ಬಿಬಿಎಂಪಿ ಮೇಯರ್ ‘ಮ್ಯೂಸಿಕಲ್ ಚೇರ್’ ಮೇಲೆ ಕೂರಲು ಮೂರೂ ಪಕ್ಷಗಳ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು, ಆ.28-ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮೇಯರ್ ಕುರ್ಚಿ ಈಗ ಒಂದು ರೀತಿಯಲ್ಲಿ ಮ್ಯೂಸಿಕಲ್ ಛೇರ್ ಆಗಿ ಮಾರ್ಪಟ್ಟಂತಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳವರು ಮೇಯರ್ ಗಾದಿ ಮೇಲೆ ಕಣ್ಣಿಟ್ಟು ಕಸರತ್ತು ಮುಂದುವರೆಸಿರುವ ಹಿನ್ನೆಲೆಯಲ್ಲಿ ಈ ಕುರ್ಚಿ ಯಾರಿಗೆ ದಕ್ಕುತ್ತದೆ ಎಂಬುದನ್ನು ಕಾದುನೋಡಬೇಕು. ಹಾಲಿ ಇರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆದರೆ ಕಾಂಗ್ರೆಸ್‍ನಿಂದ ಸಂಪತ್‍ರಾಜ್,ಗೋವಿಂದರಾಜ್ ಅಥವಾ ರಾಮಚಂದ್ರ ಈ ಮೂವರಲ್ಲಿ ಒಬ್ಬರು ಮೇಯರ್ ಆಗುವ ಸಾಧ್ಯತೆ ಇದೆ.

ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಕೊಂಚ ಬಿರುಕು ಬಿಟ್ಟಂತೆ ಕಂಡುಬರುತ್ತಿದೆ. ಕೊಟ್ಟ ಮಾತಿನಂತೆ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿಲ್ಲ, ಮೈತ್ರಿ ಧರ್ಮಪಾಲನೆ ಮಾಡುತ್ತಿಲ್ಲ. ಸ್ಥಾಯಿ ಸಮಿತಿಗಳಲ್ಲಿ ಅಧಿಕಾರದ ಅವಕಾಶ ಕೊಟ್ಟು ಎಲ್ಲಾ ಅಧಿಕಾರವನ್ನು ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ರವಾನಿಸಿಕೊಂಡು ಹೈಪವರ್ ಕಮಿಟಿ ಮೂಲಕ ಸರ್ಕಾರ ಅಧಿಕಾರ ಚಲಾವಣೆ ಮಾಡುತ್ತಿದೆ. ಯಾವ ಪುರುಷಾರ್ಥಕ್ಕೆ ನಾವು ಸ್ಥಾಯಿಸಮಿತಿ ಅಧ್ಯಕ್ಷರಾಗಿರಬೇಕು. ಮೈತ್ರಿ ಇದ್ದರೇನು, ಬಿಟ್ಟರೇನು? ಎಂಬ ಮನಸ್ಥಿತಿಗೆ ಬಂದಿದ್ದಾರೆ ಎನ್ನಲಾಗಿದೆ.

