ಕೆಲಸ ಮಾಡದೆ ಸುಮ್ಮನೆ ಕೂತರೆ ನಿರ್ದಾಕ್ಷಿಣ್ಯ ಕ್ರಮ, ಹೊಸ ಪದಾಧಿಕಾರಿಗಳಿಗೆ ಗೌಡರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Devegowda-a

ಬೆಂಗಳೂರು, ಆ.28- ಹೊಸದಾಗಿ ನೇಮಕವಾದ ಪದಾಧಿಕಾರಿಗಳು ಕೆಲಸ ಮಾಡದೆ ಸುಮ್ಮನೆ ಕೂತರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗೆಲ್ಲುವ ಹಿನ್ನೆಲೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಆಯಾ ಕ್ಷೇತ್ರದ ಪಕ್ಷ ಸಂಘಟನೆಗೆ ಒತ್ತು ಕೊಡಬೇಕು. ನಾಮಕಾವಸ್ಥೆಯಂತೆ ಪದಾಧಿಕಾರಿಗಳು ಸುಮ್ಮನೆ ಕೂರಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಗೌಡರು ಗುಡಿಗಿದ್ದಾರೆ.

ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯಲು, ಮಾರುಕಟ್ಟೆ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಕುಮಾರಸ್ವಾಮಿ ಇಸ್ರೇಲ್ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ವಿಶ್ವನಾಥ್‍ಗೆ ಪ್ರಚಾರ ಸಮಿತಿ ಹೊಣೆ:

ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆಯಾಗಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ ಪಕ್ಷದ ಪ್ರಚಾರ ಸಮಿತಿ, ಐಡಿಯಾಲಾಕ್ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಸಂಸದೀಯ ಕಾರ್ಯಮಂಡಳಿಯ ಅಧ್ಯಕ್ಷರಾಗಿ ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪೂರ್, ರಾಜ್ಯ ಕಾನೂನು ಅಧ್ಯಕ್ಷರನ್ನಾಗಿ ವಕೀಲ ಎ.ಪಿ.ರಂಗನಾಥ್, ರಾಜ್ಯ ರಾಜಕೀಯ ವ್ಯವಹಾರ ಅಧ್ಯಕ್ಷರನ್ನಾಗಿ ಎಚ್.ಸಿ.ನೀರಾವರಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅರ್ಷಿಯ ಅಲಿ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಪ್ರಭಾವತಿ ಜಯರಾಂ, ಬೆಂಗಳೂರು ಸಿಟಿ ನಿರ್ವಹಣೆ ಸಮಿತಿ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

ರಾಷ್ಟ್ರೀಯ ಪಕ್ಷಗಳಿಗೆ ಸರಿಸಮನಾಗಿ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶ

ಬೆಂಗಳೂರು, ಆ.28-ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸರಿಸಮನಾಗಿ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಪದಾಧಿಕಾರಿಗಳ ಪುನರ್‍ರಚನೆ ಮಾಡಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ತುಂಬಾ ವೇಗವಾಗಿ ಚುನಾವಣೆ ತಯಾರಿ ನಡೆಸುತ್ತಿವೆ. ನಮ್ಮ ಪಕ್ಷವೂ ಕೂಡ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು.
ಪಕ್ಷದ ಹಿರಿಯ ನಾಯಕರೊಬ್ಬರ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ಏಳು ತಂಡವನ್ನು ರಚಿಸಲಾಗಿದೆ. ಆ ತಂಡದಲ್ಲಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪಾಧ್ಯಕ್ಷರು ಇರುತ್ತಾರೆ. ಪ್ರತಿ ತಂಡಕ್ಕೆ 4ರಿಂದ 6 ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಈ ತಂಡಗಳು ಕ್ಷೇತ್ರವಾರು ಪರಿಶೀಲನೆ ನಡೆಸಿ ವರಿಷ್ಠರಿಗೆ ವರದಿ ನೀಡಬೇಕು. ಪ್ರತಿ ಎರಡು ವಾರಕ್ಕೊಮ್ಮೆ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಲಾಗುತ್ತದೆ ಎಂದರು.

ತಿಂಗಳಿಗೊಮ್ಮೆ ಕೋರ್ ಕಮಿಟಿ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಈ ಹಿಂದೆ ಕಾಂಗ್ರೆಸ್‍ನವರು ಪಾಂಚಜನ್ಯ ಊದಿದ್ದರು. ನಾವು ಶಂಖ ಊದೋದಿಲ್ಲ. ಆರ್ಥಿಕವಾಗಿ ದುರ್ಬಲವಾಗಿದ್ದರೂ ಹೋರಾಟದಲ್ಲಿ ಕೆಚ್ಚಿದೆ. ಹೋರಾಟ ಮಾಡುವ ಧೈರ್ಯವಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ಮೇಲೆ ಜಂತಕಲ್ ಮೈನಿಂಗ್ ಆರೋಪ ಹೊರಿಸಿದ್ದಾರೆ. ತಮ್ಮ ಮೇಲೆ ಯಾವುದೇ ಆರೋಪವಿಲ್ಲ. ಒಂದು ವೇಳೆ ಆರೋಪ ಮಾಡಿದರೂ ಜುಬ್ಬ, ಪಂಚೆ ಎಷ್ಟಿರಬಹುದು ಎಂದು ಆರೋಪ ಮಾಡಬೇಕಷ್ಟೆ ಎಂದರು.

ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯ ಕಾರ್ಯಾಧ್ಯಕ್ಷ, ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೀಯ ಮಂಡಳಿ ಯಥಾಸ್ಥಿತಿ ಮುಂದುವರೆಸಲಾಗುತ್ತದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಇಸ್ರೇಲ್ ಪ್ರವಾಸಕ್ಕೆ ಹೋಗುವ ಮುನ್ನ ಪಕ್ಷದ ಮುಖಂಡರು ಸಭೆ ಸೇರಿ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಪಟ್ಟಿಯಲ್ಲಿ ಸಾಮಾಜಿಕ , ನ್ಯಾಯ, ಪ್ರಾದೇಶಿಕ, ಮಹಿಳಾ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಪ್ರಾತಿನಿಧ್ಯ ನೀಡಲಾಗಿದೆ.

ಎಸ್ಸಿ-ಎಸ್ಟಿ ಸಮಾವೇಶ:
ಸೆ.22ರಂದು ಬೆಂಗಳೂರಿನಲ್ಲಿ ಎಸ್ಸಿ-ಎಸ್ಟಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಬೃಹತ್ ಪ್ರಮಾಣದಲ್ಲಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪ್ರತಿ ಕ್ಷೇತ್ರದ ಮಾಹಿತಿ ಪಡೆದಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Facebook Comments

Sri Raghav

Admin