ರಸ್ತೆಗಳಲ್ಲಿನ ಕಸ ಎತ್ತದ ಬಿಬಿಎಂಪಿ ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಸದಸ್ಯರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protst--BJP-01

ಬೆಂಗಳೂರು, ಆ.28- ಕಳೆದ ಎರಡು-ಮೂರು ದಿನಗಳಿಂದ ರಸ್ತೆಗಳಲ್ಲಿ ಕಸ ಬಿದ್ದಿದ್ದರೂ ಇದನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ಆಡಳಿತ ಪಕ್ಷದವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಕೌನ್ಸಿಲ್ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಿದರು. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಸ ಹೆಚ್ಚಾಗಿದೆ. ಎರಡು-ಮೂರು ದಿನಗಳಿಂದ ಕಸ ವಿಲೇವಾರಿಯಾಗಿಲ್ಲ. ಸುಮಾರು 5ರಿಂದ 8ಸಾವಿರ ಟನ್ ಕಸ ಸೇರ್ಪಡೆಯಾಗಿದೆ. ಈಗಾಗಲೇ ನಗರದಲ್ಲಿ ಮಾರಣಾಂತಿಕ ರೋಗಗಳು ಕಾಣಿಸಿಕೊಂಡಿವೆ. ಇನ್ನೂ ಕಸ ವಿಲೇವಾರಿ ಆಗದೇ ಹೋದರೆ ರೋಗಗಳು ಉಲ್ಬಣಗೊಳ್ಳುತ್ತವೆ ಎಂದು ಬಿಜೆಪಿ ಸದಸ್ಯರು ಆತಂಕ ವ್ಯಕ್ತಪಡಿಸಿದರು.

ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, ಹೊಸ ಕಸದ ಗುತ್ತಿಗೆದಾರರನ್ನು ನೇಮಕ ಮಾಡುತ್ತೀರೋ ಅಥವಾ ನೀವೇ ಕಸ ವಿಲೇವಾರಿ ಮಾಡಿಸುತ್ತೀರೋ ನಮಗೆ ಗೊತ್ತಿಲ್ಲ. ಕೂಡಲೇ ಕಸ ವಿಲೇವಾರಿ ಆಗಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

Protst--BJP-02

ಗುತ್ತಿಗೆದಾರರ ಪ್ರತಿಭಟನೆ:

ಇತ್ತ ಬಿಜೆಪಿಯವರು ಪ್ರತಿಭಟನೆ ನಡೆಸಿದರೆ, ಅತ್ತ ಕಸದ ಗುತ್ತಿಗೆದಾರರು ಕೂಡ ಮೌನ ಪ್ರತಿಭಟನೆ ನಡೆಸಿ ಹೊಸ ನಿಯಮದಿಂದಾಗಿ ನೂರಾರು ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ. ಕೂಡಲೇ ಹೊಸ ನಿಯಮವನ್ನು ಕೈ ಬಿಟ್ಟು ನಿಯಮ ಬದ್ಧವಾಗಿ ಕಸ ತೆಗೆಯಲು ಟೆಂಡರ್ ಕರೆಯಬೇಕೆಂದು ಆಗ್ರಹಿಸಿದರು.
ಸರ್ಕಾರದ ಹೊಸ ನಿಯಮದಿಂದಾಗಿ ಪೌರ ಕಾರ್ಮಿಕರ ಸಂಖ್ಯೆ ಕಡಿತವಾಗಿದೆ. ಪ್ರತಿ 700 ಮಂದಿಗೆ ಒಬ್ಬರಂತೆ ಪೌರಕಾರ್ಮಿಕರ ನೇಮಕಕ್ಕೆ ಸರ್ಕಾರ ಚಿಂತನೆ ಮಾಡಿದೆ.

ಈ ನಿಯಮ ಎಲ್ಲಾ ನಗರಸಭೆ ಹಾಗೂ ಮಹಾನಗರ ಪಾಲಿಕೆಗೂ ಅನ್ವಯವಾಗಲಿದೆ. ಸರ್ಕಾರದ ಈ ಹೊಸ ನಿಯಮದಿಂದ ವಾರ್ಡ್‍ಗಳಲ್ಲಿ ಕಾರ್ಮಿಕರ ಸಂಖ್ಯೆ ಕುಸಿಯಲಿದೆ. ಪ್ರತೀ ವಾರ್ಡ್‍ನಲ್ಲಿ 150ರಿಂದ 160 ಪೌರ ಕಾರ್ಮಿಕರ ಸಂಖ್ಯೆ ಇದ್ದರೆ, ಹೊಸ ನಿಯಮದಿಂದ 70ರಿಂದ 80ಕ್ಕೆ ಇಳಿಯಲಿದೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಕಸದ ಪ್ರಮಾಣ ಹೆಚ್ಚಾಗಿದ್ದು, ಸುಮಾರು 5ರಿಂದ 8ಸಾವಿರ ಟನ್ ಕಸ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.

