ರೇಪಿಸ್ಟ್ ಬಾಬಾನ 9 ಶಾಖಾ ಕೇಂದ್ರಗಳ ಮುಟ್ಟುಗೋಲು, ಡೇರಾ ಸೌಧಕ್ಕೆ ಸೇನೆ ಲಗ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

Dea-Sacha-Soudha--011

ಪಂಚಕುಲ(ಹರ್ಯಾಣ)ಆ.26-ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಉಲ್ಬಣದ ಕೇಂದ್ರ ಬಿಂದುವಾಗಿರುವ ಪಂಚಕುಲದಲ್ಲಿನ ಸ್ವಯಂಘೋಷಿತ ದೇವಮಾನವ ಬಾಬಾ ಗುರ್‍ಮೀತ್ ರಾಮ್‍ರಹೀಮ್ ಸಿಂಗ್‍ನ ಡೇರಾ ಸಚ್ಚಾ ಸೌಧದಲ್ಲಿರುವ ಆತನ ಸಹಸ್ರಾರು ಅನುಯಾಯಿಗಳ ಹೊರದಬ್ಬುವ ಕಾರ್ಯಾಚರಣೆಯನ್ನು ಸೇನೆ ಆರಂಭಿಸಿದೆ. ಮತ್ತೆ ಭುಗಿಲೇಳಬಹುದಾದ ಹಿಂಸಾಚಾರವನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ. ಅನುಯಾಯಿಗಳ ಪ್ರತಿಭಟನೆ ಹತ್ತಿಕ್ಕಲು ಯೋಧರು ಸಕಲ ರೀತಿಯಲ್ಲಿಯೂ ಸಜ್ಜಾಗಿದ್ದಾರೆ.

ಇದೇ ವೇಳೆ ಹರ್ಯಾಣದ ಕುರುಕ್ಷೇತ್ರದಲ್ಲಿರುವ ಬಾಬಾನ ಒಂಬತ್ತು ಶಾಖಾ ಕೇಂದ್ರಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಅವುಗಳಿಂದ 2500 ಲಾಠಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಜಫ್ತಿ ಕಾರ್ಯಾಚರಣೆ ಮುಂದುವರಿದಿದೆ. ಸಿರ್ಸಾದಲ್ಲಿರುವ ಆಶ್ರಮದಿಂದ ಹೊರಗೆ ತೆರಳುವಂತೆ ಸಹಸ್ರಾರು ಬೆಂಬಲಿಗರಿಗೆ ಸೂಚನೆ ನೀಡಲಾಗಿದೆ.  ಈ ವಿವಾದಿತ ಆಶ್ರಮದಲ್ಲಿ ಬಾಬಾನ ಅಸಂಖ್ಯಾತ ಬಂಟರು, ಅಂಗರಕ್ಷಕರು ಬೆಂಬಲಿಗರು ಮತ್ತು ಅನುಯಾಯಿಗಳಿದ್ದು, ಅವರನ್ನು ಹೊರಕ್ಕೆ ಹಾಕಿ ಸೌಧವನ್ನೂ ಮುಟ್ಟುಗೋಲು ಹಾಕಲು ಸರ್ಕಾರ ಸನ್ನದ್ಧವಾಗಿದೆ.

