ನಾನೇ ಜಯಲಲಿತಾ ಮಗಳು..!

Jayalalita--Manjula

ನವದೆಹಲಿ . ಆ.27 : ತಮಿಳುನಾಡಿನ ದಿ.ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನಿಜಕ್ಕೂ ಕುಮಾರಿಯೇ ಅಥವಾ ತಾಯಿಯೇ? ಕನ್ನಡತಿ, ತಮಿಳಿಗರ ಮನೆ ದೇವತೆ ಜಯಲಲಿತಾ ತಮ್ಮ ಔರಸ ಪುತ್ರಿಯ ರಕ್ಷಣೆಗಾಗಿ ತಾನು ತಾಯಿ ಎಂಬುದನ್ನು ಕೊನೆಯವರೆಗೂ ರಹಸ್ಯವಾಗಿಯೇ ಉಳಿಸಿಬಿಟ್ಟರೇ?  ಹೌದು. ಜಯಾ ತಮಿಳಿಗರ ಅಮ್ಮನಷ್ಟೇ ಅಲ್ಲ, ಸ್ವತಃ ತನ್ನ ಮಗಳ ತಾಯಿಯೂ ಹೌದು. ತಮಿಳರ ರಕ್ಷಣೆಗಾಗಿ ಮತ್ತು ಮಗಳ ಹಿತಕ್ಕಾಗಿ ಅದನ್ನು ಗೌಪ್ಯವಾಗಿಟ್ಟಿದ್ದೂ ಹೌದು…  ಈ ಪ್ರಶ್ನೆಗಳಿಗೆ ಧನಾತ್ಮಕವಾಗಿ ಉತ್ತರ ನೀಡಿದ್ದಾರೆ ಜಯಾ ಪುತ್ರಿ ತಾನೆಂದು ಹೇಳುತ್ತಿರುವ ಮಂಜುಳಾ ಅಲಿಯಾಸ್ ಅಮೃತಾ. ಪ್ರಸ್ತುತ ಅಮೃತಾ ಬೆಂಗಳೂರಿನಲ್ಲೇ ವಾಸ್ತವ್ಯವಿದ್ದು, ತಮ್ಮ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.  ತಮ್ಮ ಹಾಗೂ ಜಯಲಲಿತಾ ನಡುವಿನ ತಾಯಿ-ಮಗಳ ಬಾಂಧವ್ಯವನ್ನು ಅವರು ಹಂಚಿಕೊಂಡಿದ್ದಾರೆ…

ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. 1960-70ರ ದಶಕದಲ್ಲಿ ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರು ಮಾಡಿದ್ದವರು ಸಂಧ್ಯಾ. ಆ ಕಾಲಕ್ಕೆ ನಟಿಯಾಗಿ ಹೆಸರುವಾಸಿ. ಇವರ ಪತಿ ಜಯರಾಂ. ಈ ದಂಪತಿಗೆ ಮೂವರು ಮಕ್ಕಳು- ಜಯಕುಮಾರ್, ಶೈಲಜಾ, ಜಯಲಲಿತಾ ಅಲಿಯಾಸ್ ಕೋಮಲವಲ್ಲಿ.
ಜಯಲಲಿತಾ ಅಲಿಯಾಸ್ ಕೋಮಲವಲ್ಲಿ ಅವರ ಮಗಳೇ ಮಂಜುಳಾ(ಅಮೃತಾ). ಅದೊಂದು ಸುಖೀ ಕುಟುಂಬವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಸಂಧ್ಯಾ ಅವರು ವಿಧಿವಶರಾಗಿಬಿಟ್ಟರು. ಆಗ ಈ ಮೂವರು ಮಕ್ಕಳು ಅಕ್ಷರಶಃ ಅನಾಥರಾದರು.