ಗುತ್ತಿಗೆದಾರರ ಅಸಮಾಧಾನ:

2004ರಿಂದ 2017 ಜೂನ್‍ವರೆಗೆ 200ಕೋಟಿ ರೂ. ಸರ್ವೀಸ್ ಟ್ಯಾಕ್ಸ್ ಕಟ್ಟಬೇಕಿದೆ. ಆದರೆ, ಈ ಹಣವನ್ನು ಗುತ್ತಿಗೆದಾರರು ಬಿಬಿಎಂಪಿ ಕಡೆಯಿಂದ ವಸೂಲಿ ಮಾಡಿಲ್ಲ. ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗುತ್ತಿಗೆದಾರ ಬಾಲಸುಬ್ರಹ್ಮಣ್ಯ ಅಸಮಾಧಾನ ತೋಡಿಕೊಂಡರು.ಕಸ ಸರಬರಾಜು, ಡಿಪಾರ್ಟ್‍ಮೆಂಟ್ ವರ್ಕ್ ಎಂಬ ಕಾರ್ಯಾದೇಶದಿಂದ ಇಂತಹ ಸಮಸ್ಯೆ ಉಂಟಾಗಿದೆ. ಮೊದಲು ಘನತ್ಯಾಜ್ಯ ನಿರ್ವಹಣೆಗೆ ಸೇವಾ ತೆರಿಗೆ ಇರಲಿಲ್ಲ. ಆದರೆ, ಬಿಬಿಎಂಪಿ ಸರಬರಾಜು ಆದೇಶ ನೀಡಿರುವುದರಿಂದ ನಮಗೆ ಹೆಚ್ಚಿನ ಹೊರೆಯಾಗಿದೆ ಎಂದು ಹೇಳಿದರು.

ಕಸ ಗುತ್ತಿಗೆದಾರರಿಗೆ ನೋಟಿಸ್ ಕೊಡುವುದು, ಅಕೌಂಟ್ ಸೀಸ್ ಮಾಡುವ ತೊಂದರೆ ಎದುರಾಗಿದೆ. ಈ ಸಂಬಂಧ ಆಯುಕ್ತರ ಜತೆ ಮಾತುಕತೆ ನಡೆಸಲು ತೀರ್ಮಾನಿಸಿದ್ದೇವೆ. ಬಳಿಕ ಕಸ ವಿಲೇವಾರಿ ಮಾಡಬೇಕೋ, ಬೇಡವೋ ಎಂಬ ತೀರ್ಮಾನವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕೆಲಸ ಸ್ಥಗಿತಗೊಳಿಸಿಲ್ಲ:

ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿಲ್ಲ ಎಂದು ಪೌರ ಕಾರ್ಮಿಕ ಸಂಘದ ಪ್ರಧಾನಕಾರ್ಯದರ್ಶಿ ಎನ್.ಆಂಜನೇಯ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರೇ ಒತ್ತಾಯ ಪೂರ್ವಕವಾಗಿ ಪೌರಕಾರ್ಮಿಕರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಸಂಬಳ ಕೊಡುತ್ತೇವೆ. ಆದರೆ, ನೀವು ಕೆಲಸ ಮಾಡಬೇಡಿ ಎಂದು ಒತ್ತಡ ಹೇರುತ್ತಿದ್ದಾರೆ. ಈ ವಿಷಯವನ್ನು ನಾವು ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದು ಅವರು ಹೇಳಿದರು. ಒಟ್ಟಾರೆ ನಗರದಲ್ಲಿ ಮತ್ತೆ ಕಸದ ಸಮಸ್ಯೆ ಬಿಗಡಾಯಿಸುತ್ತಿರುವುದಂತು ಸತ್ಯ.

Facebook Comments

Sri Raghav

Admin