Ram-Rahim--01

ಬಾಬಾ ವಿರುದ್ಧ ನಿನ್ನೆ ತೀರ್ಪು ಪ್ರಕಟಗೊಳ್ಳುವುದಕ್ಕೂ ಮುನ್ನವೇ ಸಾವಿರಾರು ಡೇರಾ ಭಕ್ತರು ಮತ್ತು ಬೆಂಬಲಿಗರು ಹರ್ಯಾಣದ ಪಂಚಕುಲಕ್ಕೆ ಬಂದಿದ್ದರು. ಧಾರ್ಮಿಕ ಮುಖಂಡ ದೋಷಿ ಎಂದು ಕೋರ್ಟ್ ಘೋಷಿಸುತ್ತಿದ್ದಂತೆ ಇಷ್ಟು ದೊಡ್ಡ ಮಟ್ಟದಲ್ಲಿ ಹಿಂಸಾಚಾರ ಉಲ್ಬಣಗೊಳ್ಳಲು ಈ ಅನುಯಾಯಿಗಳೇ ಕಾರಣ ಎಂಬುದು ದೃಢಪಟ್ಟ ನಂತರ ಸೌಧಕ್ಕೆ ನುಗ್ಗಿ ಬೆಂಬಲಿಗರನ್ನು ಹೊರದಬ್ಬಲು ಯೋಧರು ತುದಿಗಾಲಲ್ಲಿ ನಿಂತಿದ್ದಾರೆ. ತಮ್ಮ ಕಾರ್ಯಾಚರಣೆಗೆ ಅಡ್ಡ ಬರುವವರನ್ನು ಬಂಧಿಸುವುದೂ ಸೇರಿದಂತೆ ಕೆಲವು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ಸೇನಾಪಡೆ ಮುಂದಾಗಿದೆ.

ಸೌಧದ ಮೇಲೆ ಸರಿಯಾದ ದಾಳಿ ನಡೆದಲ್ಲಿ ಅಲ್ಲಿರುವ ಅಕ್ರಮ ಶಸ್ತ್ರಾಸ್ರಗಳು, ಮಾದಕ ವಸ್ತುಗಳು ಸೇರಿದಂತೆ ಭಾರೀ ಪ್ರಮಾಣದ ಅಕ್ರಮ-ಅವ್ಯವಹಾರಗಳೂ ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕಾರ್ಯಾಚರಣೆ ಬಳಿಕ ಡಿಎಸ್‍ಎಸ್ ಸೌಧವನ್ನು ಸಹ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ.  ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಬೂದಿ ಮುಚ್ಚಿದ ಕೆಂಡದಂಥ ವಾತಾವರಣ ಇದೆ. ಮತ್ತೆ ಹಿಂಸಾಚಾರ ಭುಗಿಲೇಳುವ ಆತಂಕವಿದ್ದು, ಬಂದೋಬಸ್ತ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ನಿನ್ನೆ ತಡರಾತ್ರಿಯಿಂದ ಪಂಚಕುಲಾ ಮತ್ತು ಸಿರ್ಸಾ ಪ್ರದೇಶಗಳಿಂದ 25ಕ್ಕೂ ಹೆಚ್ಚು ಡೇರಾ ಅನುಯಾಯಿಗಳನ್ನು ಪೊಲೀಸರು ಬಂಧಿಸಿ ಸಂಭವಿಸಬಹುದಾಗಿದ್ದ ಮತ್ತಷ್ಟು ಹಿಂಸಾಚಾರವನ್ನು ತಪ್ಪಿಸಿದ್ದಾರೆ.  ಹಿಂಸಾಚಾರಕ್ಕೆ ಇಳಿದ ಹರ್ಯಾಣದ ಪಂಚಕುಲ ರಣರಂಗವಾಗಲು ಕಾರಣವಾದ ಬಾಬಾನ ಬೆಂಬಲಿಗರ ಮೇಲೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜನಾಥ್ ಸಿಂಣ್ ಸಭೆ :

ಹರಿಯಾಣ ಮತ್ತು ಪಂಜಾಬ್ ನಲ್ಲಿ ಭುಗಿಲೆದ್ದಿರುವ ವ್ಯಾಪಕ ಹಿಂಸಾಚಾರದಲ್ಲಿ ಸಾವು-ನೋವು, ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಣ್ ಇಂದು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿ ಪರಾಮರ್ಶಿಸಿದರು. ಈ ರಾಜ್ಯಗಳಲ್ಲಿ ಕೈಗೊಳ್ಳಬಹುದಾದ ಮುಂದಿನ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin