DySP ಗಣಪತಿ ಪ್ರಕರಣ : ಜಾರ್ಜ್, ಮೊಹಂತಿ, ಪ್ರಸಾದ್ ಮತ್ತೆ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ

Ganapati

ಬೆಂಗಳೂರು, ಆ.26- ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇದುವರೆಗೂ ನಿರಾಳರಾಗಿದ್ದ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರಿಗೆ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮತ್ತೆ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಪ್ರಕರಣದಲ್ಲಿ ಈ ಹಿಂದೆ ಸಿಐಡಿ ಅಧಿಕಾರಿಗಳು ಕೋರ್ಟ್‍ಗೆ ಬಿ ರಿಪೋರ್ಟ್ ಸಲ್ಲಿಸುವ ಮೂಲಕ ಇವರನ್ನು ನಿರಾಳರಾಗುವಂತೆ ಮಾಡಿತ್ತು. ಆದರೆ ಇದೀಗ ಅವರ ಕತ್ತಿಗೆ ಮತ್ತೆ ಪ್ರಕರಣದ ತನಿಖೆಯ ಆತಂಕ ಸುತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಗಣಪತಿ ಸಾವು ಅಸಹಜ ಎಂಬುದರ ಮೇಲೆ ಆಯೋಗ ತನಿಖೆ ನಡೆಸುತ್ತಿದೆ. ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ಕಾರಣ ಇದೆಯೋ ಎಂಬುದರ ಸಹಿತ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿಯೇ ಅಂತಿಮ ವರದಿ ಸಿದ್ಧಪಡಿಸಲಾಗುತ್ತದೆ. ಗಣಪತಿ ಸಾವಿನ ಸತ್ಯಾಂಶ ಹೊರ ತೆಗೆಯುವುದೆ ಮುಖ್ಯಧ್ಯೇಯ ಎಂದು ಆಯೋಗ ಸ್ಪಷ್ಟಪಡಿಸಿದೆ.

ನಿರಾಳರಾಗುವಂತಿಲ್ಲ:

ಈ ವಿಚಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಇನ್ನಷ್ಟು ಆತಂಕಕ್ಕೆ ದೂಡುವಂತೆ ಮಾಡಿದೆ. ಸತ್ಯಾಸತ್ಯತೆ ತಿಳಿಯಲು ರಚಿಸಿರುವ ನಿವೃತ್ತ ನ್ಯಾ. ಕೆ.ಎನ್. ಕೇಶವ ನಾರಾಯಣ ವಿಚಾರಣಾ ಆಯೋಗದ ಮಾಹಿತಿ ಸಂಗ್ರಹ ಕೆಲಸ ಪ್ರಗತಿಯಲ್ಲಿದ್ದು, ಈ ಮೂವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. 2016ರ ಜು.7ರಂದು ಮಡಿಕೇರಿ ಲಾಡ್ಜ್ ನಲ್ಲಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ಸರ್ಕಾರ ನ್ಯಾ.ಕೆ.ಎನ್. ಕೇಶವನಾರಾಯಣ ಅಧ್ಯಕ್ಷತೆಯ ವಿಚಾರಣಾ ಆಯೋಗ ರಚಿಸಿದ್ದು, ತನಿಖೆ ಅಂತಿಮ ಹಂತ ತಲುಪಿದೆ. ಸಿಐಡಿ ಮತ್ತು ಸ್ಥಳೀಯ ಪೊಲೀಸ್ ಠಾಣೆಯಿಂದ ತನಿಖಾ ವರದಿ ಪಡೆದು ವಿಚಾರಣೆ ಆರಂಭಿಸಿರುವ ಆಯೋಗ ಈವರೆಗೆ ಗಣಪತಿ ಪತ್ನಿ ಪಾವನ, ಪುತ್ರ ನೇಹಾಲ್ ಸೇರಿ 45 ಮಂದಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.

ವಿಚಾರಣೆ ಅಗತ್ಯತೆ ಕಂಡು ಬಂದಿಲ್ಲ:

ಖಾಸಗಿ ಸುದ್ದಿ ವಾಹಿನಿಗೆ ಗಣಪತಿ ಹೇಳಿಕೆ ಕೊಟ್ಟಿದ್ದನ್ನು ಹೊರತುಪಡಿಸಿದರೆ ಉಳಿದಂತೆ 45 ಮಂದಿಯೂ ವಿಚಾರಣೆಯಲ್ಲಿ ಕೆ.ಜೆ. ಜಾರ್ಜ್, ಎ.ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಂತಿ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಇದುವರೆಗೆ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸುವ ಅಗತ್ಯತೆ ಕಂಡುಬಂದಿಲ್ಲ.

ಗಣಪತಿ ತಂದೆ ಕುಶಾಲಪ್ಪ, ತಾಯಿ ಜಾಜಿ ಪೊನ್ನಮ್ಮ ಮತ್ತು ಸಹೋದರ ಮಾಚಯ್ಯ, ಸಹೋದರಿ ಸಬಿತಾ ವಿಚಾರಣೆಗೆ ಹಾಜರಾಗಿಲ್ಲ ಎಂದು ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾ.ಕೆ.ಎನ್. ಕೇಶವ ನಾರಾಯಣ ತಿಳಿಸಿದ್ದು, ಇವರು ವಿಚಾರಣೆಗೆ ಹಾಜರಾಗುವ ಬದಲಿಗೆ ನೋಟಿಸ್‍ಗೆ ಉತ್ತರಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಅಂತಿಮ ತೀರ್ಪು ಬಂದ ಮೇಲೆ ಆಯೋಗದ ಮುಂದೆ ಹಾಜರಾಗುವ ಬಗ್ಗೆ ತಿಳಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸೆ.8, 9, ಸೆ.11ಕ್ಕೆ ಹಾಜರಾಗುವಂತೆ ಮೂವರಿಗೆ ನೋಟಿಸ್ ನೀಡಲಾಗಿದೆ. ಇವರಲ್ಲದೆ, ಇನ್ನೂ ಏಳೆಂಟು ಮಂದಿ ಹೇಳಿಕೆ ಪಡೆಯಬೇಕಾಗಿದೆ. ಅಕ್ಟೋಬರ್‍ನಲ್ಲಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ. ಆದರೆ, ಗಣಪತಿ ತಂದೆ, ಸಹೋದರನ ಹೇಳಿಕೆ ಮುಖ್ಯವಾಗಿದೆ. ಅವರ ಹೇಳಿಕೆ ಸಿಗದಿದ್ದರೆ ಇಲ್ಲಿಯವರೆಗಿನ ತನಿಖೆ ಮೇಲೆ ಅಂತಿಮ ವರದಿಯನ್ನು ಸರ್ಕಾರಕ್ಕೆ ಕೊಡಲು ಆಯೋಗ ನಿರ್ಧರಿಸಿದೆ.

Facebook Comments

Sri Raghav

Admin