ಸೂಕ್ಷ್ಮ ಸ್ವಭಾವದ ಜಯಲಲಿತಾ ತೀರಾ ಮಾನಸಿಕವಾಗಿ ಕುಗ್ಗಿಹೋದರು. ಖಿನ್ನತೆಗೂ ಒಳಗಾದರು. ಈ ಸಂದರ್ಭದಲ್ಲೇ ಅವರಿಗೆ ರಾಜಕೀಯ ಗುರು, ತಮಿಳರ ಆರಾಧ್ಯ ದೈವ ಎಂ.ಜಿ.ಆರ್ ಪರಿಚಯವಾಯಿತು. ಅವರು ಜಯಾಗೆ ರಾಜಕೀಯ ಗುರುವಾಗಿದ್ದರೆ ಹೊರತು, ಕಷ್ಟ-ಸುಖ ಹಂಚಿಕೊಳ್ಳುವ ಆತ್ಮೀಯತೆ ಬೆಳೆದಿರಲಿಲ್ಲ. ಈ ವೇಳೆ ಜಯಾ ಅವರ ದುಃಖದಲ್ಲಿ ಭಾಗಿಯಾಗಿ, ಅನುಕಂಪ, ಪ್ರೀತಿಯಿಂದ ಅವರ ಬಗ್ಗೆ ಕಾಳಜಿ ವಹಿಸಿದವರು ಆಗ ತೆಲುಗಿನ ಸೂಪರ್‍ಸ್ಟಾರ್ ಆಗಿದ್ದ ಶೋಭನ್‍ಬಾಬು.  ಶೋಭನ್‍ಬಾಬು ಸಾಂಗತ್ಯದಲ್ಲಿ ಜಯಾ ಮಾಮೂಲಿನಂತಾದರು. ಇವರಿಬ್ಬರ ಸ್ನೇಹದ ಫಲವಾಗಿ ಇವರಿಬ್ಬರೂ ನಟಿಸಿದ ಅನೇಕ ಚಿತ್ರಗಳು ಒಂದಾದ ಮೇಲೊಂದರಂತೆ ಬಿಡುಗಡೆಯಾದವು, ಯಶಸ್ವಿಯೂ ಆದರು.

Jayalalita-Letter-1
ಜಯಲಲಿತಾ ಮರಣ ಪ್ರಮಾಣ ಪತ್ರ

ಒಂದು ಹಂತದಲ್ಲಿ ಇವರಿಬ್ಬರ ಸ್ನೇಹ ಪ್ರೀತಿಯ ಸ್ವರೂಪ ಪಡೆಯುತ್ತದೆ. ಈ ಪ್ರೀತಿಯ ಅಲೆಯಲ್ಲಿ ತೇಲುತ್ತಿರುವಾಗಲೇ ಜಯಲಲಿತಾ ಗರ್ಭಿಣಿಯೂ ಆಗಿದ್ದಾಯಿತು. ಇದರಿಂದ ಕಂಗಾಲಾದ ಜಯಲಲಿತಾ, ಶೋಭನ್‍ಬಾಬು ಜೊತೆ ಮದುವೆ ಪ್ರಸ್ತಾಪ ಮಾಡುತ್ತಾರೆ. ಅವರೂ ಇದಕ್ಕೆ ಒಪ್ಪುತ್ತಾರೆ. ಮದುವೆ ಸಿದ್ಧತೆಗಳು ನಡೆಯುತ್ತವೆ. ಆದರೆ ಶೋಭನ್‍ಬಾಬು ಅವರ ಮೊದಲ ಪತ್ನಿ ಈ ಮದುವೆಗೆ ಅನುಮತಿ ನೀಡುವುದಿಲ್ಲ. ಮದುವೆ ಪ್ರಸ್ತಾಪ, ಪ್ರಸ್ತಾಪವಾಗಿಯೇ ಉಳಿದುಬಿಟ್ಟಿತು.

