ನ.1ರಂದು ಬಿಜೆಪಿ ಪರಿವರ್ತನಾ ಯಾತ್ರೆಗೆ ಮೋದಿ ಚಾಲನೆ, ಮೊಳಗಲಿದೆ ಚುನಾವಣಾ ರಣಕಹಳೆ

ಈ ಸುದ್ದಿಯನ್ನು ಶೇರ್ ಮಾಡಿ

Modi-Yadiyurappa-BJP--01

ಬೆಂಗಳೂರು, ಆ.28- ರಾಜ್ಯ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಗೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಲಿದ್ದಾರೆ. ಈ ಮೂಲಕ 2018ರ ವಿಧಾನಸಭೆ ಚುನಾವಣೆಗೆ ಕಮಲ ಪಡೆ ನವೆಂಬರ್ 1ರಂದು ಪ್ರಧಾನಿ ನರೇಂದ್ರಮೋದಿಯಿಂದ ಪರಿವರ್ತನಾ ಯಾತ್ರೆಗೆ ಚಾಲನೆ ನೀಡುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಲಿದೆ.

ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಬೆಂಗಳೂರು ಅದೃಷ್ಟದ ತಾಣವೆಂದು ಬಲವಾಗಿ ನಂಬಿಕೊಂಡಿದ್ದಾರೆ. ಈ ಹಿಂದೆ ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾದ ವೇಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಸಲಾಗಿತ್ತು. ಅಂದು ರಾಜ್ಯದ ವಿವಿಧೆಡೆ ಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಅರಮನೆ ಮೈದಾನದಲ್ಲಿ ಜಮಾಯಿಸಿದ್ದರು. ಮುಂದೆ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದದ್ದು ಇತಿಹಾಸ.

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತಿರುವ ಬಿಜೆಪಿ ಪರಿವರ್ತನಾ ರಥಯಾತ್ರೆಗೆ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜಂಟಿ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಶನಿವಾರ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಅಮಿತ್ ಷಾ ನಿವಾಸದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.

ಇದಕ್ಕೂ ಮೊದಲು ಅರಣ್ಯ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ಮಂಗಳೂರು ಚಲೊ ಹಮ್ಮಿಕೊಂಡಿದೆ. ಸೆಪ್ಟೆಂಬರ್ 7ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ಏರ್ಪಡಿಸಿ ಬಿಜೆಪಿ ಶಕ್ತಿ ಪ್ರದರ್ಶಿಸಲು ಮುಂದಾಗಿದೆ. ಬೃಹತ್ ಸಾರ್ವಜನಿಕ ಸಮಾರಂಭ: ತದನಂತರ ನ.1ರಂದು ಬೆಂಗಳೂರಿನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿಸಿ ಪರಿವರ್ತನಾ ಯಾತ್ರೆಯನ್ನು ರಾಜ್ಯಾದ್ಯಂತ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಸಲು ಪಕ್ಷ ಉದ್ದೇಶಿಸಿದೆ.

ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಬಿಜೆಪಿಯ ಪ್ರಮುಖ ಪ್ರಚಾರಕರಾದ ಮೋದಿ ಮತ್ತು ಅಮಿತ್ ಷಾ ಅವರನ್ನು ಆಹ್ವಾನಿಸಲು ರಾಜ್ಯ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಖುದ್ದು ಪ್ರಧಾನಿಯೇ ಬಂದು ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದರೆ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಳ್ಳುತ್ತದೆ ಎಂಬುದು ರಾಜ್ಯ ನಾಯಕರ ಆಲೋಚನೆ. ಕಾರ್ಯಕರ್ತರನ್ನು ಸೂಜಿಗಲ್ಲಿನಂತೆ ಸೆಳೆಯುವ ಆಕರ್ಷಣೆ ಇರುವುದು ಮೋದಿಗೆ ಮಾತ್ರ ಎಂಬುದನ್ನು ಅರಿತಿದ್ದಾರೆ.

ಸುಮಾರು 2 ತಿಂಗಳು ರಾಜ್ಯಾದ್ಯಂತ ಪರಿವರ್ತನಾ ಯಾತ್ರೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂಚರಿಸಲಿದೆ. ರಾಜ್ಯದ ಎಲ್ಲ ನಾಯಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಆರ್‍ಎಸ್‍ಎಸ್ ನಾಯಕರ ಕಗ್ಗೊಲೆ, ಐಟಿ ಅಧಿಕಾರಿಗಳ ದಾಳಿಗೊಳಗಾಗಿರುವ ಸಚಿವರ ರಾಜೀನಾಮೆ, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದೆ.

ಪ್ರಧಾನಿ ಆಗಮಿಸುವ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿ ದೃಢಪಟ್ಟಿಲ್ಲವಾದರೂ ರಾಜ್ಯ ನಾಯಕರ ಕೋರಿಕೆಯಂತೆ ಮೋದಿಯನ್ನು ಮನವೊಲಿಸುವುದಾಗಿ ಅಮಿತ್ ಷಾ ಆಶ್ವಾಸನೆ ನೀಡಿದ್ದಾರೆ.  ಮೋದಿ ಆಗಮಿಸಿದರೆ ಪಕ್ಷಕ್ಕೆ ಆನೆಬಲ ಬರಲಿದೆ. ಹೀಗಾಗಿ ಅವರನ್ನು ಪರಿವರ್ತನಾ ಯಾತ್ರೆಗೆ ಆಹ್ವಾನಿಸಲು ಖುದ್ದು ಯಡಿಯೂರಪ್ಪ ಮುಂದಾಗಿದ್ದಾರೆ.

Facebook Comments

Sri Raghav

Admin