ಯಾರು ಎಷ್ಟೇ ಟೀಕಿಸಿದರೂ ದೀನದಲಿತರಿಗಾಗಿ ನನ್ನ ಹೋರಾಟ ನಿಲ್ಲಲ್ಲ : ಬಿಎಸ್ವೈ

Yadiyurappa--Dalit

ಬೆಂಗಳೂರು, ಆ.28-ನನ್ನನ್ನು ಯಾರು ಎಷ್ಟೇ ಟೀಕೆ ಮಾಡಿದರೂ ದಲಿತರು, ಶೋಷಿತರು, ಹಿಂದುಳಿದವರು, ದೀನದಲಿತರ ಮೇಲಿನ ಕಾಳಜಿ ಬಗ್ಗೆ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರೋಧಿಗಳಿಗೆ ತಿರುಗೇಟು ನೀಡಿದರು. ತಮ್ಮ ನಿವಾಸದಲ್ಲಿ ದಲಿತರಿಗಾಗಿ ಹಮ್ಮಿಕೊಂಡಿದ್ದ ಭೋಜನಕೂಟ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದ ಆಸೆಗಾಗಿ ನಾನು ದಲಿತರ ಮನೆಗಳಲ್ಲಿ ಊಟ, ತಿಂಡಿ ಸೇವನೆ ಮಾಡಲಿಲ್ಲ. ಆ ಸಮುದಾಯದ ಬಗ್ಗೆ ಉತ್ತಮ ಆಶಯ ಹೊಂದಿರುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆಡಳಿತ ಪಕ್ಷದ ಅನೇಕ ಮುಖಂಡರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಯಾರು, ಏನೇ ಟೀಕೆ ಮಾಡಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಹೇಳಿದ ಮೇಲೆ ಕೆಲವರು ದಲಿತರ ಮನೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನಾನು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಈ ಸಮುದಾಯಕ್ಕೆ ಏನೇನು ಕೊಟ್ಟಿದ್ದೇನೆ ಎಂದು ತಿಳಿದು ಮಾತನಾಡಬೇಕು ಎಂದು ಹರಿಹಾಯ್ದರು. ಬಡ ಹೆಣ್ಣು ಮಕ್ಕಳಿಗೆ ಉಂಟಾಗುತ್ತಿರುವ ಶೋಷಣೆ ತಪ್ಪಿಸುವ ಉದ್ದೇಶದಿಂದ ಭಾಗ್ಯಲಕ್ಷ್ಮಿ ಯೋಜನೆ ಜಾರಿ ಗೊಳಿಸಿದೆ. ಈ ಯೋಜನೆಯಿಂದ ಅನೇಕ ತಾಯಂದಿರಿಗೆ ಅನುಕೂಲವಾಗಿದೆ. ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದ ಕೆಲವರಿಗೆ ತಮಗೆ ಸಿಗುತ್ತಿರುವ ಬೆಂಬಲವನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಕಿಡಿಕಾರಿದರು.

ಈಗಲೂ ಅನೇಕ ದಲಿತರ ಮನೆಗಳಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳಿಲ್ಲ. ಅಂತಹ ಸಂದರ್ಭದಲ್ಲೂ ನನ್ನನ್ನು ಕರೆದು ಸತ್ಕರಿಸಿದ್ದಾರೆ. ಆದ್ದರಿಂದ ನನಗೆ ಅಧಿಕಾರ ಇರಲಿ, ಬಿಡಲಿ ಅವರ ಏಳಿಗೆಗಾಗಿ ನಾನು ಶ್ರಮಿಸುವುದಾಗಿ ವಾಗ್ದಾನ ಮಾಡಿದರು.

ಎಲ್ಲಿದೆ ಸಾಮಾಜಿಕ ನ್ಯಾಯ:

ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಕೆಲವರು ದಲಿತರ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ನಾನೇ ಹೆಣ್ಣುಮಕ್ಕಳನ್ನು ಕೊಡುತ್ತೇನೆ ಮದುವೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ದಲಿತರ ಬಗ್ಗೆ ಬಾಯಿ ಮಾತಿಗೆ ಕಾಳಜಿ ತೋರಿಸುವವರು ಅದೇ ಸಮುದಾಯಕ್ಕೆ ಸೇರಿದ ರತ್ನಪ್ರಭಾ ಅವರನ್ನು ಮುಖ್ಯಕಾರ್ಯದರ್ಶಿಗೆ ಪರಿಗಣಿಸಲಿಲ್ಲ. ರಾಜಕಾರಣ ಬಂದಾಗ ಮಾತ್ರ ದಲಿತರು ನೆನಪಾಗುತ್ತಾರೆ ಎಂದರು.

ದಲಿತರ ಬಗ್ಗೆ ಬಾಯಿ ಮಾತಿನಲ್ಲಿ ಪ್ರೀತಿ ತೋರಿಸಬಾರದು. ಈಗಲೂ ಲಕ್ಷಾಂತರ ಕುಟುಂಬಗಳಿಗೆ ವಾಸಿಸಲು ಮನೆಯಿಲ್ಲ. ಸಾವಿರಾರು ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವರೆಲ್ಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದ ಸ್ವಾಮೀಜಿ, ದಲಿತರನ್ನು ಯಡಿಯೂರಪ್ಪನವರು ಮನೆಗೆ ಕರೆದು ಭೋಜನ ಕೂಟ ಏರ್ಪಡಿಸಿರುವುದು ಹೊಸ ಮನ್ವಂತರಕ್ಕೆ ದಾರಿಯಾಗಲಿದೆ ಎಂದರು.

Facebook Comments

Sri Raghav

Admin