Jayalalitaa

ಚೆನ್ನೈನ ಮೈಲಾಪುರದಲ್ಲಿ ವಾಸ್ತವ್ಯವಿದ್ದಾಗ ಜಯಲಲಿತಾಗೆ ಒಂದು ಹೆಣ್ಣು ಮಗುವಾಗುತ್ತದೆ. ಅದರ ಹೆಸರು ಮಂಜುಳಾ ಅಲಿಯಾಸ್ ಅಮೃತಾ. ಈ ವಿಷಯ ಎಷ್ಟು ರಹಸ್ಯವಾಗಿತ್ತೆಂದರೆ ಕೊನೆಗೂ ಅಮೃತಾಗೆ ನನ್ನ ಹೆತ್ತ ತಾಯಿ ಯಾರು ಎಂಬುದು ಗೊತ್ತಾಗಲೇ ಇಲ್ಲ. ಆದರೆ ಜಯಾಗೆ ಮಾತ್ರ ಮಗಳ ಮೇಲಿನ ಮಮತೆ, ವಾತ್ಸಲ್ಯಗಳು ಕಡಿಮೆಯಾಗಿರಲಿಲ್ಲ. ಆದರೆ ಈ ವಿಷಯ ಸಾರ್ವತ್ರಿಕವಾದರೆ ತನ್ನನ್ನು ನಂಬಿರುವ ತಮಿಳರಿಗೆ ಹಾಗೂ ತನ್ನ ಮುದ್ದಿನ ಮಗಳಿಗೆ ಎಲ್ಲಿ, ಯಾರಿಂದ, ಯಾವ ತೊಂದರೆ ಆಗುತ್ತದೆಯೋ ಎಂದು ಹೆದರಿ ಜಯಲಲಿತಾ ಇದನ್ನು ಅತ್ಯಂತ ಗೌಪ್ಯವಾಗಿಯೇ ಉಳಿಸಿದ್ದರು. ಈ ಗೌಪ್ಯತೆ ಜಯಾರ ಜೊತೆ ಸಮಾಧಿ ಸೇರಿಬಿಟ್ಟಿತು.

Jayalalita-Letter
ಶೋಭನ್ ಬಾಬು ಮರಣ ಪ್ರಮಾಣ ಪತ್ರ

ಕವಲು ದಾರಿ:

ಅಲ್ಲಿಂದ ಜಯಲಲಿತಾ ಮತ್ತು ಶೋಭನ್‍ಬಾಬು ಪರಸ್ಪರ ಮಾತೂ ಆಡಲಿಲ್ಲ, ಭೇಟಿಯೂ ಆಗಲಿಲ್ಲ. ಜಯಲಲಿತಾ ಪಾಲಿಗೆ ಸರ್ವಸ್ವವೂ ಎಂ.ಜಿ.ರಾಮಚಂದ್ರನ್ ಅವರೇ ಆದರು. ಮಗು ಮಾತ್ರ ಬೆಂಗಳೂರಿನಲ್ಲಿ ವಾಸವಾಗಿದ್ದ ಜಯಾ ಅಕ್ಕ ಶೈಲಜಾ ಮತ್ತು ಅವರ ಪತಿ ಸಾರಥಿ ಅವರ ಆಶ್ರಯದಲ್ಲಿ ಬೆಳೆಯುತ್ತಿತ್ತು. ಶೈಲಜಾ ಪತಿ ಎಚ್‍ಎಎಲ್‍ನಲ್ಲಿ ಅಧಿಕಾರಿಯಾಗಿದ್ದರು. ಅವರು ಕೂಡ ಅಮೃತಾಳ ರಹಸ್ಯವನ್ನು ಎಲ್ಲೂ ಬಯಲು ಮಾಡಿರಲಿಲ್ಲ.
ಆದರೆ ಶೈಲಜಾ ಅವರು ಮಾತ್ರ ಅಮೃತಾಗೆ ಆಗಾಗ ಹೇಳುತ್ತಿದ್ದುದು ಒಂದೇ ಮಾತು. ನೀನು ಸಾಮಾನ್ಯ ಮನುಷ್ಯರ ಹೊಟ್ಟೆಯಲ್ಲಿ ಹುಟ್ಟಿದವಳಲ್ಲ, ನೀನು ಚಿನ್ನದ ತಟ್ಟೆಯಲ್ಲೇ ಊಟ ಮಾಡಬೇಕು. ಆದರೆ ಅದೃಷ್ಟ ಮಾತ್ರ ಹೀಗಾಗಿದೆ ಎನ್ನುತ್ತಿದ್ದರು. ಏಕೆಂದರೆ, ಜಯಲಲಿತಾ ಅವರು ಶೈಲಜಾ ಮತ್ತು ಅವರ ಪತಿಯಿಂದ ಪ್ರಮಾಣ ಮಾಡಿಸಿದ್ದರು.

ಇದು ಸ್ಫೋಟಗೊಂಡದ್ದು ಹೇಗೆ?

ಸುದ್ದಿವಾಹಿನಿಯೊಂದರಲ್ಲಿ ಅಮೃತಾ ಅವರನ್ನು ನೋಡಿ ಅಮೆರಿಕದಲ್ಲಿದ್ದ ರಜನಿನಾಥ್ ಎಂಬುವರು ಗುರುತಿಸಿ, ನೀನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮಗಳು ಎಂದು ಹೇಳಿದರು. ಆಗಷ್ಟೇ ಅಮೃತಾರಿಗೆ ತನ್ನ ತಾಯಿಯ ಹೆಸರು ಕಿವಿಯ ಮೇಲೆ ಬಿದ್ದದ್ದು.  ಆದಾದ ನಂತರ ಒಮ್ಮೆ ಸಂಬಂಧಿ ಜಯಲಕ್ಷ್ಮಿ ಎಂಬುವರು ಅಮೃತಾಳಿಗೆ ಒಂದುಪತ್ರ ಬರೆದುಕೊಟ್ಟು, ಇದನ್ನು ತೆಗೆದುಕೊಂಡು ಹೋಗಿ ಚೆನ್ನೈನಲ್ಲಿರುವ ಜಯಲಲಿತಾ ಅವರಿಗೆ ಕೊಡು ಎಂದು ಕಳುಹಿಸಿದ್ದರು. ಪತ್ರ ಹಿಡಿದು ಮನೆ ಬಾಗಿಲಿಗೆ ಬಂದ ಮಗಳನ್ನು ಜಯಲಲಿತಾ ಮಾತೃ ವಾತ್ಸಲ್ಯದಿಂದ ಅಪ್ಪಿಕೊಂಡು ಕಣ್ಣೀರು ಸುರಿಸಿದರು. ಸುಮಾರು 2-3 ತಿಂಗಳು ಮನೆಯಲ್ಲೇ ಇರಿಸಿಕೊಂಡು ನಂತರ ಕಳುಹಿಸಿಕೊಟ್ಟರು.

ಹೈದರಾಬಾದ್, ಊಟಿ ಹಾಗೂ ಚೈನ್ನೈನ ಸಿರಿದಾವೂರ್‍ಗಳಲ್ಲಿರುವ ತಮ್ಮ ಬಂಗಲೆಗಳಲ್ಲಿ ಮಗಳ ಜೊತೆ ವಾಸ್ತವ್ಯ ಮಾಡಿದ ಜಯಲಲಿತಾ, ಅವಳನ್ನು ಪ್ರೀತಿಯಿಂದ ಕಂಡರೆ ಹೊರತು, ನೀನು ನನ್ನ ಮಗಳು ಎಂದು ಹೇಳಲಿಲ್ಲ.   ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀರ್ಪು ಜಯಲಲಿತಾ ಅವರ ಪರ ಬಂದಾಗ ಮುಖ್ಯಮಂತ್ರಿ ಜಯಲಲಿತಾ ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದರು. ಆಗ ರಾತ್ರಿ ಯಾರ ಗಮನಕ್ಕೂ ಬಾರದಂತೆ ಬೆಂಗಳೂರಿನ ಅಮೃತಾ ಮನೆಗೆ ಬಂದು ಮಗಳನ್ನು ನೋಡಿಕೊಂಡು, ಮಗಳ ಕೈಯಿಂದ ಒಂದು ಲೋಟ ಕುಡಿದು ಹೋಗಿದ್ದರಂತೆ. ಇದೂ ಕೂಡ ರಹಸ್ಯವಾಗಿಯೇ. ಆ ಸಂದರ್ಭದಲ್ಲೇ ನೀನು ನನ್ನ ಭೇಟಿ ಮಾಡಲು ಜನಜನಿತವಾಗಿ ಬರಬೇಡ, ಯಾವುದೇ ಕಾರಣಕ್ಕೂ ಶಶಿಕಲಾ ಸಹವಾಸಕ್ಕೆ ಹೋಗಬೇಡ, ರಾಜಕೀಯಕ್ಕಂತೂ ಬರಲೇಬೇಡ. ಎಲ್ಲಾದರೂ ಸುಖವಾಗಿರು ಎಂದು ಹೇಳಿದರಂತೆ.