ಹಾಗೆಂದು ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಲು ತಯಾರಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಜೊತೆ ಹೋದರೆ ಕೆಟ್ಟ ಅಭಿಪ್ರಾಯ ಬರುತ್ತದೆ. ಕೋಮುವಾದಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡರು ಎಂಬ ಆರೋಪ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಮೇಯರ್ ಹುದ್ದೆ ನಮಗೇ ಬೇಕು ಎಂದು ಕೇಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಜೆಡಿಎಸ್‍ನವರಿಗೆ ಮೇಯರ್ ಹುದ್ದೆ ಸಿಕ್ಕಿದರೆ ಮಾರಪ್ಪನಪಾಳ್ಯದ ಸದಸ್ಯರಾದ ಮಹದೇವ್, ಶಕ್ತಿಗಣಪತಿ ನಗರದ ಗಂಗಮ್ಮ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಲಭಿಸುತ್ತದೆ. ಬಿಬಿಎಂಪಿಯಲ್ಲಿ 101 ಸದಸ್ಯ ಬಲದ ಬಿಜೆಪಿ ಈ ಒಡಕಿನ ಲಾಭವನ್ನು ಈ ಸಂದರ್ಭದಲ್ಲಿ ಪಡೆಯಲು ಮುಂದಾಗುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದ್ದರೂ ಮೇಯರ್‍ಗೆ ಮತ ಚಲಾಯಿಸುವ ಅಧಿಕಾರ ಹೊಂದಿರುವ ಎಂಟು ಎಂಎಲ್‍ಸಿಗಳ ಮೇಲೆ ಪ್ರವಾಸ ಭತ್ಯೆ ದುರ್ಬಳಕೆ ಆರೋಪವಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರವನ್ನೂ ಸಹ ಬರೆದಿದೆ. ಈಗಾಗಲೇ ವಿಧಾನಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ್, ಅಪ್ಪಾಜಿಗೌಡ ಸೇರಿದಂತೆ ಐದು ಜನ ಫಾರಂ ನಂ.7ನ್ನು ಕೊಟ್ಟು ತಮ್ಮ ವಿಳಾಸವನ್ನು ಬದಲಾಯಿಸಿಕೊಂಡಿದ್ದಾರೆ.

ಉಳಿದ ಎಂಎಲ್‍ಸಿಗಳು ತಾಂತ್ರಿಕ ಅಡಚಣೆಯಾದರೆ ನಮ್ಮ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಸಿ.ಎಂ.ಇಬ್ರಾಹಿಂ ಮತ್ತು ಪಿ.ಆರ್.ರಮೇಶ್ ಅವರು ಮತ ಚಲಾಯಿಸಬಹುದಾಗಿದೆ. ಆದರೆ ತಮ್ಮ ಸ್ಥಾನಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಹಿನ್ನೆಲೆಯಲ್ಲಿ ಈ ಉಸಾಬರಿ ನಮಗೇಕೆ ಎಂದು ಹಲವರು ಕೈಕೊಟ್ಟರೆ ಬಿಬಿಎಂಪಿಯ ಮೇಯರ್ ಗದ್ದುಗೆ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಪಾಲಾದರೂ ಆಶ್ಚರ್ಯವಿಲ್ಲ.
ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಗದ್ದುಗೆ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದ ಬಿಜೆಪಿ ಈ ಬಾರಿ ನಿರಾಯಾಸವಾಗಿ ಬಿಬಿಎಂಪಿ ಕುರ್ಚಿ ದೊರೆಯುವುದೇ….?

ಒಟ್ಟಾರೆ ಮುಂದಿನ ತಿಂಗಳ ಅಂತ್ಯದಲ್ಲಿ ಬಿಬಿಎಂಪಿ ಅಧಿಕಾರಕ್ಕಾಗಿ ನಡೆಯುವ ತೆರೆಮರೆಯ ಕಸರತ್ತುಗಳು ಈಗಾಗಲೇ ಆರಂಭವಾಗಿವೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಮೈತ್ರಿ ಮುಂದುವರೆಸಿ ಅಧಿಕಾರದಲ್ಲಿರುವ ಪ್ರಯತ್ನ ಮುಂದುವರೆಸಿದರೆ, ಜೆಡಿಎಸ್ ಅಧಿಕಾರಕ್ಕೇರುವ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ನಿರಾಯಾಸವಾಗಿ ಅಧಿಕಾರ ದಕ್ಕುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಒಟ್ಟಾರೆ ಮೇಯರ್ ಕುರ್ಚಿ ಮ್ಯೂಸಿಕಲ್ ಛೇರ್‍ನಂತಾಗಿದ್ದು, ಯಾರು ಕೂರುತ್ತಾರೋ ಕಾದುನೋಡಬೇಕು.

Facebook Comments

Sri Raghav

Admin