯ ಶರಣಾಗತಿ ಕಾರಣ. ಹಿಂಸಾಚಾರದ ಮಾಹಿತಿ ಅವರಿಗಿಲ್ಲವೆಂದರೆ ಏನು ಅರ್ಥ? ಎಂದು ಹೈಕೋರ್ಟ್ ಕಿಡಿಕಾರಿದೆ.

ರಾಮ್‍ರಹೀಮ್ ಬಾಬಾ ಮುಂದೆ ಇಡೀ ರಾಜ್ಯಸರ್ಕಾರವೇ ಮಂಡಿಯೂರಿದಂತಿದೆ. ಬಾಬಾ ಹಿಂದೆ ನ್ಯಾಯಾಲಯಕ್ಕೆ 200 ವಾಹನಗಳು ಬರುವುದಕ್ಕೆ ಅವಕಾಶ ಮಾಡಿಕೊಡಲು ಕಾರಣವೇನು? ಲಕ್ಷಾಂತರ ಜನ ಸೇರುವ ಮುನ್ಸೂಚನೆ ರಾಜ್ಯಸರ್ಕಾರಕ್ಕಿರಲಿಲ್ಲವೇ? ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲವೇ? ಎಂದು ನ್ಯಾಯಾಧೀಶರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಾಬಾನನ್ನು ಮುಕ್ತವಾಗಿ ಬಿಟ್ಟಿದ್ದೀರಾ ಎಂದು ಹರಿಯಾಣ- ಪಂಜಾಬ್ ಹೈಕೋರ್ಟ್ ಪ್ರಶ್ನಿಸಿದೆ.

ದುಷ್ಕರ್ಮಿಗಳ ಬಗ್ಗೆ ನಿಮಗೆ ಮಾಹಿತಿ ಇರಲಿಲ್ಲವೇ? ಇದ್ದರೂ ಮೌನ ವಹಿಸಿದ್ದೀರಾ? ಪಂಚಕುಲ ಕೋರ್ಟ್‍ವರೆಗೆ 200 ಕಾರುಗಳನ್ನು ಬಿಟ್ಟಿದ್ದೇಕೆ? ಎಂದು ಪ್ರಶ್ನೆಗಳ ಸುರಿಮಳೆಗರೆದಿದೆ. ರಾಜ್ಯವನ್ನು ಸರ್ಕಾರವೇ ಹೊತ್ತಿ ಉರಿಯಲು ಅವಕಾಶ ಮಾಡಿಕೊಟ್ಟಿದೆ. ರಾಜಕೀಯ ಲಾಭಕ್ಕಾಗಿ ರಾಜ್ಯಸರ್ಕಾರವನ್ನು ಹೊತ್ತಿ ಉರಿಯಲು ಬಿಟ್ಟಿದೆ. ಕಾನೂನು ಸುವ್ಯವಸ್ಥೆ ಕುಸಿಯಲು ಸಿಎಂ ಖಟ್ಟರ್ ಕಾರಣ ಎಂದು ನ್ಯಾಯಾಲಯ ಕಟುಮಾತುಗಳಲ್ಲಿ ಛೀಮಾರಿ ಹಾಕಿದೆ.

Facebook Comments

Sri Raghav

Admin