Jayalalita-Shobhan-Babu--01

ಹಠಮಾರಿ:

ಅಮೃತಾ ಅವರು ಕೂಡ ಜಯಲಲಿತಾರಂತೆಯೇ ಹಠಮಾರಿ. ಯಾರಿಂದಲೂ ಏನನ್ನೂ ತೆಗೆದುಕೊಳ್ಳುವವರಲ್ಲ ಸ್ವಾಭಿಮಾನಿ. ಈ ಮಧ್ಯೆ ಜಯಲಲಿತಾ ಸಾವಿಗೀಡಾದಾಗ ಇದೊಂದು ಕೊಲೆ ಎಂಬುದು ಅಮೃತಾಗೆ ಅರ್ಥವಾಗಿತ್ತು. ಹಾಗಾಗಿ ಅವರು ಪ್ರಧಾನಿ ಕಚೇರಿ ಮತ್ತು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಈ ಪ್ರಕರಣ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿ ಪತ್ರವನ್ನೂ ಬರೆದಿದ್ದಾರಂತೆ. ಈ ಎಲ್ಲಾ ಅಂಶಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಬಗ್ಗೆ ಮಾಹಿತಿಗಳಿವೆ.

ಈ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ರಿಜಿಸ್ಟರ್ ಆಗಿದೆಯಂತೆ. ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಿಬಿಐ ತನಿಖೆಯಾಗಬೇಕು. ಜಯಲಲಿತಾ ಅವರ ಪಾರ್ಥಿವ ಶರೀರದ ಮರುಪರೀಕ್ಷೆಯಾಗಬೇಕು. ಡಿಎನ್‍ಎ ಪರೀಕ್ಷೆಯಾಗಬೇಕು ಎಂಬುದು ಅಮೃತಾ ಅವರ ಒತ್ತಾಯವಾಗಿದೆ. ಏಕೆಂದರೆ ಯಾರು ಏನೇ ಹೇಳಿದರೂ ನಾನೇ ಅವರ ಔರಸ ಪುತ್ರಿ ಎನ್ನುತ್ತಾರೆ ಅಮೃತಾ. ಈ ಮಧ್ಯೆ ಜಯಲಲಿತಾ ಸಾವಿನ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ತಾವು ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.   ಒಂದು ಮೂಲದ ಪ್ರಕಾರ ಜಯಲಲಿತಾ ಅವರು ತಮ್ಮ ಮಗಳು ಅಮೃತಾ ಅವರ ಹೆಸರಿನಲ್ಲಿ ಖರೀದಿಸಿರುವ ಆಸ್ತಿ, ಒಡವೆಗಳ ಬಗ್ಗೆ ದಾಖಲೆಯೂ ಇವೆ ಎನ್ನಲಾಗಿದೆ.

ಮಂಜುಳಾ ಅಲಿಯಾಸ್ ಅಮೃತಾ
ಮಂಜುಳಾ ಅಲಿಯಾಸ್ ಅಮೃತಾ

————————-

ಸಿಬಿಐ ತನಿಖೆಗೆ ಆದೇಶ:

ಕಳೆದ ಎರಡು ತಿಂಗಳಿನಿಂದ ಎಲ್ಲಾ ವಿಷಯಗಳ ಬಗ್ಗೆ ಕೇಂದ್ರ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ಗಮನಕ್ಕೆ ತರುವ ಕೆಲಸ ಮಾಡಿರುವ ಮಂಜುಳಾ/ಅಮೃತಾ ಅವರು, ಜಯಲಲಿತಾ ಅವರು ನನ್ನ ಜೈವಿಕ ತಾಯಿ ಎಂಬುದು ಅಕ್ಷರಶಃ ಸತ್ಯವಾಗಿದೆ. ಜಯಲಲಿತಾ ಅವರು ನನ್ನೊಂದಿಗೆ ಹಲವು ವರ್ಷಗಳಿಂದ ದೂರವಾಣಿಯಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಿರುವ ಬಗ್ಗೆ ದಾಖಲೆಗಳೂ ಇವೆ. ಈ ಎಲ್ಲಾ ದಾಖಲೆಗಳನ್ನು ತಮ್ಮ ಅವಗಾಹನೆಗೆ ಲಗತ್ತಿಸಿದ್ದು, ಜಯಲಲಿತಾ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಮತ್ತು ವಿಚಾರಣೆಯ ವರದಿಗಳು ನಮಗೆ ಲಭ್ಯವಾಗಬೇಕು ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಜಯಲಲಿತಾ ಅವರ ಮೃತದೇಹವನ್ನು ಹೊರತೆಗೆದು ಅದನ್ನು ಪರೀಕ್ಷಿಸಬೇಕು. ಯಾವುದೇ ಕಾರಣಕ್ಕೂ ಇದು ಹತ್ಯೆ ಎಂಬುದು ಮುಚ್ಚಿ ಹೋಗದಂತೆ ವಿಚಾರಣೆ ನಡೆಯಬೇಕು ಎಂಬುದು ಅವರ ಮನವಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಓ.ಪನ್ನೀರ್‍ಸೆಲ್ವಂ ಅವರನ್ನು ಖುದ್ದಾಗಿ ದೆಹಲಿಗೆ ಕರೆಸಿ ಸರ್ವೋಚ್ಚ ನ್ಯಾಯಾಲಯವು ಜಯಾ ಸಾವಿನ ತನಿಖೆ ನಡೆಸಲು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

—————————

ಬೇಕಿದೆ ಸೂಕ್ತ ಬಧ್ರತೆ :

ನವದೆಹಲಿ, ಆ.27- ಜಯಲಲಿತಾ ಪುತ್ರಿ ಎಂದು ಹೇಳಿಕೊಂಡಿರುವ ಮಂಜುಳಾ ಅವರಿಗೆ ಈಗ ಕರ್ನಾಟಕ ಸರ್ಕಾರ ಹಾಗೂ ತಮಿಳುನಾಡು ಸರ್ಕಾರ ಸೂಕ್ತ ಭದ್ರತೆ ನೀಡಬೇಕಾಗಿದೆ.  ಯಾವುದೇ ಸಂದರ್ಭದಲ್ಲಿ ಅವರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದ್ದು, ಈಗಾಗಲೇ ಅವರು ಆತಂಕದಲ್ಲಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ. ಈಗಾಗಲೇ ಐದಾರು ಬಾರಿ ಬೆದರಿಕೆ ಕರೆಗಳು ಮಂಜುಳಾ ಅವರಿಗೆ ಬಂದಿದ್ದು, ಹಲ್ಲೆ ಯತ್ನಗಳೂ ನಡೆದಿದೆ.
ಕರ್ನಾಟಕದಲ್ಲಿ ನೆಲೆಸಿರುವ ಮಂಜುಳಾ ಅವರಿಗೆ ತಮಿಳುನಾಡಿನ ಅಧಿಕಾರಿಗಳು ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿಲ್ಲ ಎಂದು ಮಂಜುಳಾ ಹೇಳುತ್ತಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ಸೂಕ್ತ ಭದ್ರತೆ ಒದಗಿಸುವ ಅಗತ್ಯವಿದೆ.
* ಪ್ರಧಾನಿ ನರೇಂದ್ರ ಮೋದಿಗೆ ಪತ್ರ
* ಈಗಾಗಲೇ ತಮಿಳುನಾಡಿನಲ್ಲೂ ಮಂಜುಳಾ ಬಗ್ಗೆ ಮಾಹಿತಿ ಸಿಕ್ಕಿದೆ
* ಚೆನ್ನೈಗೆ ತೆರಳಿದ ಸಂದರ್ಭದಲ್ಲಿ ಜಯಲಲಿತಾ ಅವರನ್ನೇ ನೋಡಿದಂತೆ ಜನ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ
* ಈಗಾಗಲೇ ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ
* ಶಶಿಕಲಾ, ದಿನಕರನ್, ನಟರಾಜನ್, ದೀಪಾ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು, ಸಿಆರ್‍ಪಿಸಿ164 ಅಡಿಯಲ್ಲಿ ರಹಸ್ಯ ಹೇಳಿಕೆ ದಾಖಲಿಸಿಕೊಳ್ಳಬೇಕು
* ಡಿಎನ್‍ಎ ಪರೀಕ್ಷೆ ಆಗಬೇಕು, ಸತ್ಯಾಸತ್ಯತೆ ಹೊರಗೆ ಬರಬೇಕು
* ಜಯಲಲಿತಾ ಅವರು ಮಂಜುಳಾ ಅವರ ಹೆಸರಿನಲ್ಲಿ ಚೆನ್ನೈನ ಜಿಎಸ್‍ಟಿ ಜ್ಯೂವೆಲೆರ್ಸ್‍ನಲ್ಲಿ ಎರಡು ನೆಕ್ಲೆಸ್‍ಗಳನ್ನು ಖರೀಸಿದ್ದರು
* ಹಲವು ಆಸ್ತಿಗಳನ್ನು ಜಯಲಲಿತಾ ಅವರು ಮಂಜುಳಾ ಅವರ ಹೆಸರಿಗೆ ವಿಲ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ
* ತಮಿಳುನಾಡಿನ ಅಧಿಕಾರಿಗಳಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ
* ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕೆಂಬ ಒತ್ತಾಯ


ಮಂಜುಳಾ ಅವರನ್ನು ನೋಡಿ ದಂಗಾದರು :

ನವದೆಹಲಿ, ಆ.27- ಜಯಲಲಿತಾ ಅವರ ಮರಣ ಪ್ರಮಾಣಪತ್ರ ಪಡೆಯಲು ಚೆನ್ನೈಗೆ ತೆರಳಿದ್ದಾಗ ತಮಿಳುನಾಡು ಪಾಲಿಕೆ ಅಧಿಕಾರಿಗಳು ಮಂಜುಳಾ ಅವರನ್ನು ನೋಡಿ ದಂಗಾದರು….! ಮಂಜುಳಾ ಅವರ ಜತೆಯಲ್ಲಿ ಬಂದಿದ್ದವರು ಅಧಿಕಾರಿಗಳ ಬಳಿ ಹೋಗಿ ಶೋಭಾನ್‍ಬಾಬು ಮತ್ತು ಜಯಲಲಿತಾ ಅವರ ಮರಣ ಪ್ರಮಾಣ ಪತ್ರ ಬೇಕು ಎಂದು ಕೇಳಿದಾಗ ಅಧಿಕಾರಿಗಳು ನಿರಾಕರಿಸಿದರು.

ಕೊನೆಗೆ ಮಂಜುಳಾ ಅವರೇ ಅಧಿಕಾರಿಗಳ ಬಳಿ ಹೋದಾಗ ನೀಮ್ಮನ್ನು ನೋಡಿದರೆ ಜಯಲಲಿತಾ ಅವರನ್ನೇ ನೋಡಿದ ಹಾಗೆ ಅನ್ನಿಸುತ್ತದೆ. ನೀವು ಯಾರು ಎಂದು ಕೇಳಿದಾಗ. ಆಕೆ ನೇರವಾಗಿ ಶೋಭನ್‍ಬಾಬು ಮತ್ತು ಜಯಲಲಿತಾ ಅವರ ಪುತ್ರಿ ಎಂದು ಹೇಳಿದಾಗ ಎಲ್ಲರೂ ದಿಗ್ಭ್ರಾಂತರಾದರು. ಕೂಡಲೇ ನೀವು ಇಲ್ಲಿಂದ ಹೊರಟು ಹೋಗಿ. ಯಾರಾದರು ನಿಮ್ಮನ್ನು ನೋಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಕೂಡ ಎಚ್ಚರಿಕೆ ನೀಡಿದ್ದರು. ಈ ವೇಳೆ ಅಧಿಕಾರಿಯೊಬ್ಬರು ಕೊನೆಗೂ ಇವರ ಭಾವನೆಯನ್ನು ಅರ್ಥ ಮಾಡಿಕೊಂಡು ಜಯಲಲಿತಾ ಅವರ ಮರಣ ಪ್ರಮಾಣ ಪತ್ರವನ್ನು ಆನ್‍ಲೈನ್‍ನಲ್ಲೇ ಪಡೆಯಿರಿ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ.

ಇದಾದ ನಂತರ ತಮಿಳುನಾಡು ಪಾಲಿಕೆ ಅಧಿಕಾರಿಗಳು ಜಯಲಲಿತಾ ಅವರ ಮರಣ ಪ್ರಮಾಣ ಪತ್ರವನ್ನು ಕಂಪ್ಯೂಟರ್‍ನಲ್ಲಿ ಲಾಕ್ ತೆರವುಗೊಳಿಸಿದ್ದಾರೆ.
ಮಂಜುಳಾ ಅವರು ಬಂದು ಹೋದ ನಡುವೆ ಅನೇಕರು ಜಯಲಲಿತಾ ಅವರನ್ನು ನೋಡಿದಂತೆ ಭಾಸವಾಗಿ ಅವರಿಗೆ ಕೈ ಮುಗಿದಿದ್ದಾರೆ. ಅಮ್ಮನನ್ನು ನೋಡಿದಷ್ಟೇ ಖುಷಿಯಾಯಿತು ಎಂದು ಕಣ್ಣೀರಿಟ್ಟಿದ್ದಾರೆ.

Facebook Comments

Sri Raghav

Admin